ನಮ್ಮ ತೆರಿಗೆ ನಮ್ಮ ಹಕ್ಕು ಕಾಂಗ್ರೆಸ್ ಪ್ರತಿಭಟನೆ: ಸಿ.ಟಿ. ರವಿ ತರಾಟೆ

| Published : Feb 08 2024, 01:37 AM IST

ನಮ್ಮ ತೆರಿಗೆ ನಮ್ಮ ಹಕ್ಕು ಕಾಂಗ್ರೆಸ್ ಪ್ರತಿಭಟನೆ: ಸಿ.ಟಿ. ರವಿ ತರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ಪಕ್ಷವನ್ನು ಮಾಜಿ ಸಚಿವ ಸಿ.ಟಿ. ರವಿ ತರಾಟೆ ತೆಗೆದು ಕೊಂಡಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ವೈಫಲ್ಯ ಮುಚ್ಚಿ ಹಾಕುವ ನೀತಿಯನ್ನು ಕೈಬಿಡಿ, ವೈಫಲ್ಯ ಒಪ್ಪಿ, ಯಾವುದು ಸಾಧ್ಯವೋ ಆ ಯೋಜನೆ ಅನುಷ್ಟಾನ ಮಾಡಿ ಎಂದು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ಪಕ್ಷವನ್ನು ಮಾಜಿ ಸಚಿವ ಸಿ.ಟಿ. ರವಿ ತರಾಟೆ ತೆಗೆದು ಕೊಂಡಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ವೈಫಲ್ಯ ಮುಚ್ಚಿ ಹಾಕುವ ನೀತಿಯನ್ನು ಕೈಬಿಡಿ, ವೈಫಲ್ಯ ಒಪ್ಪಿ, ಯಾವುದು ಸಾಧ್ಯವೋ ಆ ಯೋಜನೆ ಅನುಷ್ಟಾನ ಮಾಡಿ ಎಂದು ಹೇಳಿದ್ದಾರೆ. ನಿಮ್ಮ ಮನೆಯಿಂದ ದುಡ್ಡು ತಂದು ಯೋಜನೆ ಜಾರಿಗೆ ತಂದಿಲ್ಲಾ, ಜನರು ಕೊಟ್ಟ ತೆರಿಗೆ ಹಣದಲ್ಲಿ ಯೋಜನೆ ತಂದಿದ್ದೀರಾ, ಬೇಕಾ ಬಿಟ್ಟಿ ಯೋಜನೆ ಜಾರಿಗೆ ತಂದು, ಇದೀಗ ಹಣಕಾಸಿನ ತೊಂದರೆಯಾಗಿದ್ದರಿಂದ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಕೈಬಿಡಿ ಎಂದು ಕಿವಿಮಾತು ಹೇಳಿದರು. ದೇಶದಲ್ಲಿ ಶೇ.9 ರಷ್ಟು ಜನರ ತೆರಿಗೆ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ಅವರಲ್ಲಿ 10 ಸಾವಿರಕ್ಕಿಂತ ಹೆಚ್ಚು ತೆರಿಗೆ ಕಟ್ಟುವವರು ಶೇ. 2.5 ಜನ ಮಾತ್ರ. ಅವರು ಆ ತೆರಿಗೆ ನನ್ನ ಹಕ್ಕು ಅಂದ್ರೆ, ನೀವೆನೂ ಮಾಡ್ತಿರಿ, ಏನ್ ಮಾಡೋಕಾಗುತ್ತೆ ಎಂದು ಪ್ರಶ್ನಿಸಿದರು. ಬೆಂಗಳೂರಿನಲ್ಲಿಯೇ ಶೇ. 70 ರಷ್ಟು ಆದಾಯ ಕ್ರೋಢಿಕರಣವಾಗುತ್ತಿದೆ, ಅಲ್ಲಿನ ಶಾಸಕರು, ಸಂಸದರು, ಮಹಾನಗರ ಪಾಲಿಕೆಯ ಮೇಯರ್, ಕಾರ್ಪೋರೇಟರ್‌ಗಳು ಸೇರಿ ನನ್ನ ತೆರಿಗೆ ನನ್ನ ಹಕ್ಕು ಅಂದ್ರೆ ಏನ್ ಮಾಡ್ತೀರಾ, ಅದನ್ನ ವರುಣಕ್ಕೆ, ಕಲ್ಬುರ್ಗಿಗೆ, ಚಿಕ್ಕಮಗಳೂರಿಗೆ ತೆಗೆದುಕೊಂಡು ಹೋಗಂಗಿಲ್ಲ ಅಂದ್ರೆ ಏನೂ ಮಣ್ಣು ತಿಂತಿರಾ, ವರುಣದಲ್ಲಿ ಏನ್ ತೆರಿಗೆ ಉತ್ಪಾಧನೆ ಆಗುತ್ತಾ, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾಂನಲ್ಲಿ ಸಂಗ್ರಹವಾಗುವ ತೆರಿಗೆಯನ್ನ ವರುಣಕ್ಕೂ ತೆಗೆದುಕೊಂಡು ಹೋಗ್ತೀರಿ, ಬೇರೆ ಕಡೆಗೂ ತೆಗೆದುಕೊಂಡು ಹೋಗ್ತೀರಾ ನಾಳೆ ಅವ್ರೆಲ್ಲ ವಿಧಾನಸೌಧದ ಮುಂದೆ ನನ್ನ ತೆರಿಗೆ ನನ್ನ ಹಕ್ಕು ಅಂತಾ ಪ್ರತಿಭಟನೆ ಮಾಡಿದ್ರೆ, ನಿವೇನೂ ಮಣ್ಣು ತಿಂತಿರಾ. ರಾಜ್ಯದ ಜನರಿಗೆ ಮಣ್ಣು ತಿನ್ನಿಸುತ್ತೀರಾ ಎಂದ ಅವರು, ನೀತಿಯ ರಾಜಕಾರಣ ಮಾಡಬೇಕು, ಒಳಗೊಂದು ಹೊರಗೊಂದು ಅಲ್ಲ ಎಂದರು. ತೆರಿಗೆ ಹಣವನ್ನು ಪ್ರಧಾನಿಯವರು ತಮ್ಮ ಮನೆಗೆ ತೆಗೆದುಕೊಂಡು ಹೋಗ್ತಾ ಇದರಾ, ಜನಸಂಖ್ಯೆ ಆಧಾರದ ಮೇಲೆ ತೆರಿಗೆ ಹಣ ಹಂಚಿಕೆ ಮಾಡಲಾಗುತ್ತಿದೆ. ಅತೀ ಹೆಚ್ಚು ತೆರಿಗೆ ನೀಡುತ್ತಿರುವ ಮಹಾರಾಷ್ಟ್ರಕ್ಕೂ , ಕರ್ನಾಟಕಕ್ಕೂ ಒಂದೇ ಮಾನದಂಡ, ಒಂದೇ ಒಂದು ಬಿಜೆಪಿ ಸೀಟ್ ಇಲ್ಲದಂತಹ ಕೇರಳ, ತಮಿಳುನಾಡಿಗೂ ಅದೇ ಮಾನದಂಡ. ಈ ವಿಷಯದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಆರೋಪ ದುರುದ್ದೇಶ ಪೂರಕವಾದುದು, ಸೋರಿಕೆ ತಡೆಗಟ್ಟುವ ಸಾಮರ್ಥ್ಯ ನಿಮಗೆ ಇಲ್ಲ, ಅನುದಾನ ಹೊಂದಾಣಿಕೆ ಮಾಡಲು ಆಗದೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಾ ಇದಿರೀ ಎಂದು ಕಾಂಗ್ರೆಸ್‌ಗೆ ಚಾಟಿ ಬೀಸಿದರು.

