ಸಾರಾಂಶ
ಕೋಲಾರ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಜನರ ಸಮಸ್ಯೆಗಳು, ಕೃಷಿ ಸಮಸ್ಯೆಗಳ ಬಗ್ಗೆ ಕಿಂಚತ್ತು ಕಾಳಜಿಯಿಲ್ಲ. ಎರಡೂ ಸರ್ಕಾರಗಳು ಸಮಸ್ಯೆಗಳತ್ತ ಗಮನ ಹರಿಸದಿದ್ದರೆ ಬೃಹತ್ ರೈತರ ಹಕ್ಕೊತ್ತಾಯಿಸಿ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಮುಖಂಡ ಎಚ್.ಆರ್.ಬಸವರಾಜ್ ಎಚ್ಚರಿಸಿದರು.
ನಗರದ ಜಿಲ್ಲಾ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿಯಿಂದ ಬೃಹತ್ ರೈತ ಹಕ್ಕೊತ್ತಾಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಈಗಾಗಲೇ ಜಿಲ್ಲೆಯಲ್ಲಿ ನೀರಿನ ಹಕ್ಕು ಮತ್ತು ರೈತರ ಹಕ್ಕಿಗಾಗಿ ಹೋರಾಟಕ್ಕೆ ಚಾಲನೆ ನೀಡಲಾಗಿದೆ, ರೈತ ಸಂಘವು ಕಳೆದ ೧೯೮೦ರಿಂದ ನಡೆದು ಬಂದ ಹಾದಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
೧೯೮೨ರಲ್ಲಿ ಕಂದಾಯ ವಸೂಲಾತಿಗೆ ಸಂಬಂಧಿಸಿದಂತೆ ತಮ್ಮ ಕುಟುಂಬದಲ್ಲಿ ೫- ೧೦ ಸಾವಿರ ರು. ಸಾಲ ವಸೂಲಾತಿಗೆ ಮನೆಯಲ್ಲಿ ನಡೆದ ದವಸ ಧಾನ್ಯದ ಜಪ್ತಿಯ ಘಟನೆ ನಂತರ ತಾವು ರೈತರ ಸಂಘವನ್ನು ಸಂಘಟಿಸಿಕೊಂಡು ನಡೆಸಿದ ಹೋರಾಟ ನಂತರದಲ್ಲಿ ಅಂದಿನ ತಹಸೀಲ್ದಾರ್ ಮನೆಯನ್ನೇ ಜಫ್ತಿ ಮಾಡುವ ಮೂಲಕ ಪ್ರತಿಕಾರ ತೀರಿಸಿಕೊಂಡ ಬಗ್ಗೆ ವಿವರಿಸಿದರು.ರೈತರು ಕೃಷಿ ಚಟುವಟಿಕೆಗೆ ಬಳಿಸುವ ಐಪಿ ಪಂಪ್‌ಸೆಟ್ ಆರ್.ಆರ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಬಾರದು, ವಿದ್ಯುತ್ ಸಂರ್ಪಕ ಪಡೆಯಲು ಸ್ವಯಂ ಆರ್ಥಿಕ ಯೋಜನೆ ಕೈಬಿಡಬೇಕು. ಅಕ್ರಮ- ಸಕ್ರಮ ಮುಂದುವರೆಸಬೇಕು. ವಿದ್ಯುತ್ ಖಾಸಗೀಕರಣ ನಿಲ್ಲಿಸಬೇಕು. ಮಂಜೂರಾಗಿರುವ ಸಾಗುವಳಿ ಚೀಟಿ ನೀಡಿ ಜಮೀನುಗಳ ಪೋಡಿ ಅದಾಲತ್ ನಡೆಸಬೇಕು. ಕನಿಷ್ಠ ಬೆಂಬಲ ಬೆಲೆ ಕಾನೂನಾತ್ಮಕವಾಗಿ ಘೋಷಿಸಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಬೇಕು. ಬ್ಯಾಂಕ್‌ಗಳು ಬಲವಂತದ ಸಾಲ ವಸೂಲಾತಿ ನಿಲ್ಲಿಸಬೇಕು. ಜಫ್ತಿ ಮಾಡಿರುವುದನ್ನು ವಾಪಸ್ ನೀಡಬೇಕು. ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಇತ್ಯಾದಿ ಹಕ್ಕೊತ್ತಾಯಗಳನ್ನು ಮಂಡಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡ ಆಂಜನೇಯರೆಡ್ಡಿ ಮಾತನಾಡಿ, ನಮ್ಮ ಹಕ್ಕೊತ್ತಾಯಗಳು ಸರ್ಕಾರವನ್ನು ತಲುಪಬೇಕೆಂದು ಕೋಲಾರ ಜಿಲ್ಲಾ ಕೇಂದ್ರದಲ್ಲಿ ರೈತರ ಹಕ್ಕೊತ್ತಾಯದ ಘೋಷಣೆಗಳ ಮೂಲಕ ನಗರದಲ್ಲಿ ಮೆರವಣಿಗೆ ನಡೆಸಿ, ಸಮಾವೇಶ ನಡೆಸುವ ಮೂಲಕ ಮುಂದಿನ ನೀರಾವರಿ ಹೋರಾಟಗಳಿಗೆ ಚಾಲನೆ ನೀಡಲಾಗಿದೆ ಎಂದರು.ನಮ್ಮ ನಾಯಕರು ಅಧಿವೇಶನದಲ್ಲಿ ಬೆಂಗಳೂರು ಕೊಳಚೆ ನೀರನ್ನು ಅಂಗಲಾಚಿ ಪಡೆದು ಅದಕ್ಕೆ ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ಎಂದು ಹೆಸರಿಸಿದ್ದಾರೆ. ಈ ನೀರನ್ನು ಮೂರು ಬಾರಿ ಸಂಸ್ಕರಿಸಿ ತರುವ ಬದಲು ಎರಡು ಬಾರಿ ಸಂಸ್ಕರಿಸಿ ಹರಿಸಿ, ಕುಡಿಯುವ ನೀರಿನ ಕೆರೆಗಳನ್ನು ತುಂಬಿಸುತ್ತಿರುವುದು ಅಪಾಯಕಾರಿ, ಮುಂದಿನ ೧೦ ವರ್ಷಗಳಲ್ಲಿ ಜನತೆ ಕ್ಯಾನ್ಸರ್ ಪೀಡಿತರಾಗಿ ಆಸ್ಪತ್ರೆಗಳಿಗಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ, ಮುಂದಿನ ನಮ್ಮ ಪೀಳಿಗೆಗಳು ನೀಡುವ ಶಾಪ ತಟ್ಟಲಿದೆ ಎಂದು ಎಚ್ಚರಿಸಿದರು.
