ನಮ್ಮ ಜನ ಸೇವೆಯೇ ಉತ್ತರ ನೀಡುವಂತಿರಬೇಕು: ಟಿ.ಎ ನಾರಾಯಣ ಗೌಡ

| Published : Apr 27 2025, 01:31 AM IST

ಸಾರಾಂಶ

ಸಾರ್ವಜನಿಕ ವಲಯದಲ್ಲಿ ಸಲ್ಲಿಸಲಾಗುವ ಸೇವೆಗೆ ತನ್ನದೇ ಗೌರವವಿದೆ. ಆ ನಿಟ್ಟಿನಲ್ಲಿ ನಗರಸಭೆ ಸದಸ್ಯೆ ಸುಜಾತ ರಮೇಶ್ ಮತ್ತು ಸ್ನೇಹಿತರ ಬಳಗವು ಮಾಡಿದ ನಿಸ್ವಾರ್ಥ ಸೇವೆಗೆ ಪ್ರತಿಫಲ‌ ಸಿಗುವ ದಿನಗಳು ದೂರವಿಲ್ಲ ಎಂದು ಕರವೇ ರಾಜ್ಯ ಘಟಕ ಅಧ್ಯಕ್ಷ ಟಿ.ಎ ನಾರಾಯಣ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸಾರ್ವಜನಿಕ ವಲಯದಲ್ಲಿ ಸಲ್ಲಿಸಲಾಗುವ ಸೇವೆಗೆ ತನ್ನದೇ ಗೌರವವಿದೆ. ಆ ನಿಟ್ಟಿನಲ್ಲಿ ನಗರಸಭೆ ಸದಸ್ಯೆ ಸುಜಾತ ರಮೇಶ್ ಮತ್ತು ಸ್ನೇಹಿತರ ಬಳಗವು ಮಾಡಿದ ನಿಸ್ವಾರ್ಥ ಸೇವೆಗೆ ಪ್ರತಿಫಲ‌ ಸಿಗುವ ದಿನಗಳು ದೂರವಿಲ್ಲ ಎಂದು ಕರವೇ ರಾಜ್ಯ ಘಟಕ ಅಧ್ಯಕ್ಷ ಟಿ.ಎ ನಾರಾಯಣ ಗೌಡ ಹೇಳಿದರು.

ನಗರದ 31 ನೇ ವಾರ್ಡ್ ಮಾರುತಿನಗರ ಬಡಾವಣೆ ಚಂದ್ರಶೇಖರ ಭಾರತಿ ಶಾಲಾ ಆವರಣದಲ್ಲಿ ನಗರಸಭೆ ಸದಸ್ಯೆ ಸುಜಾತ ರಮೇಶ್ ಮತ್ತು ಸ್ನೇಹಿತರ ಬಳಗದಿಂದ ನಡೆದ ಪರಿಪೂರ್ಣ ಸಂರಕ್ಷಣೆ ಕಾರ್ಯಕ್ರಮದಡಿ ನಾಗರೀಕ ವಲಯಕ್ಕೆ ನೀಡಲಾದ ವಿವಿಧ ಸೌಲಭ್ಯಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮಾತಿಗಿಂತ ಕೃತಿ ಲೇಸು ಎಂಬಂತೇ ನಾವು ಮಾಡುವ ಜನ ಸೇವೆಗಳೇ ಉತ್ತರ ನೀಡುವಂತಿರಬೇಕು. ಕಳೆದ ಹಲವಾರು ವರ್ಷಗಳಿಂದ ಸುಜಾತ ರಮೇಶ್ ನೀಡುತ್ತಿರುವ ಸೇವಾ ಕಾರ್ಯ ವೈಖರಿ ರಾಜ್ಯಕ್ಕೆ ಮಾದರಿಯಾಗಿದೆ. ರಾಜಕಾರಣ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿರದೇ ಸೇವಾ ಕ್ಷೇತ್ರಕ್ಕೆ ಕೊಡುಗೆಯಾಗಬೇಕು. ಇಂದು ಲೋಕಾರ್ಪಣೆಗೊಂಡ ವಿವಿಧ ಸೌಲಭ್ಯಗಳ ಸೇವೆಗಳು ಬೆಂಗಳೂರು ಮಹಾನಗರದ ವಾರ್ಡ್ಗಳಲ್ಲಿ ಕಾಣಲು ಸಾದ್ಯವಿರುವುದಿಲ್ಲ ಎಂದರು. ಕೇವಲ ಮಾತುಗಳಾಗದೇ ನಮ್ಮ ಕಾರ್ಯ ಚಟುವಟಿಕೆಗಳೇ ಸಾಧನೆ ಮಾತನಾಡಬೇಕು. ಆ ನಿಟ್ಟಿನಲ್ಲಿ ಸತತ ಪ್ರಯತ್ನಗಳು ನಡೆಯಬೇಕು. ಆಗ ಮಾತ್ರ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾದ್ಯವಾಗುತ್ತದೆ ಎಂದರು.

