ಗ್ಯಾರಂಟಿ ಯೋಜನೆಗಳು ಮುಂದುವರೆಯಲಿದೆ, 2028ಕ್ಕೂ ನಮ್ಮದೇ ಸರ್ಕಾರ ಬರಲಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗ್ಯಾರಂಟಿ ಯೋಜನೆಗಳು ಮುಂದುವರೆಯಲಿದೆ, 2028ಕ್ಕೂ ನಮ್ಮದೇ ಸರ್ಕಾರ ಬರಲಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.

ಕೊಳ್ಳೇಗಾಲ ಪಟ್ಟಣದ ಎಂಜಿಎಸ್ವಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕೊಳ್ಳೇಗಾಲ-ಹನೂರು ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಚಾಮರಾಜನಗರ ಜಿಲ್ಲೆ ಪುಣ್ಯಭೂಮಿ, ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ ದೇವರು ನೆಲೆ ನಿಂತ ಭೂಮಿ ಇದಾಗಿದೆ, ಕಳೆದ ವರ್ಷ ಸಂಪುಟ ಸಭೆ ನಡೆಸಿ ಈ ಜಿಲ್ಲೆಗೆ 3 ಸಾವಿರ ಕೋಟಿ ರು. ವೆಚ್ಚದ ಕಾರ್ಯಕ್ರಮ ಘೋಷಿಸಲಾಗಿತ್ತು ಎಂದು ತಿಳಿಸಿದರು.

ಜನರಿಗೆ ಅನೇಕ ಕಾರ್ಯಕ್ರಮ ರೂಪಿಸುವ ಜತೆಗೆ ಗ್ಯಾರಂಟಿ ನೀಡಲಾಗಿದೆ, ಟೀಕೆಗಳನ್ನು ಹೆದರಿಸಿ ಗೆದ್ದರೆ ನಾಯಕ, ಸೋತರೆ ಮಾರ್ಗದರ್ಶಕನಾಗಲಿದ್ದು ಶಿವ ತಲೆ ಮೇಲೆ ಗಂಗೆಗೆ ಸ್ಥಾನ ನೀಡಿದಂತೆ ಕಾಂಗ್ರೆಸ್ ಪಕ್ಷವು ತನ್ನ ಹೃದಯದಲ್ಲಿ ಜನರಿಗೆ ಸ್ಥಾನ ನೀಡಿದೆ. ಕೊಳ್ಳೇಗಾಲ, ಹನೂರು ಈಗ ಅಭಿವೃದ್ಧಿಗೆ ಕಾಲಿಟ್ಟಿದೆ ಎಂದರು.

ನಾನು ರೇಷ್ಮೆ ನಾಡಿನಿಂದ ಬಂದವನಾಗಿದ್ದು ರೀಲರ್‌ಗಳಿಗೆ ಉದ್ಯಮದ ಸ್ಥಾನ ಇಲ್ಲ. ಆದರೆ ಈಗ ರೇಷ್ಮೆಗೆ ಒಳ್ಳೆಯ ಬೆಲೆ ಇದೆ, ಇದನ್ನು ಶಾಶ್ವತವಾಗಿ ಉಳಿಸಲು ಹೊಸ ಕೈಮಗ್ಗ ನೀತಿ ರೂಪಿಸಲಾಗಿದೆ, ಕೈಗಾರಿಕಾ ಸ್ಥಾನವನ್ನು ನೀಡಲಾಗಿದೆ, ರೇಷ್ಮೆ ಬೆಳೆಗಾರರು- ನೇಕಾರರ ಬದುಕಿಗೆ ಹೊಸ ರೂಪ ಸಿಗಲಿದೆ ಎಂದರು.