ಎತ್ತಿನ ಹೊಳೆ ನೀರಿಗೆ ಪ್ರಥಮ ಆದ್ಯತೆ ನೀಡಬೇಕೆಂದು ಮುಷ್ಟಿ ಹಿಡಿದು ಒತ್ತಾಯಿಸಲಿಲ್ಲ, ಹಾಗಾಗಿ ಆತ್ತಕಡೆಯ ಜಿಲ್ಲೆಗಳು ನೀರು ಪಡೆದುಕೊಂಡವು. ೮ ಸಾವಿರ ಕೋಟಿಯ ಅಂದಾಜಿನಲ್ಲಿ ಪ್ರಾರಂಭಿಸಿದ ಈ ಯೋಜನೆಯಲ್ಲಿ ೨೪ ಸಾವಿರ ಕೋಟಿಗೆ ಏರಿಕೆ ಮಾಡಿ ೨ ಜಿಲ್ಲೆಗಳಿಂದ ೭ ಜಿಲ್ಲೆಗಳಿಗೆ ವಿಸ್ತರಿಸಿ ವಿಳಂಬ ಮಾಡಿದೆ, ವೇದವತಿ, ವಾಣಿವಿಲಾಸ ಡ್ಯಾಂಗಳಿಗೆ ನೀರನ್ನು ಹರಿಸಲಾಗುತ್ತಿದೆ, ಈ ಯೋಜನೆಯು ೫೭೦ ಕೆರೆಗಳಿಗೆ ೭೫ ಲಕ್ಷ ಜನತೆಗೆ ನೀರು ಪೂರೈಕೆ ಮಾಡುವ ಯೋಜನೆಯಾಗಿದೆ, ಆದರೆ ಕೋಲಾರ ಚಿಕ್ಕಬಳ್ಳಾಪುರದಿಂದ ಪ್ರಾರಂಭವಾಗುವ ಬದಲು ಸಮೀಪದಲ್ಲೇ ಇರುವ ಜಿಲ್ಲೆಗಳಿಗೆ ಹರಿಸುವ ಮೂಲಕ ನಮಗೆ ಖಾಲಿ ಚೆಂಬು ನೀಡಿದೆ ಎಂದು ವ್ಯಂಗ್ಯವಾಡಿದರು.ಅವಳಿ ಜಿಲ್ಲೆಯ ಜನತೆಯ ಉದಾಸೀನತೆ ಫಲವಾಗಿ ನಮ್ಮ ಹೋರಾಟದ ಫಲದ ಯೋಜನೆಯನ್ನು ಬೇರೆಯವರು ಪಡೆದುಕೊಳ್ಳುವಂತಾಯಿತು. ೨೪ ಟಿಎಂಸಿ ನೀರಿನ ನಿರೀಕ್ಷೆಯು ೮ ಟಿಎಂಸಿಗೆ ಇಳಿಗೆಯಾಗಿರುವ ಹಿನ್ನೆಲೆ ನಮಗೆ ನೀರು ಸಿಗುವುದು ಕಷ್ಟಸಾಧ್ಯ ಎಂಬ ಸಂಶಯ ವ್ಯಕ್ತಪಡಿಸಿದರು,
ರೈತಸಂಘ ಹಸಿರು ಸೇನೆ ಮುಖಂಡ ಅಬ್ಬಣಿ ಶಿವಪ್ಪ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಬೈಚೇಗೌಡ, ಜಿಲ್ಲಾ ಅಧ್ಯಕ್ಷ ಬೆಡಶೆಟ್ಟಹಳ್ಳಿ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆನಂದಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷ ದಿನ್ನೆ ಹೊಸಹಳ್ಳಿ ರಮೇಶ್, ಹಿರಿಯ ರೈತ ಮುಖಂಡರಾದ ಅಬ್ಬಣಿ ಶ್ರೀನಿವಾಸ್, ಸಿ.ವಿ.ಪ್ರಭಾಕರ್ ಗೌಡ, ದಲಿತ ಮುಖಂಡರಾದ ಪಂಡಿತ್ ಮುನಿವೆಂಕಟಪ್ಪ, ವಿಜಯಕುಮಾರ್ ಇದ್ದರು.