ಕಾಶ್ಮೀರದಲ್ಲಿ ನಡೆದ ಹಿಂದುಗಳ ನರಮೇಧದ ರುವಾರಿ ಭಯೋತ್ಪಾದಕರ ಅಂತ್ಯ ಆಗಲೇಬೇಕು. ಅದಕ್ಕೆ ನಮ್ಮ ಸೈನಿಕರು ಸಮರ್ಥರಾಗಿದ್ದಾರೆ. ಮೃತಪಟ್ಟ ಎಲ್ಲ ಭಾರತೀಯರ ಆತ್ಮಗಳಿಗೆ ಚಿರಶಾಂತಿ ಸಿಗಲಿ ಎಂದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಅನಂತ ಸದ್ವೀದ್ಯ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅನಂತಕುಮಾರ್ ಮಾತನಾಡಿ, ಒಂದು ಕಲ್ಲಿನ ವಿಗ್ರಹ ರಚನೆಯಾಗಬೇಕಾದರೆ ಅನೇಕ ಪೆಟ್ಟುಗಳು ಬೀಳಬೇಕು. ನಂತರವಷ್ಟೇ ಪರಿಪೂರ್ಣ ಸುಂದರ ಮೂರ್ತಿಯಾಗಿ ಹೊರ ಹೊಮ್ಮುವುದರ ಮೂಲಕ ಪೂಜೆಗೆ ಆರ್ಹವಾಗುತ್ತದೆ‌. ಆದೇ ರೀತಿ 31 ನೇ ವಾರ್ಡ್ ಸದಸ್ಯೆ ಸುಜಾತ ರಮೇಶ್ ಇವರು ತಮ್ಮ ಸೇವಾ ಅವಧಿಯಲ್ಲಿ ಅನೇಕ ಏಳು ಬೀಳುಗಳನ್ನು , ನೋವುಗಳನ್ನು ಅನುಭವಿಸಿ ಉತ್ತಮ ನಾಯಕತ್ವವನ್ನು ಹೊಂದಿದ್ದಾರೆ. ಸದಾ ಅವರ ಸಮಾಜಮುಖಿ ಕಾರ್ಯಚಟುವಟಿಕೆಗಳಿಗೆ ಸಹಕಾರ ಕೂಡ ನಾನು ನೀಡಲಿದ್ದೇನೆ ಎಂದರು.

ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷ ವೀರಪುತ್ರ ಮಾತನಾಡಿ, ಸೇವೆ ಎಂಬುದು ಪರಮಾತ್ಮನ ಅಂತರದ ಪ್ರತೀಕವಾಗಿದೆ. ಕನ್ನಡ ಸೇವೆ ಕೂಡ ಪರಮಾತ್ಮನ ಸೇವೆಯಾಗಿದ್ದು, ಅರಸೀಕೆರೆ ತಾಲೂಕಿನಿಂದ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಿಗೆ ದಿಗ್ಗಜರನ್ನು ಕೊಡುಗೆಯಾಗಿ ನೀಡಿದ ಪುಣ್ಯದ ಊರಾಗಿದೆ. ನಗರಸಭೆ ಸದಸ್ಯರಾದ ಸುಜಾತ ರಮೇಶ್ ಸ್ನೇಹಿತರ ಬಳಗ ತಮ್ಮ ನಿಸ್ವಾರ್ಥ ಸೇವೆಯಿಂದ ನಗರದಾದ್ಯಂತ ವಿಶೇಷ ವ್ಯಕ್ತಿತ್ವವನ್ನು ರೂಪಿಸಿಕೊಂಡಿದೆ ಎಂದರು.

ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರಾಘವೇಂದ್ರ ಮಾತನಾಡಿ, ಸಾರ್ವಜನಿಕ ಸೇವೆಯಲ್ಲಿ ಇಂದಿನ ಕಾರ್ಯಕ್ರಮ ಮುಂಚೂಣಿಗೆ ಪಾತ್ರವಾಗಿದೆ. ಈ ವಾರ್ಡ್ ನ ವಿವಿಧ ಭಾಗಗಳಲ್ಲಿ 7 ಲಕ್ಷ ರು ವೆಚ್ಚದಲ್ಲಿ 50 ಸಿ.ಸಿ ಕ್ಯಾಮರಾ ಆಳವಡಿಸಿರುವುದು ಸ್ವಾಗತಾರ್ಹವಾಗಿದೆ. ಇಂತಹ ಸೇವೆ ಕೇವಲ 31 ನೇ ವಾರ್ಡಿಗೆ ಸೀಮಿವಾಗಿರದೇ ಎಲ್ಲ ವಾರ್ಡ್ ನಾಗರೀಕರಿಗೂ ಸಿಗಲಿ ಎಂದರು.

ಇದೇ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಅನಂತಕುಮಾರ್ , ಸ್ನೇಹಿತರ ಬಳಗದಿಂದ ಉಚಿತವಾಗಿ ನಿರ್ಮಿಸಿಕೊಟ್ಟ ನೂತನ ಮನೆಯನ್ನು ಫಲಾನುಭವಿ ಕಮಲಮ್ಮ ಇವರಿಗೆ ಹಸ್ತಾಂತರಿಸಲಾಯಿತು. ವಿವಿಧ ಭಾಗಗಳಲ್ಲಿ ಆಳವಡಿಸಲಾಗಿರುವ ಸಿ.ಸಿ ಕ್ಯಾಮರಗಳಿಗೆ ಚಾಲನೆ ನೀಡಲಾಯಿತು. ಬೆಂಗಳೂರು ನಗರ ಕರವೇ ಅಧ್ಯಕ್ಷ ಧರ್ಮರಾಜೇಗೌಡ ,ಖ್ಯಾತ ವಕೀಲ ವಿವೇಕ್ , ನಗರಸಭೆ ಸದಸ್ಯೆ ಶ್ವೇತಾ ರಮೇಶ್ ನಾಯ್ಡು, ಜಿಲ್ಲಾ ಕರವೇ ಉಪಾಧ್ಯಕ್ಷ ಹೇಮಂತ್ ಕುಮಾರ್, ತಾಲೂಕು ಅಧ್ಯಕ್ಷ ಕಿರಣ್ ಕುಮಾರ್ , ಮುಖಂಡರಾದ ರಮೇಶ್, ಸಂತೋಷ್ , ಬಿ. ಪರಮೇಶ್, ದಿಬ್ಬೂರು ಯೋಗೀಶ್, ಮಂಜುನಾಥ್ ಪಂಡಿತ್, ಲೋಕೇಶ್, ನಯಾಜ್, ಉಮೇಶ್ ನಾಯ್ಕ್, ರಘು, ಸೇರಿದಂತೆ ಸ್ಥಳಿಯ ನಿವಾಸಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು.