ಸಂವಿಧಾನವು ದೇಶದಲ್ಲಿ ಸಮಾನತೆ, ಭಾತೃತ್ವವನ್ನು ಕಲ್ಪಿಸಿದೆ. ದೇಶದ ಐಕ್ಯತೆ, ಸಮಗ್ರತೆ ಕಾಪಾಡಿ, ಸಮೃದ್ಧ ರಾಷ್ಟçವನ್ನಾಗಿ ಮಾಡಲು ಎಲ್ಲರೂ ಶ್ರಮಿಸೋಣ

ಸಂಡೂರು: ಭಾರತದ ಸಂವಿಧಾನವು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ಲಿಖಿತ ಸಂವಿಧಾನವಾಗಿದೆ. ಸಂವಿಧಾನವು ದೇಶದಲ್ಲಿ ಸಮಾನತೆ, ಭಾತೃತ್ವವನ್ನು ಕಲ್ಪಿಸಿದೆ. ದೇಶದ ಐಕ್ಯತೆ, ಸಮಗ್ರತೆ ಕಾಪಾಡಿ, ಸಮೃದ್ಧ ರಾಷ್ಟçವನ್ನಾಗಿ ಮಾಡಲು ಎಲ್ಲರೂ ಶ್ರಮಿಸೋಣ ಎಂದು ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ತಿಳಿಸಿದರು.

ಪಟ್ಟಣದ ಛತ್ರಪತಿ ಶಿವಾಜಿ ವಿದ್ಯಾಮಂದಿರದ ಮೈದಾನದಲ್ಲಿ ಸೋಮವಾರ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ೭೭ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

೧೯೫೦ರಲ್ಲಿ ಸಂವಿಧಾನ ಜಾರಿಯಾದ ನಂತರ ದೇಶವು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದೆ. ಸಂಸದ ಈ. ತುಕಾರಾಂ ಹಾಗೂ ಶಾಸಕಿ ಅನ್ನಪೂರ್ಣ ಈ.ತುಕಾರಾಂ ನೇತೃತ್ವದಲ್ಲಿ ಸಂಡೂರು ಕ್ಷೇತ್ರದ ಸವಾಂಗೀಣ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ತಾಲೂಕಿನ ೨೧ ಗ್ರಾಪಂ ವ್ಯಾಪ್ತಿಯಲ್ಲಿ ೩೧೮೦ ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಂಡೂರಿನಲ್ಲಿ ಜಿ+೨ ಮಾದರಿಯಲ್ಲಿ ೧೫೩೦ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳಲ್ಲಿ ೬೦೦ ಮನೆಗಳು ಹಂಚಿಕೆಗೆ ಸಿದ್ಧವಾಗುತ್ತಿವೆ ಎಂದರು.ಕಾಯಕ ಯೋಗಿ ಪ್ರಶಸ್ತಿ:

ಕಾರ್ಯಕ್ರಮದಲ್ಲಿ ರೈತ ಸಂಘದಿಂದ ತಹಶೀಲ್ದಾರ್ ಜಿ.ಅನಿಲ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ, ರೋಷನ್ ಜಮೀರ್, ಗಿಡಮೂಲಿಕೆಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವ ಸುಬ್ಬಯ್ಯ ಹಾಗೂ ಹಾವು, ಚೇಳು ಕಡಿತಕ್ಕೆ ಔಷಧಿ ನೀಡುವ ನಾಗಲಾಪುರದ ದುರ್ಗಪ್ಪ ಅವರಿಗೆ ಕಾಯಕ ಯೋಗಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿರುವ ಸುಶೀಲಾನಗರದ ನಾಗರಜ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಪುರಸಭೆಯಿಂದ ಪ್ಲಾಸ್ಟಿಕ್ ಮುಕ್ತಗೊಳಿಸುವ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಳಸಬಹುದಾದ ಪೇಪರ್ ಬ್ಯಾಗ್, ಕಪ್, ಬಟ್ಟೆ ಬ್ಯಾಗ್ ಮುಂತಾದ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಪೊಲೀಸ್, ಗೃಹ ರಕ್ಷಕ ದಳ, ಎನ್‌ಸಿಸಿ, ಸ್ಕೌಟ್ ಆ್ಯಂಡ್ ಗೈಡ್ಸ್, ಸೇವಾದಳ ಸೇರಿದಂತೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಪಥ ಸಂಚಲನೆ ನೋಡುಗರ ಗಮನ ಸೆಳೆಯಿತು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ನಡಿಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ವೈವಿದ್ಯತೆಯಿಂದ ಕೂಡಿದ್ದಲ್ಲದೆ, ದೇಶದ ಸಾಂಸ್ಕೃತಿಕ ವೈವಿಧ್ಯತೆಗೆ ಕನ್ನಡಿ ಹಿಡಿಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ ಸ್ವಾಗತಿಸಿ, ಶಾಸಕಿ ಅನ್ನಪೂರ್ಣ ಈ.ತುಕಾರಾಂ ಕಳುಹಿಸಿದ್ದ ಗಣರಾಜ್ಯೋತ್ಸವದ ಸಂದೇಶವನ್ನು ವಾಚಿಸಿದರು. ಬಿಆರ್‌ಪಿ ಮಂಜುನಾಥ್ ಹಾದಿಮನಿ ಕಾರ್ಯಕ್ರಮ ನಿರೂಪಿಸಿದರು. ತಾಪಂ ಇಒ ಮಡಗಿನ ಬಸಪ್ಪ, ಸರ್ಕಲ್ ಇನ್‌ಸ್ಪೆಕ್ಟರ್ ಮಹೇಶ್‌ಗೌಡ ಬಿ., ಪುರಸಭೆ ಮುಖ್ಯಾಧಿಕಾರಿ ಬಿ.ವಿನಯ್‌ಕುಮಾರ್ ಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಎಸ್.ನೂರುದ್ದೀನ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಶಾಲಾ ಕಾಲೇಜುಗಳ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.