ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಮಾಜದಲ್ಲಿ ನಾವೆಲ್ಲರೂ ಸಮಾನರು, ತಾರತಮ್ಯ ಬೇಧಭಾವ ತೊರೆದು ಎಲ್ಲರೂ ಸಮಾನರೆಂಬ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಡೆಯುವ ಮೂಲಕ ಸಂವಿಧಾನದ ಆಶಯವನ್ನು ಪ್ರತಿಯೊಬ್ಬರು ಎತ್ತಿ ಹಿಡಿಯಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಕರೆ ನೀಡಿದರು.ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ದಿನ ಹಾಗೂ ವಿಚಾರ ಸಂಕಿರಣ-೨೦೨೪, ಡಾ.ಬಿ.ಆರ್. ಅಂಬೇಡ್ಕರ್ ಜೀವನದ ಪ್ರಮುಖ ಘಟ್ಟಗಳ ಕುರಿತ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಸಂವಿಧಾನ ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ. ಸಂವಿಧಾನದ ಪೀಠಿಕೆಯಲ್ಲಿಯೇ ಸಮಾನತೆ, ಭ್ರಾತೃತ್ವ, ಮೂಲಭೂತ ಹಕ್ಕುಗಳು ಹಾಗೂ ನಾಗರಿಕರ ಕರ್ತವ್ಯಗಳು, ಅಸ್ಪೃಶ್ಯತೆ ನಿವಾರಣೆ, ಜೀವಿಸುವ ಹಕ್ಕು, ಉತ್ತಮ ಜೀವನ ನಿರ್ವಹಣೆ ಕುರಿತ ಅಂಶಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ನಮ್ಮ ದೇಶದ ಸಂವಿಧಾನದ ಪೀಠಿಕೆ ಭಾಗ ಸಮಾನತೆ ಹಾಗೂ ಭ್ರಾತೃತ್ವದ ಕೈಗನ್ನಡಿಯಾಗಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಸಂವಿಧಾನ ಒದಗಿಸುತ್ತದೆ ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಸಂವಿಧಾನದ ಪ್ರಸ್ತಾವನೆಯಲ್ಲಿ ಪ್ರತಿಯೊಂದು ಅಂಶಗಳು ಒಳಗೊಂಡಿದ್ದು, ಸರ್ವಧರ್ಮ, ಸರ್ವ ಜಾತಿಗೂ ಸಮಾನ ಅವಕಾಶ ಹಾಗೂ ಸಮಪಾಲು ಎಂಬ ಅಂಶವನ್ನು ಒಳಗೊಂಡಿದೆ. ದೇಶದ ಅನೇಕ ಸಮಸ್ಯೆಗಳಿಗೆ ಪರಿಹಾರಾತ್ಮಕವಾಗಿ ಸಲಹೆಗಳನ್ನು ಸಂವಿಧಾನ ನೀಡುತ್ತದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕುರಿತು ಸಂವಿಧಾನ ತಿಳಿಸುತ್ತದೆ. ಬೇರೆ ದೇಶಗಳಿಗಿಂತ ನಮ್ಮ ದೇಶದ ಸಂವಿಧಾನ ಅತ್ಯಂತ ಗಟ್ಟಿಯಾಗಿದೆ. ಸಂವಿಧಾನದ ಆಶಯ ಮತ್ತು ಯಶಸ್ಸು ಸಂಭ್ರಮಿಸುವ ಇಂತಹ ಕಾರ್ಯಕ್ರಮ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡದೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಸಂವಿಧಾನ ಈ ನೆಲದ ಕಾನೂನಾಗಿದೆ. ಅದು ಶ್ರೇಷ್ಠ ಪುಸ್ತಕ. ನಮ್ಮೆಲ್ಲರನ್ನೂ ಒಂದುಗೂಡಿಸಿದ್ದು ಡಾ.ಬಿ.ಆರ್.ಅಂಬೇಡ್ಕರ ರಚಿಸಿರುವ ಸಂವಿಧಾನ. ಸಮಾಜದಲ್ಲಿ ಶಾಂತಿಯುತ ಜೀವನ ನಡೆಸಲು, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ನೀಡುವ ಸಂವಿಧಾನವಾಗಿದೆ. ಸಂವಿಧಾನದ ಆಶಯಕ್ಕನುಗುಣವಾಗಿ ಪ್ರತಿಯೊಬ್ಬರು ನಡೆಯುವ ಮೂಲಕ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು.