ಸಂಘದ ಅಭಿವೃದ್ಧಿಗಾಗಿ ನಿವೇಶನ ಖರೀದಿ ದೃಷ್ಟಿಯಿಂದ ಹಲವು ತಿಂಗಳ ಹಿಂದೆಯೇ ಸಂಘದಿಂದ 5 ಲಕ್ಷ ರು. ಗಳನ್ನು ಅಧ್ಯಕ್ಷ ಹನುಮಂತು ಹಾಗೂ ಕಾರ್ಯದರ್ಶಿ ಟಿ.ಎಲ್.ನಿಂಗರಾಜು ಡ್ರಾ ಮಾಡಿರುವುದು ಸರಿಯಲ್ಲ. ಕಳೆದ ಆರು ತಿಂಗಳಿಂದ ಅಷ್ಟು ಹಣವನ್ನು ಇಟ್ಟಿಕೊಳ್ಳುವ ಅವಶ್ಯಕತೆ ಏನು ಎಂದು ತರಾಟೆಗೆ ತೆಗೆದುಕೊಂಡರು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ತಳಗವಾದಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಿವೇಶನ ಖರೀದಿ ಹೆಸರಿನಲ್ಲಿ 5 ರು. ಲಕ್ಷ ಮುಂಗಡ ಪಡೆದಿರುವ ಅಧ್ಯಕ್ಷ ಹನುಮಂತು ಹಾಗೂ ಕಾರ್ಯದರ್ಶಿ ಟಿ.ಎಲ್.ನಿಂಗರಾಜು ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಸಂಘದ ಆವರಣದಲ್ಲಿ ಮಂಗಳವಾರ ನಡೆದ 2025-26ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಹಾಗೂ ಟಿಎಪಿಸಿಎಂಎಸ್ ನಿರ್ದೇಶಕ ದಿಲೀಪ್ ಕುಮಾರ್(ವಿಶ್ವ) ಸೇರಿದಂತೆ ಹಲವು ಸದಸ್ಯರು ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದರು.
ಸಂಘದ ಅಭಿವೃದ್ಧಿಗಾಗಿ ನಿವೇಶನ ಖರೀದಿ ದೃಷ್ಟಿಯಿಂದ ಹಲವು ತಿಂಗಳ ಹಿಂದೆಯೇ ಸಂಘದಿಂದ 5 ಲಕ್ಷ ರು. ಗಳನ್ನು ಅಧ್ಯಕ್ಷ ಹನುಮಂತು ಹಾಗೂ ಕಾರ್ಯದರ್ಶಿ ಟಿ.ಎಲ್.ನಿಂಗರಾಜು ಡ್ರಾ ಮಾಡಿರುವುದು ಸರಿಯಲ್ಲ. ಕಳೆದ ಆರು ತಿಂಗಳಿಂದ ಅಷ್ಟು ಹಣವನ್ನು ಇಟ್ಟಿಕೊಳ್ಳುವ ಅವಶ್ಯಕತೆ ಏನು ಎಂದು ತರಾಟೆಗೆ ತೆಗೆದುಕೊಂಡರು.ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಆದಾಯವು ಸಾಕಷ್ಟು ಇಳಿಕೆಯಾಗಿರುವುದು ಅನುಮಾನ ಮೂಡಿಸಿದೆ. ಹಿಂದಿನ ಸಾಲಿನಲ್ಲಿ 2 ರು .ಇದ್ದ, ದರವೂ ಇದೀಗ ನೀವು 5 ರು.ಮಾಡಿದ್ದೀರಿ. ಆದರೂ ಆದಾಯ ಮಾತ್ರ ಕಡಿಮೆಯಾಗಿದೆ ಏಕೆ ಎಂದು ಪ್ರಶ್ನಿಸಿದರು.
ಸೋಲಾರ್ ಅಳವಡಿಕೆಗೆ ಎರಡು ಬಿಲ್ ಮಾಡುವ ಅವಶ್ಯಕತೆ ಇರಲಿಲ್ಲ. ಅಲ್ಲದೇ, ಕಾನೂನ್ಮತಕವಾಗಿ ಟೆಂಡರ್ ಕರೆಯದೇ ಕಾಮಗಾರಿ ಮಾಡಲಾಗಿದೆ. ಮುಂಗಡವಾಗಿ ಪಡೆದಿರುವ 5 ಲಕ್ಷ ರು. ಹಣವನ್ನು ಕೂಡಲೇ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸಂಘಕ್ಕೆ ಮರುಪಾವತಿ ಮಾಡಬೇಕು ಎಂದು ಹಲವು ಸದಸ್ಯರು ಆಗ್ರಹಿಸಿದರು.ಅಧ್ಯಕ್ಷ ಹನುಮಂತು ಮಾತನಾಡಿ, ನಿವೇಶನ ಖರೀದಿ ಮಾಡುವುದು ಬೇಡ ಎಂದರೆ ಹಣವನ್ನು ವಾಪಸ್ ಮಾಡಲಾಗುವುದು, ಅಲ್ಲದೇ, ನೀರಿನ ದರ ಏರಿಕೆ ನಮ್ಮ ಆಡಳಿತ ಮಂಡಳಿ ತೀರ್ಮಾನ ಇದನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ ಎಂದರು.
ಸದಸ್ಯ ಸ್ವಾಮಿ ಮಾತನಾಡಿ, 53 ಲಕ್ಷ ರು. ವೆಚ್ಚದಲ್ಲಿ ಕಟ್ಟಡ ದುರಸ್ತಿ ಕಾಮಗಾರಿಯಲ್ಲಿನ ತನಿಖೆ ಪೂರ್ಣಗೊಳಿಸಲು ಸಹಕಾರ ನೀಡಬೇಕು ಎಂದು ಆಗ್ರಹಿಸಿದರು. ಸದಸ್ಯ ಹನುಮಂತು ಮಾತನಾಡಿ, ಆಕಸ್ಮಿಕವಾಗಿ ರಾಸುಗಳು ಸಾವನ್ನಪ್ಪಿದ್ದಾಗ ಬೇರೆ ಸಂಘಗಳಲ್ಲಿ ಪರಿಹಾರ ನೀಡುತ್ತಾರೆ. ನಮ್ಮಲ್ಲಿ ಏಕೆ ನೀಡುವುದಿಲ್ಲ ಎಂದು ಪ್ರಶ್ನಿಸಿದರು.ಸಿಇಒ ಟಿ.ಎಲ್.ನಿಂಗರಾಜು ವಾರ್ಷಿಕ ವರದಿ ಮಂಡಿಸಿ, 2025-26ನೇ ಸಾಲಿನಲ್ಲಿ 22.35 ಲಕ್ಷ ರು. ಆದಾಯ ಬಂದಿದೆ ಎಂದು ವಿವರಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎಚ್.ಆನಂದ್ ಮಾತನಾಡಿ, 150 ದಿನ ಹಾಲು ಹಾಕಿದ ಎಲ್ಲರಿಗೂ ಸದಸ್ಯತ್ವ ನೀಡಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ರಾಜು, ನಿರ್ದೇಶಕರಾದ ಲಿಂಗಯ್ಯ, ಹನುಮಂತು, ಟಿ.ಎಸ್.ಚಂದ್ರು, ಸುರೇಶ್, ಬಸವರಾಜು, ಜಯಮ್ಮ, ಸುಕನ್ಯ, ಶ್ವೇತಾ, ಜಯರಾಮು, ಎಂ.ಸಿ.ರಶ್ಮಿ ಪಾಲ್ಗೊಂಡಿದ್ದರು.