ಕ್ಷೇತ್ರದ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಮತ್ತು ವಸತಿ ಪ್ರದೇಶಗಳಿಗೆ ಸುಸಜ್ಜಿತ ರಸ್ತೆ ಸಂಪರ್ಕ ಕಲ್ಪಿಸುವ ಮೂಲಕ ಭಕ್ತಾದಿಗಳಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಅನುಕೂಲ ಕಲ್ಪಿಸುವುದು ರಾಜ್ಯದ ಕಾಂಗ್ರೆಸ್‌ ಸರ್ಕಾರದ ಸಂಕಲ್ಪವಾಗಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ಕ್ಷೇತ್ರದ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಮತ್ತು ವಸತಿ ಪ್ರದೇಶಗಳಿಗೆ ಸುಸಜ್ಜಿತ ರಸ್ತೆ ಸಂಪರ್ಕ ಕಲ್ಪಿಸುವ ಮೂಲಕ ಭಕ್ತಾದಿಗಳಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಅನುಕೂಲ ಕಲ್ಪಿಸುವುದು ರಾಜ್ಯದ ಕಾಂಗ್ರೆಸ್‌ ಸರ್ಕಾರದ ಸಂಕಲ್ಪವಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಸೋಮವಾರ ತಾಲೂಕಿನ ಇಸಳೂರು ಗ್ರಾಪಂ ವ್ಯಾಪ್ತಿಯ ನಾರಾಯಣಗುರು ನಗರದ ಅಭಯ ವಿನಾಯಕ ದೇವಸ್ಥಾನದ ಎದುರಿನ ರಸ್ತೆ ಸುಧಾರಣೆಗೆ ₹50 ಲಕ್ಷ ವೆಚ್ಚದ ಕಾಮಗಾರಿಗೆ, ಜಿಪಗಿ ಗ್ರಾಮದ ಫಾರೆಸ್ಟ್ ಕಾಲನಿಯ ಸುಮಾರು ₹20 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ, ಶಿರಸಿ-ಹುಬ್ಬಳ್ಳಿ ಮುಖ್ಯ ರಸ್ತೆಯಿಂದ ಖಾನನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಣೆಯ ₹25 ಲಕ್ಷ ವೆಚ್ಚದ ಕಾಮಗಾರಿ, ಮಸರುಗುಳಿ ಊರಿಗೆ ಹೋಗುವ ರಸ್ತೆ ಸುಧಾರಣೆ ಕಾಮಗಾರಿ, ಜಂಬೆಕೊಪ್ಪದಿಂದ ಕಂಠದ ಮನೆವರೆಗೆ ನಿರ್ಮಾಣವಾಗಲಿರುವ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ನಾರಾಯಣಗುರು ನಗರದ ಅಭಯ ವಿನಾಯಕ ದೇವಸ್ಥಾನಕ್ಕೆ ಪ್ರತಿದಿನ ನೂರಾರು ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಎದುರಿನ ರಸ್ತೆಯು ಹದಗೆಟ್ಟಿದ್ದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಈ ಕಾಮಗಾರಿಯು ಸ್ಥಳೀಯರ ಓಡಾಟಕ್ಕೆ ಬಹಳ ಅನುಕೂಲವಾಗಲಿದೆ. ಕಾಮಗಾರಿಯು ಅತ್ಯಂತ ಗುಣಮಟ್ಟದಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ರಸ್ತೆ ನಿರ್ಮಾಣದಲ್ಲಿ ಲೋಪ-ದೋಷಗಳಾಗದಂತೆ ಸಾರ್ವಜನಿಕರೂ ನಿಗಾ ವಹಿಸಬೇಕು ಎಂದು ಹೇಳಿದರು.

