ಸಾರಾಂಶ
ಬುಧವಾರ ಮೊಹಂ ಹಬ್ಬದಂದು ಸರ್ಕಾರಿ ರಜೆ ಇದ್ದರೂ ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿದ್ದರು. ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಕಳೆದ ಒಂದು ವರ್ಷದಿಂದಲೂ ಶಾಸಕರು ನಮ್ಮ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಕೆಜಿಎಫ್
ಶಾಸಕರು ಜನರಿಂದ ಮತ ಪಡೆದು ಆಯ್ಕೆಯಾದಂತೆ ನಾವೂ ಸಹ ಜನರಿಂದ ಮತ ಪಡೆದುಕೊಂಡು ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿ ನಂತರ ಗ್ರಾಪಂ ಸದಸ್ಯರಿಂದ ಮತ ಪಡೆದು ಗೊಲ್ಲಹಳ್ಳಿ ಗ್ರಾಪಂ ಅಧ್ಯಕ್ಷನಾಗಿದ್ದು, ಪ್ರೋಟೋಕಾಲ್ ನಿಯಮಾನುಸಾರ ಗೊಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್‍ಯಕ್ರಮಗಳಿಗೆ ಶಾಸಕರ ಅಣತಿಯಂತೆ ಅಧಿಕಾರಿಗಳು ನಡೆದುಕೊಂಡು ಗ್ರಾಪಂ ಸದಸ್ಯರು ಮತ್ತು ಅಧ್ಯಕ್ಷರನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಗೊಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಮಂಜುನಾಥ್ ಆರೋಪಿಸಿದ್ದಾರೆ.ದಲಿತ ಅಧ್ಯಕ್ಷನೆಂದು ಕಡೆಗಣನೆ:
ಟಿ.ಗೋಲ್ಲಹಳ್ಳಿ ಗ್ರಾಪಂ ಅಧ್ಯಕ್ಷನಾಗಿ ಕಳೆದ ೧ ವರ್ಷದಿಂದ ಅಧಿಕಾರದಲ್ಲಿ ಇದ್ದು ಪಂಚಾಯ್ತಿ ವ್ಯಾಪ್ತಿಯ ಬಡಮಾಕನಹಳ್ಳಿ ಬಾರ್‍ಲಿ ಗ್ರಾಮದಲ್ಲಿ ೬ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುವ ಸೇತುವೆ ಕಾಮಗಾರಿ, ಚಿಗುರಪುರದಲ್ಲಿ ವಾಟರ್ ಫಿಲ್ಟರ್ ಘಟಕ ಉದ್ಘಾಟನೆ ಕಾರ್ಯಕ್ರಮಗಳಿಗೆ ಆಹ್ವಾನ ನೀಡದೇ ಶಾಸಕಿ ರೂಪಕಲಾ ಶಶಿಧರ್ ಕಡೆಗಣಿಸಿದ್ದಾರೆ. ನಾನು ದಲಿತ ಸಮುದಾಯದಿಂದ ಬಂದಿದ್ದು, ಮತದಾರರ ಆರ್ಶೀವಾದದಿಂದ ನನ್ನ ಪತ್ನಿ ಪಂಚಾಯ್ತಿ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಇದೀಗ ನಾನು ಸದಸ್ಯನಾಗಿ ಆಯ್ಕೆಯಾಗಿದ್ದು, ಸದಸ್ಯರ ಸಹಕಾರದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ನನ್ನ ಬೆಳವಣಿಗೆ ಸಹಿಸಿಕೊಳ್ಳದ ಶಾಸಕರು ಹಾಗೂ ಇತರೆ ಕೆಲವು ಮುಖಂಡರು, ನನ್ನನ್ನು ಮತ್ತು ಗ್ರಾಪಂ ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ. ಶಾಸಕರ ನಡುವಳಿಕೆಯಿಂದ ಬೇಸೆತ್ತಿರುವ ಕಾಂಗ್ರೆಸ್ ಬೆಂಬಲಿತ ೨೦ ಪಂಚಾಯ್ತಿ ಸದಸ್ಯರು ಪಕ್ಷವನ್ನು ತೊರೆಯಲು ನಿರ್ಧರಿಸಿರುವುದಾಗಿ ತಿಳಿಸಿದರು.ಸರಕಾರಿ ರಜೆ ದಿನ ಕಾಮಗಾರಿಗಳ ಉದ್ಘಾಟನೆ:
ಬುಧವಾರ ಮೊಹಂ ಹಬ್ಬದಂದು ಸರ್ಕಾರಿ ರಜೆ ಇದ್ದರೂ ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿದ್ದರು. ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಕಳೆದ ಒಂದು ವರ್ಷದಿಂದಲೂ ಶಾಸಕರು ನಮ್ಮ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ.ಕಾಂಗ್ರೆಸ್ ಗೆ ಗುಡ್ ಬೈ ಎಚ್ಚರಿಕೆ:
ಶಾಸಕರ ನಡೆಯಿಂದ ಬೇಸತ್ತಿರುವ ೨೦ ಗ್ರಾಪಂ ಸದಸ್ಯರು ಕಾಂಗ್ರೆಸ್ ಪಕ್ಷ ತೊರೆಯಲು ನಿರ್ಧರಿಸಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿ ಹೋರಾಟಗಾರರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅಧ್ಯಕ್ಷ, ಸದಸ್ಯರನ್ನು ಕಡೆಗಣನೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಪ್ರತಿಭಟನೆ ಸಹ ನಡೆಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.ಸದಸ್ಯ ವೆಂಕಟ್ ರಾಮ್ ಮಾತನಾಡಿ, ಶಾಸಕರ ನಡೆ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರಿಗೆ ಬೇಸರ ಉಂಟು ಮಾಡಿದೆ. ಸರ್ಕಾರಿ ಕಾರ್ಯಕ್ರಮಗಳ ಶಿಷ್ಟಾಚಾರವನ್ನು ಶಾಸಕರು ಪಾಲಿಸದೇ ತಮಗಿಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ದಲಿತ ಸಮುದಾಯದಿಂದ ಆಯ್ಕೆಯಾಗಿರುವ ಮಂಜುನಾಥ್‌ರನ್ನು ರಾಜಕೀಯವಾಗಿ ತುಳಿಯುವ ಷಡ್ಯಂತರ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.
ಗ್ರಾಪಂ ಸದಸ್ಯರಾದ ಸುಜಾತಮ್ಮ ಕೃಷ್ಣಪ್ಪ, ಉಪಾಧ್ಯಕ್ಷ ನಾರಾಯಣಸ್ವಾಮಿ ,ತುಳಸಮ್ಮ ವೆಂಕಟೇಶಪ್ಪ, ಕಾಂತರಾಜು, ಸರಸ್ವತಿ ವೆಂಕಟೇಶ್, ಜೋತಿ ಸತೀಶ್, ಉಷಾ ವೆಂಕಟೇಶ್, ಉಷಾ ಅಂಬರೀಶ್, ಮುನಿಯಮ್ಮ, ವೆಂಕಟ ಲಕ್ಷ್ಮಮ್ಮ ವೆಂಕಟೇಶಪ್ಪ,ಸುಮ ನಾಗೇಶ್, ವಿಜಯಲಕ್ಷ್ಮೀ ಮುನಿಕೃಷ್ಣ, ಪವಿತ್ರಗೋಪಾಲ್, ಐಸಂದ್ರ ಮಂಜುನಾಥ್ ಬಡಮಾಕನಹಳ್ಳಿ ಕಾಂತರಾಜ್ ಇದ್ದರು.