ನಮ್ಮ ಯುವ ಜನತೆ ಸ್ವದೇಶ, ಸ್ವಧರ್ಮ, ಸ್ವಸಂಸ್ಕೃತಿ ಅನುಸರಿಸಬೇಕು: ಡಾ.ಅನಿತಾ ಪ್ರಸಾದ್

| Published : Aug 29 2025, 01:00 AM IST

ನಮ್ಮ ಯುವ ಜನತೆ ಸ್ವದೇಶ, ಸ್ವಧರ್ಮ, ಸ್ವಸಂಸ್ಕೃತಿ ಅನುಸರಿಸಬೇಕು: ಡಾ.ಅನಿತಾ ಪ್ರಸಾದ್
Share this Article
  • FB
  • TW
  • Linkdin
  • Email

ಸಾರಾಂಶ

ದೇಶ ಮೊದಲು ಅನ್ನುವುದು ನಮ್ಮ ಬದುಕಿನ ಮೌಲ್ಯವಾಗಬೇಕು. ಸ್ವದೇಶ, ಸ್ವಧರ್ಮ, ಸ್ವಸಂಸ್ಕೃತಿ ಸದಾ ಶ್ರೇಷ್ಠ. ಇದನ್ನು ನಮ್ಮ ಯುವಜನತೆ ಅನುಸರಿಸಿದರೆ ಮಾತ್ರ ಇವುಗಳು ಉಳಿಯಬಲ್ಲವು. ಈ ನಿಟ್ಟಿನಲ್ಲಿ ಗಣೇಶೋತ್ಸವ ಆಚರಣೆ ಅತ್ಯಂತ ಮಹತ್ವದ್ದು. ದೇಶ ಸೇವೆ, ಧರ್ಮ ರಕ್ಷಣೆ ನಮ್ಮ ಕರ್ತವ್ಯ.

ಕನ್ನಡಪ್ರಭ ವಾರ್ತೆ ಮೈಸೂರು

ನಮ್ಮ ಇಂದಿನ ಯುವ ಜನತೆ ಪಾಶ್ಚಿಮಾತ್ಯ ಸಂಸ್ಕೃತಿ, ಜೀವನಶೈಲಿಗೆ ಮಾರು ಹೋಗುತ್ತಿರುವುದು ಆತಂಕಕಾರಿ. ಸ್ವದೇಶ, ಸ್ವಧರ್ಮ, ಸ್ವಸಂಸ್ಕೃತಿಯನ್ನು ನಮ್ಮ ಯುವ ಜನತೆ ಅನುಸರಿಸಬೇಕಿದೆ ಎಂದು ಉದ್ಯಮಿ, ಟ್ರಾನ್ಸ್‌ ಜೆಂಡರ್ ಕಾರ್ಯಕರ್ತೆ ಡಾ.ಅನಿತಾ ಪ್ರಸಾದ್ ತಿಳಿಸಿದರು.

ನಗರದ ಲಕ್ಷ್ಮೀಪುರಂನ ಮಾಧವ ಕೃಪಾ ಗಣೇಶೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಮೊದಲು ಅನ್ನುವುದು ನಮ್ಮ ಬದುಕಿನ ಮೌಲ್ಯವಾಗಬೇಕು. ಸ್ವದೇಶ, ಸ್ವಧರ್ಮ, ಸ್ವಸಂಸ್ಕೃತಿ ಸದಾ ಶ್ರೇಷ್ಠ. ಇದನ್ನು ನಮ್ಮ ಯುವಜನತೆ ಅನುಸರಿಸಿದರೆ ಮಾತ್ರ ಇವುಗಳು ಉಳಿಯಬಲ್ಲವು. ಈ ನಿಟ್ಟಿನಲ್ಲಿ ಗಣೇಶೋತ್ಸವ ಆಚರಣೆ ಅತ್ಯಂತ ಮಹತ್ವದ್ದು. ದೇಶ ಸೇವೆ, ಧರ್ಮ ರಕ್ಷಣೆ ನಮ್ಮ ಕರ್ತವ್ಯ. ಇದು ನಮ್ಮ ಬದುಕಿನ ಭಾಗವಾಗಬೇಕು ಎಂದು ಹೇಳಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಗಣೇಶೋತ್ಸವ ಕೇವಲ ಒಂದು ಉತ್ಸವ ಅಲ್ಲ, ಬದಲಿಗೆ ನಮ್ಮ ಸಮಾಜ ಸಂಘಟನೆಗೊಂದು ಮಹತ್ವದ ಸಂದರ್ಭ ಎಂದರು.

