ಹೊಸಪೇಟೆಯಲ್ಲಿ ನಮ್ಮ ಪೊಲೀಸ್, ನಮ್ಮ ಹೆಮ್ಮೆ ಮ್ಯಾರಥಾನ್‌ಗೆ ಚಾಲನೆ

| Published : Mar 11 2025, 12:49 AM IST

ಸಾರಾಂಶ

ಸೈಬರ್ ಅಪರಾಧಗಳ ಕುರಿತು ಜನ ಎಚ್ಚರದಿಂದ ಇರಬೇಕು.

ವಿದೇಶಿ ಮಹಿಳೆಗೆ ಪ್ರಥಮ ಸ್ಥಾನ, ಉತ್ಸಾಹದಿಂದ ಪಾಲ್ಗೊಂಡ ಜನ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಸೈಬರ್ ಅಪರಾಧಗಳ ಕುರಿತು ಜನ ಎಚ್ಚರದಿಂದ ಇರಬೇಕು ಎಂದು ವಿಜಯನಗರ ಎಸ್ಪಿ ಬಿ.ಎಲ್. ಶ್ರೀಹರಿಬಾಬು ಹೇಳಿದರು.

ನಗರದ ತುಂಗಭದ್ರಾ ಜಲಾಶಯದಿಂದ ಸಾಯಿಬಾಬಾ ವೃತ್ತದ ವರೆಗೆ ನಮ್ಮ ಪೊಲೀಸ್, ನಮ್ಮ ಹೆಮ್ಮೆ ಘೋಷವಾಕ್ಯದೊಂದಿಗೆ ನಡೆದ ಮ್ಯಾರಥಾನ್‌ನಲ್ಲಿ ಮಾತನಾಡಿದರು.

ಸಾರ್ವಜನಿಕರು ಸಹ ಒಂದಲ್ಲ ಒಂದು ರೀತಿಯಲ್ಲಿ ಪೊಲೀಸ್ ಕೆಲಸ ಮಾಡಬೇಕಾಗುತ್ತದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಲು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಅಪರಾಧಗಳ ನಿಯಂತ್ರಣ ಮಾಡಲು ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಬೇಕಾಗಿದೆ. ಕರ್ನಾಟಕವನ್ನು ಮಾದಕವಸ್ತು ಮುಕ್ತಗೊಳಿಸಲು ಪೊಲೀಸ್‌ ಇಲಾಖೆ ಪಣ ತೊಟ್ಟಿದೆ. ಡ್ರಗ್ಸ್‌ಗೆ ವಿದಾಯ ಹೇಳೋಣ, ಜೀವನಕ್ಕೆ ಜೈಕಾರ ಹಾಕೋಣ, ಇದನ್ನು ಸಾಕಾರಗೊಳಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.

ಶಾಸಕ ಎಚ್.ಆರ್. ಗವಿಯಪ್ಪ ಮ್ಯಾರಥಾನ್ ಗೆ ಚಾಲನೆ ನೀಡಿದರು. ವಾರಾಂತ್ಯದ ರಜೆಯ ಮೂಡ್‌ನಲ್ಲಿದ್ದ ಜನರು, ಇಲ್ಲಿನ ಟಿಬಿಡ್ಯಾಂನಿಂದ ಆರಂಭಗೊಂಡ ಮ್ಯಾರಥಾನ್‌ನಲ್ಲಿ ಉತ್ಸಾಹದಿಂದ ಹೆಜ್ಜೆ ಹಾಕಿದರು. ಸ್ಥಳೀಯ ಜನರಷ್ಟೇ ಅಲ್ಲದೆ, ವಿದೇಶಿ ಪ್ರಜೆಗಳು ಕೂಡ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಹಂಪಿಗೆ ಪ್ರವಾಸಕ್ಕೆ ಬಂದಿದ್ದ ಸ್ವೀಡನ್ ನ ಫ್ರೀಡಾ ಅವರು ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಪ್ರಶಂಸೆಗೆ ಪಾತ್ರವಾದರು. ಡಿ.ಸುವರ್ಣ ದ್ವಿತೀಯ, ಉಷಾ ರೋಹಿಣಿ ತೃತೀಯ ಸ್ಥಾನ ಪಡೆದರು. ಪುರುಷರ ವಿಭಾಗದಲ್ಲಿ ಜಿ.ವಿನಯ್ ಪ್ರಥಮ, ಕೆ.ಮಂಜುನಾಥ ದ್ವಿತೀಯ, ಸ್ವೀಡನ್ ನ ಜೋಹನ್ ತೃತೀಯ ಸ್ಥಾನ ಗಳಿಸಿದರು. ಅಧಿಕಾರಿಗಳ ವಿಭಾಗದಲ್ಲಿ ವಿಕಾಸ್ ಲಮಾಣಿ ಪ್ರಥಮ ಸ್ಥಾನ ಗಳಿಸಿದರು. 50 ಜನರಿಗೆ ಪದಕ, ಪ್ರಮಾಣಪತ್ರ ವಿತರಿಸಲಾಯಿತು.