ನಿಯಮಬಾಹಿರ ಜಕಾತಿ ವಸೂಲಿಗೆ ಆಕ್ರೋಶ

| Published : Mar 05 2025, 12:30 AM IST

ಸಾರಾಂಶ

ಬೀದಿ ಬದಿ ವ್ಯಾಪಾರಿಗಳಿಂದ ಜಕಾತಿ ವಸೂಲು ಮಾಡುತ್ತಿರುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಕರುನಾಡ ವಿಜಯ ಸೇನೆ ಕಾರ್ಯಕರ್ತರು ಮಂಗಳವಾರ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಕರುನಾಡ ವಿಜಯ ಸೇನೆಯಿಂದ ನಗರಸಭೆ ಪೌರಾಯುಕ್ತರಿಗೆ ಮನವಿಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನಗರಸಭೆ ವ್ಯಾಪ್ತಿಗೊಳಪಡುವ ಫುಟ್‍ಪಾತ್ ವ್ಯಾಪಾರಿಗಳಿಂದ ಮನಸೋ ಇಚ್ಚೆ ಜಕಾತಿ ವಸೂಲು ಮಾಡುತ್ತಿರುವುದನ್ನು ವಿರೋಧಿಸಿ ಕರುನಾಡ ವಿಜಯ ಸೇನೆಯಿಂದ ಕಾರ್ಯಕರ್ತರು ಮಂಗಳವಾರ ನಗರಸಭೆ ಎದುರು ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಬೀದಿ ಬದಿ ವ್ಯಾಪಾರಸ್ಥರು, ಹೂವು, ಹಣ್ಣು, ತರಕಾರಿ ಹಾಗೂ ಡಬ್ಬದಂಗಡಿಗಳವರಿಂದ ಜಕಾತಿ ವಸೂಲಿ ಮಾಡುತ್ತಿರುವುದರಿಂದ ಬಡವರು ಬದುಕುವುದು ಹೇಗೆ ಎಂದು ಪ್ರತಿಭಟನಾಕಾರರು ಪೌರಾಯುಕ್ತರನ್ನು ಪ್ರಶ್ನಿಸಿದರು. ಹೂವು, ಹಣ್ಣು, ತರಕಾರಿ, ಸೊಪ್ಪು ಹೀಗೆ ಯಾವ್ಯಾವ ವ್ಯಾಪಾರಿಗಳಿಂದ ಎಷ್ಟು ಜಕಾತಿ ವಸೂಲು ಮಾಡಬೇಕೆಂಬ ನಾಮಫಲಕವನ್ನು ಎಲ್ಲಿಯೂ ಅಳವಡಿಸಿಲ್ಲ.

ಜಕಾತಿ ವಸೂಲು ಮಾಡದಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರೂ ಸಹ ವಸೂಲಿ ಮಾತ್ರ ನಿಂತಿಲ್ಲ. ಬರಪೀಡಿತ ಪ್ರದೇಶ ಚಿತ್ರದುರ್ಗದಲ್ಲಿ ಬೀದಿ ಬದಿಯಲ್ಲಿ ವ್ಯಾಪಾರಿ ಮಾಡಿಕೊಂಡು ಬದುಕುವರಿಂದ ಜಕಾತಿ ಎತ್ತುವುದು ಅಮಾನವೀಯ. ತಕ್ಷಣದಿಂದಲೆ ಜಕಾತಿ ವಸೂಲಾತಿ ನಿಲ್ಲಬೇಕೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಆಗ್ರಹಿಸಿದರು.

ಈ ವೇಳೆ ಕರುನಾಡ ವಿಜಯಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಸಾಮಾಜಿಕ ಜಾಲತಾಣ ಘಟಕದ ಮಧು, ಉಪಾಧ್ಯಕ್ಷೆ ರತ್ನಮ್ಮ, ಮುಜಾಹಿದ್, ಜಗದೀಶ್, ಅಖಿಲೇಶ್, ಶಶಿ, ಬಾಬು, ಅವಿನಾಶ್, ನಾಗೇಶ್, ತಿಪ್ಪೇಸ್ವಾಮಿ ಇದ್ದರು.