ಉದ್ಯಮಿ ಜಗನ್ನಾಥ ಶೆಣೈ ಮಾತನಾಡಿ, ಗಣೇಶೋತ್ಸವ ನಮ್ಮ ದೇಶದ ಸಂಸ್ಕೃತಿಯ ಅವಿಭಾಜ್ಯ ಅಂಗ ಎಂದು ಬಣ್ಣಿಸಿದರು.

ಮಾಧವ ಕೃಪಾ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಡಾ. ಲಕ್ಷ್ಮಿನರಸಿಂಹನ್, ಆರ್ ಎಸ್ಎಸ್ ಸಂಪರ್ಕ ಪ್ರಮುಖ್ ದರ್ಶನ್ ರಾಜ್, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕ ಎಲ್. ನಾಗೇಂದ್ರ, ಮಾಜಿ ಸಂಸದ ಪ್ರತಾಪ್ ಸಿಂಹ, ಮುಖಂಡರಾದ ಆರ್. ವಾಸುದೇವ ಭಟ್ ಮೊದಲಾದವರು ಇದ್ದರು.

ಮಾಧವಕೃಪಾ ಗಣೇಶೋತ್ಸವದಲ್ಲಿ ಶ್ರೀಲಲಿತಾ ಉಳಿಯಾರು ಅವರ ಹರಿಕಥೆ ಇಂದು

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಕೃಷ್ಣಮೂರ್ತಿಪುರಂನ ಮಾಧವಕೃಪಾ ಗಣೇಶೋತ್ಸವದ 38ನೇ ವರ್ಷದ ಅಂಗವಾಗಿ ಆ.29ರ ಸಂಜೆ 6.30ಕ್ಕೆ ಹರಿಕಥಾ ಕಾರ್ಯಕ್ರಮ ಏರ್ಪಡಿಸಿದೆ.

ನಗರದ ಪ್ರಸಿದ್ಧ ಹರಿಕಥಾ ವಿದುಷಿ ಶ್ರೀಲಲಿತಾ ಉಳಿಯಾರು ಅವರು ವಿಶ್ವಂಭರ ರೂಪೀ ಮಹಾಗಣಪತಿ ಮತ್ತು ಸ್ಯಮಂತಕ ಉಪಾಖ್ಯಾನ ಹರಿಕಥೆ ಪ್ರಸ್ತುತಪಡಿಸಲಿದ್ದಾರೆ. ಈಗಾಗಲೇ ದೇಶದ ಪ್ರಮುಖ ಕ್ಷೇತ್ರಗಳಲ್ಲಿ 500ಕ್ಕೂ ಹೆಚ್ಚು ಹರಿಕಥೆಗಳನ್ನು ನೀಡಿರುವ ಶ್ರೀಲಲಿತಾ ಅವರು, ಶಾಸ್ತ್ರೀಯ ಸಂಗೀತ, ಪೌರಾಣಿಕ ಕಥನ ಮತ್ತು ತತ್ತ್ವಬೋಧನೆಯ ಸಂಯೋಜನೆಯ ಮೂಲಕ ಹರಿಕಥೆಯ ಪವಿತ್ರತೆ ಉಳಿಸಿಕೊಂಡು ಸಾಗುತ್ತಿರುವ ಯುವ ಕಲಾವಿದೆಯಾಗಿದ್ದಾರೆ.

ಇವರಿಗೆ ಸಂಗತಿಯಾಗಿ ಈಕೆಯ ತಮ್ಮ ಶ್ರಿಹರಿ ಆಚಾರ್ಯ ಉಳಿಯಾರು ಕೀಬೋರ್ಡ್‌ನಲ್ಲಿ ಹಾಗೂ ವಿಡ್. ಶಿವಕುಮಾರ್, ತಬಲಾ ವಾದನದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಕ್ತಾದಿಗಳು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಘ್ನೇಶ್ವರನ ಅನುಗ್ರಹ ಪಡೆಯುವಂತೆ ಆಯೋಜಕರು ಹೃತ್ಪೂರ್ವಕ ಆಹ್ವಾನಿಸಿದ್ದಾರೆ. ಕಾರ್ಯಕ್ರಮಗಳಿಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ. 8880083388, 9741316555 ಸಂಪರ್ಕಿಸುವುದು.