ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘ ಹಾನಗಲ್ಲ ತಾಲೂಕಿನ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳಿಗಾಗಿ ಆರಂಭವಾದ ಹೆಮ್ಮೆಯ ಸಂಸ್ಥೆ, ಇದರ ಬೆಳವಣಿಗೆ ನಮ್ಮ ಆದ್ಯತೆ, ಕಳೆದ ೨೨ ವರ್ಷಗಳಿಂದ ದಿ.ಸಿ.ಎಂ. ಉದಾಸಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆದ ಸ್ವಾಭಿಮಾನದ ಸಂಸ್ಥೆ ಇದಾಗಿದ್ದು, ಸಂಸ್ಥೆಯ ಹಿತ ಕಾಪಾಡುವುದೇ ನಮ್ಮ ಧ್ಯೇಯ ಎಂದು ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ತಿಳಿಸಿದರು.

ಹಾನಗಲ್ಲ: ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘ ಹಾನಗಲ್ಲ ತಾಲೂಕಿನ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳಿಗಾಗಿ ಆರಂಭವಾದ ಹೆಮ್ಮೆಯ ಸಂಸ್ಥೆ, ಇದರ ಬೆಳವಣಿಗೆ ನಮ್ಮ ಆದ್ಯತೆ, ಕಳೆದ ೨೨ ವರ್ಷಗಳಿಂದ ದಿ.ಸಿ.ಎಂ. ಉದಾಸಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆದ ಸ್ವಾಭಿಮಾನದ ಸಂಸ್ಥೆ ಇದಾಗಿದ್ದು, ಸಂಸ್ಥೆಯ ಹಿತ ಕಾಪಾಡುವುದೇ ನಮ್ಮ ಧ್ಯೇಯ ಎಂದು ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ತಿಳಿಸಿದರು.ಪಾರದರ್ಶಕ ಆಡಳಿತ: ಹಾನಗಲ್ಲಿನಲ್ಲಿ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ೭೩ ವರ್ಷಗಳ ಇತಿಹಾಸದಲ್ಲಿ ಹತ್ತು ಹಲವು ಏಳು ಬೀಳುಗಳನ್ನು ಕಂಡ ಈ ಸಂಸ್ಥೆಗೆ ಈಗ ಮತ್ತೆ ಚುನಾವಣೆ ನಿಗದಿಯಾಗಿದೆ. ಹತ್ತು ಹಲವು ಆರೋಪಗಳು ನಮ್ಮ ಆಡಳಿತ ಮಂಡಳಿಯನ್ನು ಗುರಿಯಾಗಿಟ್ಟುಕೊಂಡು ಹರಿದಾಡಿದವು. ಅದಕ್ಕೆಲ್ಲ ಸತ್ಯದ ಸರಿಯಾದ ಉತ್ತರವನ್ನೂ ನೀಡಿದ್ದೇವೆ. ಆರ್ಥಿಕ ಸಂಕಷ್ಟದಲ್ಲಿದ್ದ ಸಂಸ್ಥೆಗೆ ನಿಶ್ಚಿತ, ನಿರಂತರ ಆದಾಯ ಬರುವಂತೆ ಯೋಜನೆ ಮಾಡಿ ೫೪ ಮಳಿಗೆ ನಿರ್ಮಿಸಿದ್ದೇವೆ. ೨೨ ವರ್ಷಗಳಿಂದ ದಿ.ಸಿ.ಎಂ. ಉದಾಸಿ ಅವರ ಮಾರ್ಗದರ್ಶನದಲ್ಲಿ ಆಕ್ಸಫರ್ಡ ಶಾಲೆ ಆರಂಭ ಹಾಗೂ ಶಾಲೆ ಆರಂಭವಾದ ಕೇವಲ ೪ ವರ್ಷಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ, ಶ್ರೀಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯಕ್ಕೆ ನೂತನ ಸುಸಜ್ಜಿತ ಕಟ್ಟಡ, ಮತ್ತೆ ಎರಡನೇ ಮಹಡಿಯಲ್ಲಿ ಎರಡು ಕೊಠಡಿ, ಅಡಿಟೋರಿಯಂ ನಿರ್ಮಾಣ, ನ್ಯಾಕ್ ಸಮಿತಿ ಸೂಚನೆಯಂತೆ ಮಹಾವಿದ್ಯಾಲಯಕ್ಕೆ ಎಲ್ಲ ಸೌಲಭ್ಯ ಕಲ್ಪಿಸಿ ಗ್ರಾಮೀಣ ಮಕ್ಕಳ ಹಿತಕ್ಕೆ ನಿಂತಿರುವುದು ನಮಗೆ ಸಮಾಧಾನವಿದೆ ಎಂದರು.

