ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಶೋಷಿತ ಸಮುದಾಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೇಜೋವಧೆ ಮಾಡಲು ಹುನ್ನಾರ ನಡೆಸಿರುವ ಬಿಜೆಪಿ ನಡೆಯನ್ನು ಖಂಡಿಸಿ ಮಂಗಳವಾರ ಕರ್ನಾಟಕ ಪ್ರದೇಶ ಕುರುಬರ ಸಂಘ, ಶೋಷಿತ ಸಮಹದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪದಾಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸಿಎಂ ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಇತ್ತೀಚೆಗೆ ರಾಜ್ಯದಲ್ಲಿ ಕೋಮುವಾದಿಗಳು ಮತ್ತು ಜಾತಿವಾದಿ, ಪಟ್ಟಬದ್ಧ ಹಿತಾಸಕ್ತಿಗಳು ಅಧಿಕಾರ ದಾಹ ಮತ್ತು ಖುರ್ಚಿ ಆಸೆಗಾಗಿ ಜನಪರ ಇರುವ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ದೊಡ್ಡಮಟ್ಟದ ಪಡ್ಯಂತ್ರ ರೂಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ 15 ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವ ಸೇರಿದಂತೆ 40 ವರ್ಷಗಳ ಸುದೀರ್ಘ ರಾಜಕೀಯದಲ್ಲಿ ಹಲವು ಮಹತ್ವದ ಅಧಿಕಾರದ ಹುದ್ದೆಯಲ್ಲಿದ್ದರೂ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದ ನಾಯಕ ಸಿದ್ದರಾಮಯ್ಯನವರ ವರ್ಚಸ್ಸಿಗೆ ಮಸಿ ಬಳಿಯಲು, ಅವರನ್ನು ರಾಜಕೀಯವಾಗಿ ಮುಗಿಸಿಯೇ ಬಿಡುವ ಹುನ್ನಾರ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರದು ಯಾವುದೇ ಪಾತ್ರ ಇರದೇ ಇದ್ದರೂ ಬಿಜೆಪಿ ಸರ್ಕಾರದಲ್ಲಿ 50:50 ಅನುಪಾತದಲ್ಲಿ ಸೈಟ್ ಹಂಚಿಕೆ ಕಾನೂನನ್ನು ಮಾಡಿ ಆ ಸಮಯದಲ್ಲಿ ಸಿದ್ದರಾಮಯ್ಯನವರ ಪತ್ನಿಯ 3 ಎಕರೆ 26 ಗುಂಟೆ ಜಾಗ ವಶಪಡಿಸಿಕೊಂಡು ಸುಮಾರು 1 ಎಕರೆಯಷ್ಟು (14 ಪ್ಲಾಟ್) ನೀಡಿದ್ದಾರೆ. ಇದು ಸರ್ಕಾರದ ನಿಯಮದಂತೆ ಬಿಜೆಪಿ ಸರ್ಕಾರ ನೀಡಿದ್ದು, ಈ ವಿಷಯದಲ್ಲಿ ಸಿದ್ದರಾಮಯ್ಯನವರ ಪಾತ್ರ ಏನೂ ಇಲ್ಲ. ಆದರೂ ಸಿದ್ದರಾಮಯ್ಯನವರ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿರುವುದು ಖಂಡನೀಯ ಎಂದರು.ಶಾಸಕ ಆಸೀಫ್ ಸೇಠ್, ಮಡೆಪ್ಪ ತೋಳಿನವರ, ಬಸವರಾಜ ಬಸಳಿಗುಂದಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಭರಮಣ್ಣ ಉಪ್ಪಾರ, ರಾಜಶೇಖರ ತಳವಾರ, ಮಲ್ಲೇಶ ಚೌಗುಲೆ ಮತ್ತಿತರರು ಪಾಲ್ಗೊಂಡಿದ್ದರು.ಹಿಂದುಳಿದ ನಾಯಕನ ವಿರುದ್ಧ ಷಡ್ಯಂತ್ರ:
ಜೆಡಿಎಸ್ ನಾಯಕ ಮತ್ತು ಕೇಂದ್ರ ಸರ್ಕಾರದ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಬಿಜೆಪಿ ನಾಯಕರಾದ ಅಶೋಕ, ಬಿ.ವೈ. ವಿಜಯೇಂದ್ರ ಮತ್ತಿತರರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡುತ್ತಿರುವುದರ ಹಿಂದೆ ಹಲವು ಕಾರಣಗಳಿವೆ. ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಿ ರಾಜಕೀಯವಾಗಿ ಮುಗಿಸಿ ಬಿಟ್ಟರೆ ಶಾಶ್ವತವಾಗಿ ಹಿಂದುಳಿದ ವರ್ಗದವರನ್ನು ಅಧಿಕಾರದಿಂದ ದೂರವಿಡಬಹುದು ಎನ್ನುವ ಕುತಂತ್ರ ಅಡಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.