ವಿಜಯಪುರ: ವಿಜಯಪುರ ಪುರಸಭೆಯಲ್ಲಿ ಖಾತೆ ಬದಲಾವಣೆಗಾಗಿ ಸಾರ್ವಜನಿಕರು ಕೊಡುವಂತಹ ಅರ್ಜಿಗಳನ್ನು ವಿನಾಕಾರಣ ಬಾಕಿ ಉಳಿಸಿಕೊಂಡು ಸುತ್ತಾಡಿಸುವುದರ ಜೊತೆಗೆ ಒಂದೇ ವರ್ಷಕ್ಕೆ ಎರಡು ಬಾರಿ ತೆರಿಗೆ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಪುರಸಭೆ ಸದಸ್ಯ ಎಂ.ಸತೀಶ್ ಕುಮಾರ್ ಪುರಸಭೆ ಮುಂದೆ ಅರ್ಜಿದಾರರೊಂದಿಗೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸತೀಶ್ ಕುಮಾರ್, ವೈದ್ಯೆ ಲಲಿತಮ್ಮ ಖಾತೆ ಬದಲಾವಣೆಗಾಗಿ ಕಳೆದ ವರ್ಷ ೮ನೇ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಖಾತೆ ಮಾಡದೇ ವಿನಾಕಾರಣ ಅಲೆದಾಡಿಸುತ್ತಿದ್ದಾರೆ. ವರ್ಷಕ್ಕೊಮ್ಮೆ ಕ್ರಮವಾಗಿ ತೆರಿಗೆ ಕಟ್ಟುವಂತಹ ನಾಗರಿಕರನ್ನು ಅವರ ಕೆಲಸ ನಿಮಿತ್ತ ಬಂದಾಗ, ಕನಿಷ್ಟ ಅವರಿಗೆ ಕುಳಿತುಕೊಳ್ಳುವುದಕ್ಕೆ ಕುರ್ಚಿಗಳನ್ನೂ ನೀಡದೇ ಅಗೌರವ ತೋರಿಸುತ್ತಿದ್ದಾರೆ. ನಾಗರಿಕರಿಗೂ ಕನಿಷ್ಟ ಗೌರವ ಸಿಗುತ್ತಿಲ್ಲ.ನಾಗರಿಕರು ಖಾತೆಗಳಿಗಾಗಿ ಅರ್ಜಿಗಳನ್ನು ಸಲ್ಲಿಸಿದಾಗ, ಯಾವುದಾದರೂ ದಾಖಲೆಗಳ ಕೊರತೆಯಿದ್ದರೆ, ಅವರಿಗೆ ತಿಳಿಸಿ, ಖಾತೆ ಮಾಡಲು ತೊಡಕುಗಳಿದ್ದರೆ ಅವರಿಗೆ ಹಿಂಬರಹ ಕೊಡಿ ಎಂದು ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ, ಇನ್ನೆರಡು ದಿನಗಳಲ್ಲಿ ಖಾತೆ ಮಾಡಿಕೊಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ತಿಂಗಳುಗಳೇ ಕಳೆದರೂ ಇದುವರೆಗೂ ಖಾತೆ ಮಾಡಿಕೊಟ್ಟಿಲ್ಲ. ಬಹಳಷ್ಟು ಅರ್ಜಿದಾರರ ಆರೋಪವೂ ಇದೆ ಆಗಿದೆ.