ಜಿಎಸ್‌ಟಿ ಸಭೆ: ಗ್ಯಾರಂಟಿ ಅನುಷ್ಟಾನ ಮಾಡುವ ಜತೆಗೆ ಬೆಲೆ ಏರಿಕೆ ಮಾಡಿದರು. ವಿದ್ಯುಚ್ಛಕ್ತಿ ದರ, ಅಬಕಾರಿ, ರಿಜಿಸ್ಟ್ರೇಷನ್ ಸುಂಕ ಹೆಚ್ಚು ಮಾಡಿದ್ದಾರೆ. ರೈತ ತೆಗೆದುಕೊಳ್ಳುವ ಪಹಣಿ ಬೆಲೆಯನ್ನೂ ಹೆಚ್ಚು ಮಾಡಿದ್ದಾರೆ. ಇಷ್ಟೆಲ್ಲ ದರ ಏರಿಕೆ ಮಾಡಿದ್ರು ಗ್ಯಾರಂಟಿ ಯೋಜನೆ ಜನರಿಗೆ ತಲುಪಿಸಲು ಆಗ್ತಿಲ್ಲ ಎಂದರು. 10 ಕೆಜಿ ಅಕ್ಕಿ ಕೊಡ್ತೀವಿ ಅಂದ್ರು ಇವತ್ತಿನವರೆಗೂ ಅಕ್ಕಿ ಕೊಡಲು ಆಗಿಲ್ಲ, ಕೇಂದ್ರ ಕೊಡುವ 5 ಕೆಜಿ ಅಕ್ಕಿಯಲ್ಲೂ ಕಡಿತ ಮಾಡಿದ್ದಾರೆ. ಈಗ ಕೇಂದ್ರದ ಮೇಲೆ ಆರೋಪ ಹೊರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಅಹಂಕಾರ ಬಿಟ್ಟು ಸಿಎಂ ಸಿದ್ದರಾಮಯ್ಯ ಜಿಎಸ್‌ಟಿ ಕೌನ್ಸಿಲ್ ಸಭೆಗೆ ಹೋಗಬೇಕಿತ್ತು, ಯಾವತ್ತಾದ್ರೂ ಸಭೆಯಲ್ಲಿ ಚರ್ಚೆ ನಡೆಸಿದ್ದೀರಾ ಅಲ್ಲಿಗೆ ಹೋಗಿದ್ದೀರಾ, ಜಿಎಸ್‌ಟಿ ಕೌನ್ಸಿಲ್ ಸಭೆಗೆ ಹೋಗದಿರುವಷ್ಟು ಅಹಂಕಾರನಾ, ಕೌನ್ಸಿಲ್ ಸಭೆಗೆ ಹೋದರೆ ನಿಮ್ಮ ಮಾನ ಮರ್ಯಾದೆಗೆ ಕುಂದು ಬರುತ್ತಾ ಎಂದು ಪ್ರಶ್ನಿಸಿದರು.