ನಾರಾಯಣಗುರು ನಗರದ ನಿವಾಸಿಗಳು ಈ ರಸ್ತೆ ಸುಧಾರಣೆಗಾಗಿ ಸಲ್ಲಿಸಿದ್ದ ಮನವಿಗೆ ತಕ್ಷಣ ಸ್ಪಂದಿಸಿ, ಅಗತ್ಯ ಅನುದಾನ ಬಿಡುಗಡೆ ಮಾಡಿರುವುದಾಗಿ ತಿಳಿಸಿ, ಮುಂದಿನ ದಿನಗಳಲ್ಲಿ ಇಸಳೂರು ಪಂಚಾಯಿತಿ ವ್ಯಾಪ್ತಿಯ ಉಳಿದ ರಸ್ತೆಗಳನ್ನೂ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ನಗರ ಮತ್ತು ಗ್ರಾಮೀಣ ಭಾಗದ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಫಾರೆಸ್ಟ್ ಕಾಲನಿ ಭಾಗದ ಜನರ ದೀರ್ಘಕಾಲದ ಬೇಡಿಕೆಯಾಗಿದ್ದ ಈ ರಸ್ತೆ ಅಭಿವೃದ್ಧಿಯಿಂದ ಸ್ಥಳೀಯರ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಸುಸಜ್ಜಿತ ಸಂಪರ್ಕ ಕಲ್ಪಿಸುವುದು ಮತ್ತು ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು ನನ್ನ ಪ್ರಮುಖ ಗುರಿಯಾಗಿದೆ. ಸಾರ್ವಜನಿಕರ ಹಣದ ಪ್ರತಿ ಪೈಸೆಗೂ ಮೌಲ್ಯವಿರಬೇಕು. ಕಾಮಗಾರಿಯಲ್ಲಿ ಯಾವುದೇ ರೀತಿಯ ರಾಜೀ ಮಾಡಿಕೊಳ್ಳದೆ ಅತ್ಯಂತ ಗುಣಮಟ್ಟದ ರಸ್ತೆಯನ್ನು ನಿರ್ಮಿಸಬೇಕು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ಗುತ್ತಿಗೆದಾರರಿಗೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಾಮಗಾರಿಯ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವಂತಿಲ್ಲ. ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಶಾಶ್ವತವಾಗಿ ಬಾಳಿಕೆ ಬರುವಂತಹ ರಸ್ತೆ ನಿರ್ಮಿಸಬೇಕು. ಗ್ರಾಮಸ್ಥರು ಕಾಮಗಾರಿಯ ಮೇಲೆ ನಿಗಾ ಇರಿಸಬೇಕು. ರಾಜ್ಯ ಸರ್ಕಾರದಿಂದ ಮಂಜೂರಾದ ಅನುದಾನವನ್ನು ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಬಳಸಲಾಗುತ್ತಿದೆ. ಶಿಕ್ಷಣ, ಆರೋಗ್ಯ ಮತ್ತು ರಸ್ತೆ ಸೌಕರ್ಯಗಳೇ ನಮ್ಮ ಪ್ರಮುಖ ಗುರಿ. ಒಂದು ಗ್ರಾಮ ಅಭಿವೃದ್ಧಿಯಾಗಬೇಕಾದರೆ ಅಲ್ಲಿನ ರಸ್ತೆಗಳು ಉತ್ತಮವಾಗಿರಬೇಕು. ಇಸಳೂರು ಭಾಗದ ಜನರ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಅಭಿವೃದ್ಧಿ ಕೆಲಸಗಳ ಮೂಲಕ ಉತ್ತರ ನೀಡುತ್ತಿದ್ದೇನೆ. ಸರ್ಕಾರಿ ಕಾಮಗಾರಿಗಳು ಸುಗಮವಾಗಿ ನಡೆಯಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ಗ್ರಾಮಸ್ಥರು ಕಾಮಗಾರಿಯ ಗುಣಮಟ್ಟವನ್ನು ಗಮನಿಸಿ ಕೆಲಸ ಬೇಗ ಪೂರ್ಣಗೊಳ್ಳಲು ಸಹಕರಿಸಬೇಕು ಎಂದರು.

ಇಸಳೂರು ಗ್ರಾಪಂ ಅಧ್ಯಕ್ಷ ಲಕ್ಷ್ಮೀ ಶೆಟ್ಟರ, ಸದಸ್ಯ ವಿವೇಕ ಪೂಜಾರಿ, ಇಲಾಖೆಯ ಅಧಿಕಾರಿಗಳು ಮತ್ತಿತರರು ಇದ್ದರು.