ಸಾರಾಂಶ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ವಿರೋಧ ಪಕ್ಷದವರು ಅಭಿವೃದ್ಧಿ ಕೆಲಸಗಳು ನಿಂತಿವೆ, ಗ್ಯಾರಂಟಿ ಯೋಜನೆ ಘೋಷಣೆಯಾದ ಮೇಲೆ ಹಣವಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಸುಳ್ಳು, ಅಪಪ್ರಚಾರ, ಬಿಟ್ಟಿ ಕೆಲಸಗಳಲ್ಲಿ ಅವರು ನಿರತರಾಗಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.ಜಿಲ್ಲೆಯ ಇಂಡಿ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಸೋಮವಾರ ನಡೆದ ತಾಲೂಕಿನ ವಿವಿಧ ಕಾಮಗಾರಿಗಳ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ. ಜನರು ನಾವು ಏನೂ ಮಾಡಿಲ್ಲ ಎಂದರೆ ತಲೆಬಾಗಿ ಒಪ್ಪಿಕೊಳ್ಳುತ್ತೇವೆ. ನಾವು ಅಭಿವೃದ್ಧಿ ಮಾಡಿದ್ದೇವೆ ಎಂದು ಜನ ಹೇಳಿದರೆ ನೀವು ರಾಜಕೀಯ ನಿವೃತ್ತಿ ಪಡೆಯಿರಿ ಎಂದು ವಿಪಕ್ಷ ನಾಯಕರಿಗೆ ಸವಾಲೆಸೆದರು.
ಸುಮ್ಮನೆ ಕುಳಿತು ಅಪಪ್ರಚಾರ, ಸುಳ್ಳು ಹೇಳಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದರೆ ಅದು ಸಾಧ್ಯವಿಲ್ಲ. ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ. ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರದ ಸಾಧನೆ ಮತ್ತು ಬಿಜೆಪಿ ಸರ್ಕಾರದ ಸಾಧನೆ ಬಗ್ಗೆ ಸಾರ್ವಜನಿಕವಾಗಿ ದಾಖಲೆ ಸಮೇತ ಚರ್ಚೆ ನಡೆಸೋಣ. ಜನರೇ ತೀರ್ಮಾನಿಸಲಿ ಎಂದು ಸವಾಲು ಹಾಕಿದರು.ಬಿಜೆಪಿ-ಜೆಡಿಎಸ್ ಇಬ್ಬರೂ ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎನ್ನುವ ಅಪಪ್ರಚಾರ ಮಾಡಿ ಜನರಿಂದಲೇ ತಿರಸ್ಕಾರಕ್ಕೆ ಒಳಗಾಗಿದ್ದಾರೆ. ನಾವು ಇವರ ಅಪಪ್ರಚಾರಕ್ಕೆ ಜನರ ಅಭಿವೃದ್ಧಿ ಮತ್ತು ಜನ ಕಲ್ಯಾಣ ಕಾರ್ಯಕ್ರಮಗಳ ಮೂಲಕವೇ ಉತ್ತರ ಕೊಡುತ್ತಿದ್ದೇವೆ ಎಂದರು.
500 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುವುದು, 1.23 ಕೋಟಿ ಕುಟುಂಬಗಳು ಗೃಹಲಕ್ಷ್ಮಿ ಹಣ ಪಡೆದಿರುವುದು, 1.64 ಕೋಟಿ ಮನೆಗಳಿಗೆ ಉಚಿತವಾಗಿ 200 ಯೂನಿಟ್‌ವರೆಗೆ ಹಣ ಪಡೆಯುತ್ತಿರುವುದು, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳ ಮೂಲಕ ಕೋಟಿ ಕೋಟಿ ಕನ್ನಡಿಗರ ಬದುಕಿಗೆ ನೆರವಾಗಿರುವುದು ಅಭಿವೃದ್ಧಿ ಅಲ್ಲವೇ ಗ್ಯಾರಂಟಿಗಳಲ್ಲದೆ ₹83 ಸಾವಿರ ಕೋಟಿ ಹಣವನ್ನು ಅಭಿವೃದ್ಧಿಗೆ ತೆಗೆದಿಟ್ಟಿರುವುದು ನಮ್ಮ ಆಡಳಿತಕ್ಕೆ ಸ್ಪಷ್ಟ ನಿದರ್ಶನ ಎಂದು ಹೇಳಿದರು.242 ಭರವಸೆ ಈಡೇರಿಸಿದ್ದೇವೆ:
ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಬಿಜೆಪಿ, ಜೆಡಿಎಸ್‌ನವರು ಹೇಳುತ್ತಿರುವುದು ಅಪ್ಪಟ ಸುಳ್ಳು. ನಮ್ಮ ಸರ್ಕಾರ ಬಂದಾಗ ಯಾವತ್ತೂ ಖಜಾನೆ ಖಾಲಿಯಾದ ಉದಾಹರಣೆಯೇ ಇಲ್ಲ. ಈ ಬಾರಿ 593 ಭರವಸೆ ಕೊಟ್ಟಿದ್ದೆವು. ಎರಡೇ ವರ್ಷದಲ್ಲಿ 242 ಭರವಸೆ ಈಡೇರಿಸಿದ್ದೇವೆ. ಆದರೆ, ಬಿಜೆಪಿಯವರು 20218ರಲ್ಲಿ 600 ಭರವಸೆ ಕೊಟ್ಟಿದ್ದು, ಕೇವಲ ಶೇ.10ನಷ್ಟು ಈಡೇರಿಸಿದ್ದಾರೆ ಎಂದು ತಿರುಗೇಟು ನೀಡಿದರು.