ಶಾಸಕ ವೀರೇಂದ್ರ ಪಪ್ಪಿ ವಿರುದ್ಧ ಗ್ರಾಮಸ್ಥರ ಆಕ್ರೋಶ

| Published : Jun 20 2024, 01:04 AM IST / Updated: Jun 20 2024, 01:05 AM IST

ಸಾರಾಂಶ

ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರರನ್ನು ಜನಸ್ಪಂದನ ಸಭೆಗೆ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಿ ಕರೆತರಲಾಯಿತು.

ಚಿಕ್ಕಾಲಗಟ್ಟದಲ್ಲಿ ತಾಲೂಕು ಮಟ್ಟದ ಜನಸ್ಪಂದನಾ ಸಭೆ

ಕನ್ನಡಪ್ರಭ ವಾರ್ತೆ ಸಿರಿಗೆರೆ

ಚುನಾವಣೆ ಮುಗಿದು ವರ್ಷ ಕಳೆದರೂ ಗ್ರಾಮದ ಕಡೆಗೆ ತಲೆ ಹಾಕದ ನೀವು ಈಗ ಜನಸ್ಪಂದನಾ ಕಾರ್ಯಕ್ರಮಕ್ಕೆ ಬಂದಿದ್ದೀರಿ ಎಂದು ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸಿರಿಗೆರೆ ಸಮೀಪದ ಚಿಕ್ಕಾಲಗಟ್ಟ ಗ್ರಾಮದಲ್ಲಿ ಬುಧವಾರ ಆಯೋಜಿಸಲಾಗಿದ್ದ ಜನಸ್ಪಂದನ ಸಭೆಗೆ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಆಸೀನರಾದ ನಂತರ ಜನರು ಇದುವರೆಗೂ ಗ್ರಾಮಕ್ಕೆ ಭೇಟಿ ನೀಡದ ಶಾಸಕರ ಬಗ್ಗೆ ತಮ್ಮ ಸಿಟ್ಟು ಹೊರಹಾಕಿದರು.

ಗ್ರಾಮದಲ್ಲಿ ಕಳೆದ ಒಂದೂವರೆ ವರ್ಷಗಳಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಆಗಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಂಕಷ್ಟವನ್ನು ಅನುಭವಿಸಿದ್ದೇವೆ. ಕುಡಿಯುವ ನೀರು ಕೊಡಲು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಬಳಿ ಮೊರೆ ಇಟ್ಟರೂ ಸ್ಪಂದನೆ ಸಿಕ್ಕಿಲ್ಲ. ಆಲಗಟ್ಟ ಪಂಚಾಯಿತಿ ವ್ಯಾಪ್ತಿಯಲ್ಲಿ ಈವರೆಗೆ ವಸತಿ ರಹಿತರಿಗೆ ಒಂದೇ ಒಂದು ಮನೆ ಹಂಚಿಕೆ ಆಗಿಲ್ಲ ಎಂದು ಜನರು ಸಿಟ್ಟಿಗೆದ್ದು ಪ್ರತಿಭಟಿಸಿದರು.

ಬಹಳ ನಿರೀಕ್ಷೆ ಇಟ್ಟುಕೊಂಡು ನಿಮ್ಮನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದೇವೆ. ಚುನಾವಣೆಯಲ್ಲಿ ಗೆದ್ದ ನಂತರ ಇತ್ತ ಕಡೆ ಬಾರದೇ ಇದ್ದವರು ಜನಸ್ಪಂದನ ಕಾರ್ಯಕ್ರಮದ ನೆಪದಲ್ಲಿ ಬಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಮತ್ತು ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್‌ ಮುಖಂಡರು ಜನರ ಆಕ್ರೋಶವನ್ನು ತಮ್ಮ ಹಿಡಿತಕ್ಕೆ ತಂದರು.