ಇಡೀ ಸರ್ಕಾರ ಚಾಮರಾಜನಗರ ಜನತೆಯ ಜತೆಗಿದೆ. ಈ ಹಿಂದೆ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಈ ಜಿಲ್ಲೆಗೆ 3 ಸಾವಿರ ಕೋಟಿ ರು. ಕಾಮಗಾರಿಯನ್ನು ನೀಡಿ, ಜಿಲ್ಲೆಯ ಜನರನ್ನು ಅಭಿವೃದ್ಧಿಯ ಪಥಕ್ಕೆ ಕರೆದೊಯ್ಯುಲಾಗಿತ್ತು. ಜನರಿಂದ ಅಧಿಕಾರಕ್ಕೆ ಬಂದ ನಮ್ಮ ಗ್ಯಾರಂಟಿ ಸರ್ಕಾರ, ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಶಂಕುಸ್ಥಾಪನೆ ನೆರವೇರಿಸಿದೆ. ನಮ್ಮ ಮಂತ್ರಿಗಳು, ಸಂಸದರು, ಶಾಸಕರು ಸೇರಿದಂತೆ ಇಡೀ ಸರ್ಕಾರ ನಿಮ್ಮೊಂದಿಗಿದೆ. ಟೀಕೆ ಎದುರಿಸಿ ಗೆದ್ದರೆ ನಾಯಕನಾಗುತ್ತಾನೆ. ಸೋತರೆ ಮಾರ್ಗದರ್ಶಕನಾಗುತ್ತಾನೆ. ಈ ಭಾಗದ ಎಲ್ಲಾ ಜನಪ್ರತಿನಿಧಿಗಳು ಕ್ಷೇತ್ರದ ಹಾಗೂ ಜನರ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ ಎಂದರು.

ಶಿವನು ಗಂಗೆಗೆ ತನ್ನ ತಲೆಯ ಮೇಲೆ ಸ್ಥಾನ ನೀಡಿದ್ದರೆ, ಕಾಂಗ್ರೆಸ್ ಸರ್ಕಾರ ಜನರ ಹೃದಯಗಳಲ್ಲಿ ಸ್ಥಾನ ಪಡೆದಿದೆ. ಈ ಜಿಲ್ಲೆಯಲ್ಲಿ 7 ಜನ ಶಾಸಕರನ್ನು ಗೆಲ್ಲಿಸಿ ನಮಗೆ ಶಕ್ತಿ ತುಂಬಿದ್ದಾರೆ. ಸುಮಾರು 25ಕ್ಕೂ ಹೆಚ್ಚು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿದೆ. ಹೊಸ ಕಾಮಗಾರಿಗಳಿಗೆ ಭರವಸೆಯ ದೊಡ್ಡ ಆರಂಭ ನೀಡಲಾಗಿದೆ. ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇವೆ. ನಾನು ಸಿಎಂ ಆದ ನಂತರ, ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ ಮಾಡಿದ್ದೇನೆ. ಪ್ರಜಾಸೇವೆ ಇಲಾಖೆಯಿಂದ ಶಾಸಕರು, ಸಚಿವರು ರಾಜ್ಯದ ಪ್ರತಿ ಜಿಲ್ಲೆ, ತಾಲ್ಲೂಕು, ಹೋಬಳಿ, ಪಂಚಾಯತಿಗಳಿಗೆ ಮೊದಲನೇ ಮತ್ತು ಮೂರನೇ ಶನಿವಾರ ಭೇಟಿ ನೀಡಲು ಸೂಚನೆ ನೀಡಿದ್ದೇನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಸಚಿವರಾದ ಯು.ಟಿ.ಖಾದರ್, ಕೆ.ಎಚ್.ಮುನಿಯಪ್ಪ, ಅಜಯ್ ಧರ್ಮಸಿಂಗ್, ಚೆಲುವರಾಯಸ್ವಾಮಿ , ಜಿಲ್ಲೆಯ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಂ.ಆರ್.ಮಂಜುನಾಥ್, ಗಣೇಶ್ ಪ್ರಸಾದ್ ಹಾಜರಿದ್ದರು.