ಸಾರಾಂಶ
ಹನುಮಸಾಗರ: ಇಲ್ಲಿ ನಡೆದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಪಿಡಿಒ ವಿರುದ್ಧ ಮಹಿಳಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಸಭೆ ತೊರೆದು ಪ್ರತಿಭಟನೆ ನಡೆಸಿದರು.
ಪಿಡಿಒ ಅವರು ಸಭೆಯಲ್ಲಿ ಮಹಿಳಾ ಸದಸ್ಯರ ಮಾತಿಗೆ ಬೆಲೆ ನೀಡುತ್ತಿಲ್ಲ, ಬೇಜವಾಬ್ದಾರಿಯಿಂದ ವರ್ತಿಸುವ ಪಿಡಿಒ ನಮಗೆ ಬೇಡವೇ ಬೇಡ ಎಂದು ಉಪಾಧ್ಯಕ್ಷೆ ಹನುಮವ್ವ ಕಂದಗಲ್ಲ ಆಕ್ರೋಶ ವ್ಯಕ್ತಪಡಿಸಿದರು.ಗ್ರಾಪಂ ಸಾಮಾನ್ಯ ಸಭೆಯಲ್ಲಿ ಗ್ರಾಪಂ ಸದಸ್ಯ ಬಸವರಾಜ ಬಿಲ್ಕಾರ ಸಭೆಯ ಅಜೆಂಡಾದ ಪ್ರಕಾರ ಎಲ್ಲ ವಿಷಯಗಳ ಕುರಿತು ಚರ್ಚೆ ನಡೆಯಬೇಕು ಎಂದರು.
ಪಿಡಿಒ ಮಹಿಳಾ ಸದಸ್ಯರ ಮಾತಿಗೆ ಗೌರವ ನೀಡದೆ ಅಸಡ್ಡೆಯಿಂದ ವರ್ತಿಸುತ್ತಾರೆ. ವಾರ್ಡಿನಲ್ಲಿ ಕುಡಿಯುವ ನೀರು, ಸಿಸಿ ರಸ್ತೆ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ನೀಡದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಮಹಿಳಾ ಸದಸ್ಯರು ಆರೋಪಿಸಿದರು. ಪಿಡಿಒ ಅವರನ್ನು ವರ್ಗಾವಣೆ ಮಾಡಬೇಕು ಮತ್ತು ಅವರ ಮೇಲೆ ಮೇಲಧಿಕಾರಿಗಳು ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಗ್ರಾಪಂ ಸದಸ್ಯರಾದ ರೇಷ್ಮಾ ಹುಲ್ಲೂರು, ಬಸಮ್ಮ ಬಂಡಿವಡ್ಡರ, ನೀಲವ್ವ ಹಕ್ಕಿ, ಕಸ್ತೂರಮ್ಮ ಸಂದಿಮನಿ, ರೇಣವ್ವ ಕುಂಬಳಾವತಿ, ದುರಗವ್ವ ಪೂಜಾರ, ಮಹಿಬೂಬಿ ಮುಜಾವರ, ರಬೀಯ ಡಾಲಾಯತ, ಜರೀನಾ ಬೇಗಂ ಮೂಲಿಮನಿ, ಫಾರೂಕ್ ಡಾಲಂಡಿ, ಮರೇಗೌಡ ಬೋದುರ, ಬಸವರಾಜ ಬಿಲ್ಕಾರ ಇತರರು ಇದ್ದರು. ಸಾಮಾನ್ಯ ಸಭೆಯಲ್ಲಿ ಚರ್ಚಿಸುವ ವಿಷಯ ಮುಗಿದ ಬಳಿಕ ಹೊರಗೆ ಸದಸ್ಯರು ಹೋಗಿದ್ದಾರೆ ಮತ್ತು ಮಹಿಳೆಯರಿಗೆ ಗೌರವ ನೀಡಿಲ್ಲ ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಹನುಮಸಾಗರ ಪಿಡಿಒ ದೇವೇಂದ್ರ ಕಮತರ ಹೇಳಿದರು.ಮಹಿಳಾ ಸದಸ್ಯರು ಸಭೆ ಬಹಿಷ್ಕರಿಸಿ ಹೊರಹೋಗಿಲ್ಲ. ಸಭೆಯ ಪ್ರಾರಂಭದಲ್ಲಿ ಐವರು ಸದಸ್ಯರು ಗೈರಾಗಿದ್ದಾರೆ. 33 ಸದಸ್ಯರು ಸಭೆಗೆ ಹಾಜರಾಗಿದ್ದಾರೆ. ಸಭೆಯ ಪುಸ್ತಕದಲ್ಲಿ 32 ಜನ ಸಹ ಸಹಿ ಹಾಕಿದ್ದಾರೆ. ಯಾರೂ ಸಾಮಾನ್ಯ ಸಭೆ ಬಹಿಷ್ಕಾರ ಮಾಡಿಲ್ಲ ಎಂದು ಹನುಮಸಾಗರ ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು.