ಕನ್ನಡ ಭಾಷೆ ಕ್ರಿಸ್ತ ಪೂರ್ವಕ್ಕಿಂತ ಮೊದಲು ಇರುವಂತ ಭಾಷೆಯಾಗಿದ್ದು, ಹಳೆಯ ಇತಿಹಾಸವನ್ನು ಹೊಂದಿರುವ ಭಾಷೆ ಮತ್ತು ನುಡಿ ನಮ್ಮ ಕರ್ನಾಟಕ ರಾಜ್ಯದ್ದು ಎನ್ನುವಂತದ್ದನ್ನು ಅಭಿಮಾನದಿಂದ ಹೇಳಬೇಕಾಗಿದೆ. ಪ್ರಾಚೀನ ಕಾಲದ ಇತಿಹಾಸವನ್ನು ಹೊಂದಿದ ರಾಜ್ಯದಲ್ಲಿ ಜನಿಸಿದ ನಾವುಗಳು ಪುಣ್ಯವಂತರು ಎಂದು ಶಾಸಕ ಯಾಸೀರಅಹ್ಮದಖಾನ್ ಪಠಾಣ ಹೇಳಿದರು.

ಸವಣೂರು: ಕನ್ನಡ ಭಾಷೆ ಕ್ರಿಸ್ತ ಪೂರ್ವಕ್ಕಿಂತ ಮೊದಲು ಇರುವಂತ ಭಾಷೆಯಾಗಿದ್ದು, ಹಳೆಯ ಇತಿಹಾಸವನ್ನು ಹೊಂದಿರುವ ಭಾಷೆ ಮತ್ತು ನುಡಿ ನಮ್ಮ ಕರ್ನಾಟಕ ರಾಜ್ಯದ್ದು ಎನ್ನುವಂತದ್ದನ್ನು ಅಭಿಮಾನದಿಂದ ಹೇಳಬೇಕಾಗಿದೆ. ಪ್ರಾಚೀನ ಕಾಲದ ಇತಿಹಾಸವನ್ನು ಹೊಂದಿದ ರಾಜ್ಯದಲ್ಲಿ ಜನಿಸಿದ ನಾವುಗಳು ಪುಣ್ಯವಂತರು ಎಂದು ಶಾಸಕ ಯಾಸೀರಅಹ್ಮದಖಾನ್ ಪಠಾಣ ಹೇಳಿದರು.ಪಟ್ಟಣದ ಶ್ರೀ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಜರುಗಿದ ಹಾವೇರಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವರದಾ-ಬೇಡ್ತಿ ಮತ್ತು ಧರ್ಮಾ ನದಿಗಳ ಜೋಡಣೆಯಿಂದ ಹಾವೇರಿ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ. ಆದ್ದರಿಂದ, ರಾಜ್ಯ ಸರ್ಕಾರದಿಂದ ಡಿಪಿಆರ್‌ ತಯಾರಿಸಿ ಸಿಎಂ, ಡಿಸಿಎಂ ಮುಖಾಂತರ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ನದಿಗಳ ಜೋಡಣೆಯ ಡಿಪಿಆರ್‌ಗೆ ಕೇಂದ್ರದಿಂದ ಅನುಮೋದನೆ ಮಾಡಿಸಬೇಕು ಎಂದು ಸಮ್ಮೇಳನದ ಮೂಲಕ ಒತ್ತಾಯಿಸಿದರು.ಸವಣೂರ ತಾಲೂಕಿನಲ್ಲಿ ಸಾಹಿತ್ಯ ಭವನಕ್ಕೆ ನಿವೇಶನ ಕೇಳಿದ್ದಾರೆ. ಆದಷ್ಟು ಬೇಗ ಸ್ಥಳವನ್ನು ಗುರುತಿಸಿದರೆ ಆದಷ್ಟು ಬೇಗ ಕೆಲಸವನ್ನು ಮಾಡುತ್ತೇನೆ. ರಾಜ್ಯ ಸರ್ಕಾರ ನ. 1ರಂದು ಜ್ಞಾನಪೀಠ ಪುರಸ್ಕೃತರ ಜನ್ಮಸ್ಥಳಕ್ಕೆ ಒಂದು ಕೋಟಿ ಅನುದಾನವನ್ನು ನೀಡುತ್ತಿದೆ. ಅದೇ ಹಣದಲ್ಲಿ ನಿವೇಶನವನ್ನು ಖರೀದಿಸಿ ಸಾಹಿತ್ಯ ಭವನವನ್ನು ನಿರ್ಮಾಣ ಮಾಡಿ ಕನ್ನಡಕ್ಕೆ ಶೋಭೆ ತರುವಂತ ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು. ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಶಿವಯೋಗಿ ಶ್ರೀಗಳು ಆಶೀರ್ವಚನ ನೀಡಿ, ಕನ್ನಡ ಭಾಷೆ, ಸಂಸ್ಕೃತಿ ಕನ್ನಡದ ಉಳಿವಿಗಾಗಿ ನಾವೆಲ್ಲರೂ 69 ವರ್ಷಗಳಿಂದ ಹೋರಾಡುತ್ತಿದ್ದೇವೆ. 1956ರಲ್ಲಿ ಪ್ರಾದೇಶಿಕ ಭಾಷೆಗಳು ಪ್ರಾಂತವಾರು ಆದ ಮೇಲೆ 2025ಕ್ಕೆ 69 ವರ್ಷವಾದರೂ ನಾವಿನ್ನು ಹಿಂದುಳಿದ್ದೇವೆ ಎನ್ನುವಂತ ಸಂಶಯ ಎದುರಿಗೆ ಬಂದು ನಿಂತಿದೆ ಎಂದರು. ನಮ್ಮ ಸಂಸ್ಕೃತಿ, ನಮ್ಮ ಪರಂಪರೆಗೆ ಪೂರಕವಾದ ಭಾಷೆಗಳನ್ನು ಬೆಳೆಸುವಂತ ಕರ್ತವ್ಯ ಕೇವಲ ರಾಜಕಾರಣಿಗಳಿಗೆ, ಪತ್ರಕರ್ತರಿಗೆ, ಸಾಹಿತಿಗಳಿಗೆ, ಕವಿಗಳಿಗೆ ಸೀಮಿತವಲ್ಲ. ನಮ್ಮ ಕನ್ನಡ ನಾಡಿನ ಪ್ರತಿಯೊಬ್ಬ ಪ್ರಜೆಗಳ ಕರ್ತವ್ಯ ಎನ್ನುವಂತದ್ದನ್ನು ಭಾವಿಸಿಕೊಳ್ಳಬೇಕು. ಪ್ರತಿಯೊಬ್ಬರು ಆ ಭಾವನೆಗಳಿಗೆ ಧಕ್ಕೆ ತರಲಾರದೆ ಅದನ್ನು ನಾವೆಲ್ಲ ಮೇಲ್ಪಂಕ್ತಿಯಲ್ಲಿ ನೋಡಲು ಇಷ್ಟಪಟ್ಟರೆ ಕನ್ನಡ ಸುಸಂಸ್ಕೃತಿಯ ನಾಡಾಗುತ್ತದೆ. ಕನ್ನಡ ನಾಡಿನಲ್ಲಿ ಸುಮಾರು 4ಸಾವಿರ ಕನ್ನಡ ಶಾಲೆಗಳನ್ನು ಬಂದ್ ಮಾಡಬೇಕು ಎನ್ನುವಂತದ್ದು ಖೇದಕರ ಸಂಗತಿ. ಕನ್ನಡ ಶಾಲೆಗಳಲ್ಲಿ ಅಲ್ಪ ವಿದ್ಯಾರ್ಥಿಗಳಿದ್ದು ಏಕೋಪಾಧ್ಯಾಯ ಶಾಲೆಗಳಿದ್ದರೂ ಕೂಡಾ ಅವುಗಳನ್ನು ಉಳಿಸುವಂತ ಕೆಲಸವನ್ನು ಮಾಡಬೇಕು. ತಾಲೂಕು ಸಾಹಿತ್ಯ ಸಮ್ಮೇಳನಗಳನ್ನು ಕೇವಲ ತಾಲೂಕು ಕೇಂದ್ರಕ್ಕೆ ಸೀಮಿತಗೊಳಿಸದೆ ಗ್ರಾಮೀಣರಲ್ಲಿ ಸಾಹಿತ್ಯದ ಸೊಗಡನ್ನು ಬೆಳೆಸಿ ಅದರ ಸವಿಯನ್ನು ಸವಿಯಲು ಅನುಕೂಲ ಮಾಡಲು ಪ್ರತಿ ವರ್ಷ ಒಂದೊಂದು ಗ್ರಾಮಗಳಲ್ಲಿ ಆಯೋಜನೆ ಮಾಡುವ ನಿರ್ಣಯವನ್ನು ಮಾಡಬೇಕು ಎಂದರು. ಕಸಾಪ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ ನೇತೃತ್ವ ವಹಿಸಿ ಮಾತನಾಡಿದರು. ಸಮ್ಮೇಳನ ಸರ್ವಾಧ್ಯಕ್ಷ ಎಚ್.ಐ.ತಿಮ್ಮಾಪೂರ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಪ್ರಮುಖರಾದ ಸುಭಾಸ ಮಜ್ಜಗಿ, ಎಂ.ಜೆ. ಮುಲ್ಲಾ, ಮಹೇಶ ಅಪ್ಪಣ್ಣನವರ, ಲಕ್ಷ್ಮಣ ಕನವಳ್ಳಿ, ಆನಂದ ವಡಕಮ್ಮನವರ, ಎಸ್.ಡಿ. ದೇವಗಪ್ಪನವರ, ಯೋಗೇಂದ್ರ ಜಂಬಗಿ, ಧರಿಯಪ್ಪಗೌಡ ಪಾಟೀಲ, ಜೀಶಾನಖಾನ್ ಪಠಾಣ, ತಹಸೀಲ್ದಾರ್ ರವಿಕುಮಾರ ಕೊರವರ, ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಪಾಲ್ಗೊಂಡಿದ್ದರು. ಶಿಕ್ಷಕರಾದ ವಿದ್ಯಾಧರ ಕುತನಿ, ಎನ್.ಎನ್. ಬಸನಾಳ, ಎಸ್.ವಿ. ಕೋಳಿವಾಡ, ಆರ್.ಎಸ್. ಪೂಜಾರ, ಎಸ್.ಬಿ.ಹೊಸಮನಿ, ಎಂ.ಎಂ.ಯಳವತ್ತಿ ಕಾರ್ಯಕ್ರಮ ನಿರ್ವಹಿಸಿದರು. ನಂತರ, ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.