ಅಧಿಕಾರಿಗಳು ನಿಗದಿತ ಸಮಯದಲ್ಲಿ ಖಾತೆಗಳು ಮಾಡಿಕೊಡದಿದ್ದರೆ, ಅವರು ಇಲ್ಲಿ ಕರ್ತವ್ಯ ನಿರ್ವಹಣೆ ಮಾಡುವುದು ಬೇಡ. ಸಾರ್ವಜನಿಕರೇನು ಇವರಿಗೆ ಗುಲಾಮರಾ? ಇವರು ಕರೆದಾಗಲೆಲ್ಲಾ ಬರೋದಕ್ಕೆ? ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತನೆ ಮಾಡಬೇಕು ಎಂದು ಸಲಹೆ ನೀಡಿದರು.ಪುರಸಭೆ ಸದಸ್ಯ ಸಿ.ಎಂ.ರಾಮು ಮಾತನಾಡಿ, ಅಧಿಕಾರಿಗಳಿಗೆ ಸಾರ್ವಜನಿಕರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಬದ್ಧತೆಯೂ ಇಲ್ಲ. ಬಹಳಷ್ಟು ಮಂದಿ ನಾಗರಿಕರ ಬಳಿ ಅರ್ಜಿಗಳನ್ನೂ ಪಡೆಯುವುದಿಲ್ಲ. ಕೆಲವರು ತೆರಿಗೆ ಕಟ್ಟಿದ್ದರೂ, ಅದನ್ನು ಆಪ್ ಗ್ರೇಡ್ ಮಾಡುವುದಿಲ್ಲ. ಪುನಃ ನಾಗರಿಕರು ಬಂದು ತೆರಿಗೆ ಕಟ್ಟಿರುವುದು ಅಪ್ ಗ್ರೇಡ್ ಮಾಡಿಕೊಡಿ ಎಂದರೆ, ಹಿಂದೆ ಕಟ್ಟಿರುವ ರಸೀದಿ ಕೊಡಿ ಎನ್ನುತ್ತಾರೆ. ರಸೀದಿ ಇಲ್ಲದಿದ್ದರೆ, ಪುನಃ ತೆರಿಗೆ ಕಟ್ಟಬೇಕು. ಇದು ಸಂಪೂರ್ಣವಾಗಿ ಅಧಿಕಾರಿಗಳ ನಿರ್ಲಕ್ಷ್ಯತನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಸಿ.ಶ್ರೀನಿವಾಸ್ ಮಾತನಾಡಿ, ಪುರಸಭೆಯಲ್ಲಿ ಅರ್ಹ ಅರ್ಜಿದಾರರು, ನೇರವಾಗಿ ಬಂದು ಖಾತೆಗಾಗಿ ಅರ್ಜಿ ಕೊಟ್ಟರೆ, ಇಲ್ಲಿ ಖಾತೆಗಳಾಗುವುದಿಲ್ಲ. ಮಧ್ಯವರ್ತಿಗಳು, ಪ್ರಭಾವಿಗಳ ಮೂಲಕ ಬಂದರೆ ಅಧಿಕಾರಿಗಳು ಮೂರೇ ದಿನಕ್ಕೆ ಖಾತೆ ಮಾಡಿಕೊಡುತ್ತಾರೆ. ಬಡವರ ಖಾತೆಗಳಿಗೆ ಸರ್ವರ್ ಸಮಸ್ಯೆ ಕಾಡುತ್ತದೆ. ಇಂತಹ ವ್ಯವಸ್ಥೆ ಇಲ್ಲಿದೆ ಎಂದು ಆರೋಪಿಸಿದರು.
ಸಾರ್ವಜನಿಕರಿಗೆ ಅಧಿಕಾರಿಗಳ ಕಡೆಯಿಂದ ಆಗಿರುವಂತಹ ಸಮಸ್ಯೆಯನ್ನು ಶೀಘ್ರ ಬಗೆಹರಿಸುವುದರ ಜೊತೆಗೆ, ಮುಂದೆ ಇಂತಹ ಸಮಸ್ಯೆ ಉದ್ಭವವಾಗದಂತೆ ಮುಂಜಾಗ್ರತೆ ವಹಿಸುತ್ತೇವೆ ಎಂದು ಪುರಸಭೆ ಅಧ್ಯಕ್ಷೆ ಎಸ್.ಭವ್ಯಾಮಹೇಶ್ ಮನವಿ ಮಾಡಿಕೊಂಡ ಬಳಿಕ ಪ್ರತಿಭಟನೆ ಕೈ ಬಿಟ್ಟರು.
(ಫೋಟೋ ಕ್ಯಾಪ್ಞನ್ )ವಿಜಯಪುರ ಪುರಸಭೆಯಲ್ಲಿ ಸಾರ್ವಜನಿಕರ ಖಾತೆಗಳು ಮಾಡಿಕೊಡುತ್ತಿಲ್ಲವೆಂದು ಆರೋಪಿಸಿ, ಪುರಸಭೆ ಸದಸ್ಯರಾದ ಎಂ.ಸತೀಶ್ ಕುಮಾರ್, ಸಿ.ಎಂ.ರಾಮು, ಡಾ.ಬಿ.ಆರ್.ಅಂಬೇಡ್ಕರ್ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಸಿ.ಶ್ರೀನಿವಾಸ್ ನೇತೃತ್ವದಲ್ಲಿ ಖಾತೆದಾರರು ಪ್ರತಿಭಟನೆ ನಡೆಸಿದರು.