ಸೇವಾ ಚಟುವಟಿಕೆಗಾಗಿ ನಾನು ಕರ್ನಾಟಕವನ್ನು ಆರಿಸಿಕೊಂಡಿಲ್ಲ. ಕರ್ನಾಟಕ ರಾಜ್ಯ, ಕನ್ನಡಾಂಬೆಯೇ ನನ್ನನ್ನು ಆರಿಸಿಕೊಂಡಿದ್ದಾಳೆ. ಇದು ಭಗವಂತನ ಇಚ್ಛೆ, ಅವನದೇ ಸಂಕಲ್ಪ ಎಂದು ‘ಒನ್‌ ವರ್ಲ್ಡ್‌ ಒನ್‌ ಫ್ಯಾಮಿಲಿ ಮಿಷನ್‘ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ಹೊಸಪೇಟೆ: ಸೇವಾ ಚಟುವಟಿಕೆಗಾಗಿ ನಾನು ಕರ್ನಾಟಕವನ್ನು ಆರಿಸಿಕೊಂಡಿಲ್ಲ. ಕರ್ನಾಟಕ ರಾಜ್ಯ, ಕನ್ನಡಾಂಬೆಯೇ ನನ್ನನ್ನು ಆರಿಸಿಕೊಂಡಿದ್ದಾಳೆ. ಇದು ಭಗವಂತನ ಇಚ್ಛೆ, ಅವನದೇ ಸಂಕಲ್ಪ ಎಂದು ‘ಒನ್‌ ವರ್ಲ್ಡ್‌ ಒನ್‌ ಫ್ಯಾಮಿಲಿ ಮಿಷನ್‘ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ‘ದಿವ್ಯ ಸಂಜೆ‘ ಸಂವಾದದಲ್ಲಿ ಖ್ಯಾತ ವೈದ್ಯ ಹಾಗೂ ವಾಗ್ಮಿ ಡಾ. ರಾಹುಲ್ ದೇವರಾಜ್ ಅವರ ಪ್ರಶ್ನೆಗಳಿಗೆ ಸದ್ಗುರು ಉತ್ತರಿಸಿದರು.ನಾನು ಭಗವಾನ್ ಸತ್ಯ ಸಾಯಿ ಬಾಬಾ ಅವರ ಶಿಷ್ಯ. ಅವರ ಶಿಕ್ಷಣ ಸಂಸ್ಥೆಗಳಲ್ಲಿ ಓದಿ ಸೇವಾ ಚಟುವಟಿಕೆಗಾಗಿ ಅವರ ಮಾರ್ಗದರ್ಶನದ ನಿರೀಕ್ಷೆಯಲ್ಲಿದ್ದೆ. ಅವರ ಮಹಾಸಮಾಧಿಯ ನಂತರ ನನಗೆ ಆಧ್ಯಾತ್ಮಿಕ ಅನುಭವವಾಯಿತು. ಅದರಂತೆ ಅವರ ಸೂಚನೆಯಂತೆ ಕರ್ನಾಟಕದಲ್ಲಿ ಸೇವಾ ಚಟುವಟಿಕೆ ಆರಂಭಿಸಿದೆವು ಎಂದು ವಿವರಿಸಿದರು.

ನಾನು ವಿಶ್ವದ ಹಲವು ದೇಶಗಳಲ್ಲಿ ಓಡಾಡಿದ್ದೇನೆ. ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಸಂಚರಿಸಿದ್ದೇನೆ. ಆದರೆ ಕನ್ನಡಿಗರಂತಹ ಒಳ್ಳೆಯ ಜನರನ್ನು ಎಲ್ಲಿಯೂ ನೋಡಲಿಲ್ಲ. ಕಲಬುರ್ಗಿಯಲ್ಲಿ ಮೊದಲ ಶಿಕ್ಷಣ ಸಂಸ್ಥೆ ಆರಂಭಿಸಿದೆವು. ನಮ್ಮ ಕೆಲಸ ಮಾತನಾಡಬೇಕೇ ಹೊರತು, ನಾವು ಮಾತನಾಡಬಾರದು ಎಂದು ಬಾಬಾ ಹೇಳಿಕೊಟ್ಟಿದ್ದರು. ಅದರಂತೆ ನಾವು ಕೆಲಸ ಮಾಡುತ್ತ ಸಾಗುತ್ತಿದ್ದೇವೆ. ನಮ್ಮ ಆಸ್ಪತ್ರೆಗಳಲ್ಲಿ ಬಿಲಿಂಗ್ ಕೌಂಟರ್‌ಗಳು ಇಲ್ಲ. ದೇಶದಲ್ಲಿ ಅನ್ನ, ಅಕ್ಷರ ಮತ್ತು ಆರೋಗ್ಯ ಎಂದಿಗೂ ವಾಣಿಜ್ಯಕ್ಕೆ ಬಳಕೆಯಾಗಿರಲಿಲ್ಲ. ಆ ಕಾಲ ಮತ್ತೆ ಬರಬೇಕಿದೆ ಎಂದು ಸದ್ಗುರು ಹೇಳಿದರು.

ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ ಬಿ.ಎನ್. ನರಸಿಂಹಮೂರ್ತಿ ಮಾತನಾಡಿ, ಧರ್ಮ ರಕ್ಷಣೆಗಾಗಿ ಸಿದ್ಧಪುರುಷರು, ಸಾಧುಸಂತರು ಅವತರಿಸಿದ್ದಾರೆ. ವಿಶ್ವದಲ್ಲಿರುವ ಎಲ್ಲ ಮಾನವರೂ ಅಮೃತಪುತ್ರರು ಎಂದು ವೇದರ್ಷಿಗಳು ಹೇಳಿದ್ದಾರೆ. ಮನುಷ್ಯ ಅಧ್ಯಾತ್ಮದ ಅನ್ವೇಷಣೆಯಿಂದ ದೂರವಾದಾಗ ದುರಂತಗಳು ಕಾಣಿಸಿಕೊಳ್ಳುತ್ತವೆ. ಅಧ್ಯಾತ್ಮದ ಶಕ್ತಿಯಿಂದಾಗಿಯೇ ಭಾರತವನ್ನು ವಿಶ್ವಗುರು ಅಂತ ಕರೆಯಬಹುದು ಎಂದು ಅಭಿಪ್ರಾಯಪಟ್ಟರು.

ಮಾಜಿ ಸಚಿವ ರಾಜುಗೌಡ, ಹಂಪಸಾಗರ​ ನರೇಗಲ್ಲ ನವಲಿ ಹಿರೇಮಠದ ಅಭಿನವ ಶಿವಲಿಂಗೇಶ್ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಪದ್ಮಶ್ರೀ ಪುರಸ್ಕೃತ ಕಲಾವಿದೆ ಮಾತಾ ಮಂಜಮ್ಮ ಜೋಗತಿ, ಸಮಾಜ ಸೇವಕರಾದ ಅಯ್ಯಾಳಿ ತಿಮ್ಮಪ್ಪ, ಎಚ್‌.ಜಿ. ವಿರೂಪಾಕ್ಷ, ಅವ್ವಾರು ಮಂಜುನಾಥ್, ವಿಕ್ರಂ ಪೋಲಾ, ಉದ್ಯಮಿಗಳಾದ ಅಶ್ವಿನ್ ಕೊತ್ತಂಬರಿ, ರಾಜೇಂದ್ರ ಕಾಕುಬಾಳು, ರಾಜು ಗುರಾಡ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ರಾಜಶೇಖರ್ ನಿರೂಪಿಸಿದರು. ಈ ವೇಳೆ ‘ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ನೃತ್ಯ ವೈಭವ ಪ್ರದರ್ಶಿಸಿದರು.

ಮಕ್ಕಳಲ್ಲಿ ಸಾಮಾಜಿಕ ಮಾಧ್ಯಮ ವ್ಯಸನ

ಸಾಮಾಜಿಕ ಮಾಧ್ಯಮಗಳ ವ್ಯಸನದ ಬಗ್ಗೆ ಎಲ್ಲ ಊರುಗಳಲ್ಲಿಯೂ ಆಕ್ಷೇಪಗಳು ಕೇಳಿಬರುತ್ತಿವೆ. ಆದರೆ, ನಮ್ಮ ಮಕ್ಕಳು ಈ ಸ್ಥಿತಿಗೆ ಬರಲು ಯಾರು ಕಾರಣ ಎನ್ನುವ ಪ್ರಶ್ನೆಯನ್ನೂ ನಾವು ಕೇಳಿಕೊಳ್ಳಬೇಕಾಗುತ್ತದೆ. ಇಂದಿನ ಜೆನ್‌ಝಿ ಮಕ್ಕಳು ಅಪ್ಪ​-ಅಮ್ಮನ ಮಾತು ಕೇಳುವುದಿಲ್ಲ. ಆದರೆ, ಸೋಷಿಯಲ್ ಮೀಡಿಯಾಗಳನ್ನು ಹೆಚ್ಚು ನಂಬುತ್ತಾರೆ, ಹೆಚ್ಚು ಅನುಸರಿಸುತ್ತಾರೆ ಎಂದು ಈಗ ಪೋಷಕರು ದೂರುತ್ತಿದ್ದಾರೆ. ಆದರೆ, ಮಕ್ಕಳ ಕೈಗೆ ಮೊದಲು ಮೊಬೈಲ್ ಕೊಟ್ಟವರು ಯಾರು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರಶ್ನಿಸಿದರು.