ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಕಾಲಮಿತಿಯೊಳಗೆ ಜಾರಿಗೆ ತಂದಿದ್ದೇವೆ. ನುಡಿದಂತೆ ನಡೆಯುತ್ತಿರುವ ಸರ್ಕಾರ ನಮ್ಮದು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಸೋಮವಾರ ಇಲ್ಲಿನ ನೇಕಾರ ನಗರದ ಹನ್ಫಿ ಟೌನ್ ನಲ್ಲಿ 2021-22ನೇ ಸಾಲಿನ 15ನೇ ಹಣಕಾಸಿನ ಯೋಜನೆಯ ಅಡಿ ₹4.15 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ವೆಟ್ ವೆಲ್ ಹಾಗೂ ಒಳಚರಂಡಿ ಕಾಮಗಾರಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಬಹಳ ಅನುಕೂಲವಾಗಿದೆ. ₹58 ಸಾವಿರ ಕೋಟಿ ಹಣವನ್ನು ಈ ಎಲ್ಲ ಯೋಜನೆಗಳಿಗೆ ವ್ಯಯಿಸಲಾಗುತ್ತಿದೆ. ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳು ಜನರಿಗೆ ತಲುಪಿವೆ. ಈ ಎಲ್ಲ ಯೋಜನೆಗಳಿಂದ ರಾಜ್ಯದ ಜನರಿಗೆ ಅನುಕೂಲಕರವಾದ ವಾತಾವರಣ ನಿರ್ಮಾಣ ಮಾಡಿಕೊಟ್ಟಿವೆ. ಬರಗಾಲವಿದ್ದರೂ ರಾಜ್ಯ ಸುಭದ್ರವಾಗಿದೆ ಎಂದರು.
ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿ, ನನ್ನ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಕಂಕಣ ಬದ್ಧನಾಗಿದ್ದೇನೆ. ಕಳೆದ 10 ವರ್ಷಗಳಿಗೂ ಅಧಿಕ ಈ ಭಾಗದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಸಹ ಕ್ಷೇತ್ರದಲ್ಲಿ ಬದಲಾವಣೆ ತರಲು ಪಣ ತೊಟ್ಟಿದ್ದೇನೆ.
ಯಾವುದೇ ಸಮಸ್ಯೆಗಳು ಉಲ್ಬಣವಾದರೂ ಬಗೆಹರಿಸಲು ನಾನು ಸದಾ ಸಿದ್ಧನಿರುವೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು. ಹು-ಧಾ ಮಹಾನಗರ ಪಾಲಿಕೆಯ ಮೇಯರ್ ವೀಣಾ ಭರದ್ವಾಡ್, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಸೇರಿದಂತೆ ಅಧಿಕಾರಿಗಳು, ಸಾರ್ವಜನಿಕರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))