ಅಭಿವೃದ್ಧಿಗೆ ಬದ್ಧ: ಸಂಸ್ಥೆಯ ಆವರಣದಲ್ಲಿಯೇ ಇರುವ ಶಾಲೆ ಕಾಲೇಜುಗಳ ಆಟದ ಮೈದಾನ ಸೇರಿದಂತೆ ಇಡೀ ಬಯಲನ್ನು ಸುಸಜ್ಜಿತ ಹಾಗೂ ಸೌಂದರ್ಯಿಕರಣ, ಗಾರ್ಡನ್ ನಿರ್ಮಾಣ ಸೇರಿದಂತೆ ಶೈಕ್ಷಣಿಕ ವಾತಾವರಣ ನಿರ್ಮಿಸಲಾಗಿದೆ. ಆಕ್ಸಫರ್ಡ ಶಾಲೆಯ ಮಕ್ಕಳಿಗಾಗಿ ಆಟೋಪಕರಣಗಳ ವ್ಯವಸ್ಥೆ ಮಾಡಲಾಗಿದೆ. ಸಂಸ್ಥೆಯ ಎಲ್ಲ ಶಾಲೆ ಕಾಲೇಜುಗಳಲ್ಲಿ ಅಗ್ನಿ ನಂದಿಸುವ ಉಪಕರಣ, ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಂಸ್ಥೆಯ ಆವರಣವನ್ನು ಧೂಳು, ಕಸಮುಕ್ತ ಮಾಡಲಾಗಿದೆ. ಇದು ಶಿಕ್ಷಣ ಸಂಸ್ಥೆಯಾಗಿಯೇ ಉಳಿಯಬೇಕು ಎಂಬುದು ನಮ್ಮೆಲ್ಲರ ಇಚ್ಛೆ ಹಾಗೂ ಹೊಣೆಯಾಗಿದೆ ಎಂದರು.

ನಮ್ಮ ಗುರಿ: ಜನತಾ ಬಾಲಿಕೆಯರ ಪ್ರೌಢಶಾಲೆಗೆ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣ, ಹೊಸ ಐಟಿಐ, ಎಂ.ಎ, ಎಂಕಾಂ, ಬಿಸಿಎ, ಪದವಿ ಪೂರ್ವ ವಿಜ್ಞಾನ ವಿಭಾಗಗಳ ಆರಂಭ, ಶೇ.೯೫ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪಿಯುಸಿ ಹಾಗೂ ಪದವಿ ಕಾಲೇಜಿನಲ್ಲಿ ಉಚಿತ ಪ್ರವೇಶ, ಈ ಸಂಸ್ಥೆಯ ಸಂಸ್ಥಾಪಕ ಗೌರವ ಕಾರ್ಯದರ್ಶಿ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ್ದ ಚಂದ್ರಶೇಖರ (ಚಂದಪ್ಪ) ಕಾಗಿನೆಲ್ಲಿ ಅವರ ಪುತ್ಥಳಿ ನಿರ್ಮಾಣ ನಮ್ಮ ಮುಂದಿನ ಯೋಜನೆಗಳಾಗಿವೆ ಎಂದರು.

ಹಿರಿಯರು ಮಾರ್ಗದರ್ಶಕರ ಅಪೇಕ್ಷೆಯಂತೆ ಜನನಾಯಕ ದಿ.ಸಿ.ಎಂ. ಉದಾಸಿ ಅಭಿಮಾನಿ ಬಳಗದ ಶಿಕ್ಷಣಾಭಿವೃದ್ಧಿ ಸಮಿತಿಯಿಂದ ನಾನು ಬಿ.ಎಸ್. ಅಕ್ಕಿವಳ್ಳಿ, ನಾಗರಾಜ ಉದಾಸಿ, ನಾಗೇಂದ್ರ ಬಂಕಾಪುರ, ಭೀಮನಗೌಡ ಕೂಕನಗೌಡ್ರ, ಮಾಲತೇಶ ಚಿಕ್ಕಣ್ಣನವರ, ರವಿರಾಜ ಕಲಾಲ, ರವಿಚಂದ್ರ ಪುರೋಹಿತ, ರವಿ ಮೂಡ್ಲಿಯವರ, ಸುರೇಶ ರಾಯ್ಕರ, ಅಶೋಕ ಹಂಗರಗಿ, ಭಾಸ್ಕರ ಹುಲಮನಿ, ಮಂಜುಳಾ ಬೇದ್ರೆ, ರೇಖಾ ಶೆಟ್ಟರ, ಯಲ್ಲಪ್ಪ ಶೇರಖಾನೆ, ಪ್ರಕಾಶಗೌಡ ಪಾಟೀಲ ಚುನಾವಣಾ ಕಣದಲ್ಲಿದ್ದೇವೆ ಎಂದು ಬಿ.ಎಸ್.ಅಕ್ಕಿವಳ್ಳಿ ತಿಳಿಸಿದರು.