ದಾನಗಳಲ್ಲಿ ಅನ್ನದಾನ ಅತ್ಯಂತ ಶ್ರೇಷ್ಠವಾದುದು

ಭಟ್ಕಳ: ಇಲ್ಲಿನ ಅಂಜುಮನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಎನ್‌ಎಸ್‌ಎಸ್‌ ಘಟಕದ ವತಿಯಿಂದ ಹಮ್ಮಿಕೊಂಡಿರುವ ನವೀನ ಚಟುವಟಿಕೆಯಾದ ನಮ್ಮ ಊಟ-೨ ಕಾರ್ಯಕ್ರಮವನ್ನು ತಾಲೂಕಿನ ಶಿರಾಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಪ್ರಾಂಶುಪಾಲ ಪ್ರೊ. ಮುಷ್ತಾಕ್ ಕೆ. ಶೇಖ್ ಅವರು ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದಾನಗಳಲ್ಲಿ ಅನ್ನದಾನ ಅತ್ಯಂತ ಶ್ರೇಷ್ಠವಾದುದು ಎಂದರು. ಎನ್‌ಎಸ್‌ಎಸ್ ಅಧಿಕಾರಿ ದಾಮೋದರ ನಾಯ್ಕ, ಸಹಾಯಕ ಅಧಿಕಾರಿ ಉಮೇಶ ಮೇಸ್ತ, ವಿದ್ಯಾರ್ಥಿ ನಾಯಕ ಪ್ರದೀಪ ಹಾಗೂ ಮಹಾವಿದ್ಯಾಲಯದ ಸ್ವಯಂ ಸೇವಕರ ಸಹಕಾರದೊಂದಿಗೆ ಶಿರಾಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿಯೇ ಅಡುಗೆ ತಯಾರಿಸಿ ಸಮುದಾಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಆಸ್ಪತ್ರೆಗೆ ಬಂದಿದ್ದ ರೋಗಿಗಳಿಗೆ ಉಣ ಬಡಿಸಲಾಯಿತು. ಆನಂತರ ವಿವಿಧ ಪ್ರದೇಶಗಳಿಗೆ ತೆರಳಿ ಅಶಕ್ತರು, ನಿರಾಶ್ರಿತರು ಮತ್ತು ಅರ್ಹರನ್ನು ಹುಡುಕಿ ಅವರಿಗೆ ದಿನದ ಊಟ ನೀಡಲಾಯಿತು.

ಎನ್‌ಎಸ್‌ಎಸ್‌ ಘಟಕದ ಸೇವಾ ಚಟುವಟಿಕೆಯ ಅಡಿಯಲ್ಲಿ ಹಮ್ಮಿಕೊಂಡಿದ್ದ ಅನ್ನದಾನ ಕಾರ್ಯಕ್ರಮದ ಚಟುವಟಿಕೆಗೆ ಸಹಕಾರ ನೀಡಿದ ಮಹಾವಿದ್ಯಾಲಯದ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಎನ್‌ಎಸ್‌ಎಸ್‌ ಅಧಿಕಾರಿ ದಾಮೋದರ ನಾಯ್ಕ ಅಭಿನಂದಿಸಿದರು.

ಭಟ್ಕಳದ ಅಂಜುಮನ್ ಕಾಲೇಜಿನ ಎನ್‌ಎಸ್‌ಎಸ್‌ ಘಟಕದಿಂದ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.