ಅಭಿಷೇಕ ಚಕ್ರವರ್ತಿ ಮಾತನಾಡಿದರು. ಸಂವಿಧಾನ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಚರ್ಚಾಸ್ಪರ್ಧೆ, ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ನಗರಾಭಿವೃದ್ಧಿ ಇಲಾಖೆ ಯೋಜಾನಾ ನಿರ್ದೇಶಕ ಬದ್ರುದ್ದಿನ್ ಸೌದಾಗಾರ್, ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಅಜೂರ, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಪಾಲಿಕೆ ಸದಸ್ಯರಾದ ಆರತಿ ಶಹಾಪುರ, ಮಲ್ಲಿಕಾರ್ಜುನ ಬಟಗಿ, ಮಹೇಶ ಕ್ಯಾತನವರ, ಪಾರ್ವತಿ ಕುರ್ಲೆ, ಜಗದೇವ ಸೂರ್ಯವಂಶಿ ಸೇರಿದಂತೆ ಇತರರು ಇದ್ದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುಂಡಲೀಕ ಮಾನವರ ಸ್ವಾಗತಿಸಿದರು.ಭಾರತ ಸಂವಿಧಾನ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಭಾರತ ಸಂವಿಧಾನದ ಹೆಜ್ಜೆಗಳು ಕುರಿತಾಗಿ ಕೂಡಗಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಉಪನ್ಯಾಸಕ ಬಸವರಾಜ ಜಾಲವಾದ ವಿಷಯ ಮಂಡನೆ ಮಾಡಿದರು. ಭಾರತದ ಸಂವಿಧಾನದ ಪ್ರಸ್ತಾವನೆ ಆಶಯಗಳ ಕುರಿತು ಲಚ್ಯಾಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಭೀಮರಾವ ಗೊಣಸಗಿ ವಿಷಯ ಮಂಡನೆ ಮಾಡಿದರು. ಈ ಗೋಷ್ಠಿಗೆ ಅಧ್ಯಕ್ಷತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ವಹಿಸಿದ್ದರು.
ಸಂವಿಧಾನದ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು ಹಾಗೂ ಕಲ್ಯಾಣ ರಾಜ್ಯದ ಪರಿಕಲ್ಪನೆ ವಿಷಯದ ಕುರಿತು ನ್ಯಾಯವಾದಿಗಳ ಸಂಘದ ಗೌರವ ಕಾರ್ಯದರ್ಶಿ ಸುರೇಶ್ ಚೂರಿ ವಿಷಯ ಮಂಡನೆ ಮಾಡಿದರು. ಸಂವಿಧಾನ ಅಂದು ಮತ್ತು ಮುಂದು ವಿಷಯದ ಕುರಿತು ಪ್ರಾಧ್ಯಾಪಕಿ ಡಾ.ಸುಜಾತ ಚಲವಾದಿ ವಿಷಯ ಮಂಡನೆ ಮಾಡಿದರು. ನಿವೃತ್ತ ಉಪ ನಿರ್ದೇಶಕ ಬಿ.ಆರ್.ಬನಸೋಡೆ ಅಧ್ಯಕ್ಷತೆ ವಹಿಸಿದ್ದರು.ಛಾಯಾಚಿತ್ರಗಳ ಪ್ರದರ್ಶನ:
ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನದದ ಕುರಿತ ಛಾಯಾಚಿತ್ರಗಳ ಪ್ರದರ್ಶನ ನಡೆಸಲಾಯಿತು. ಈ ವೇಳೆ ವಿದ್ಯಾರ್ಥಿಗಳು, ಶಿಕ್ಷಕರು ಬಿಡಿಸಿದ ಚಿತ್ರಕಲೆಯನ್ನು ಸಹ ಪ್ರದರ್ಶಿಸಲಾಯಿತು.ಮೆರವಣಿಗೆ: ಸಂವಿಧಾನ ದಿನದ ಪ್ರಯುಕ್ತ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಜಿಪಂ ಸಿಇಒ ರಿಷಿ ಆನಂದ ಚಾಲನೆ ನೀಡಿದರು. ಜಾಥಾದಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಜಾಗೃತಿ ಜಾಥಾದ ಬಳಿಕ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು.
ಕೋಟ್ಮಹಿಳೆಯರ ಸಬಲೀಕರಣಕ್ಕಾಗಿ ಸಂವಿಧಾನದಲ್ಲಿ ಒತ್ತು ನೀಡಲಾಗಿದೆ. ಸಂವಿಧಾನದ ಮೂಲಕ ಮತದಾನದ ಹಕ್ಕು ಕಲ್ಪಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ತನ್ನ ವಿಧ್ವತ್ತಿನಿಂದ ವಿಶ್ವ ಪ್ರಸಿದ್ಧರಾದರು. ಅವರ ಆಚಾರ-ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಜ್ಞಾನಕೇಂದ್ರವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಪುಸ್ತಕದ ದೊಡ್ಡ ಶಕ್ತಿಯಾಗಿದ್ದರು.
ಎಚ್.ಟಿ.ಪೋತೆ, ಹಿರಿಯ ಸಾಹಿತಿ