ಕರ್ನಾಟಕದ ಪಾಲಾದ ಮಂಗಳೂರು ರೈಲ್ವೆ ಪ್ರದೇಶದ ಆಡಳಿತವನ್ನು ಮರಳಿ ಕಸಿದುಕೊಳ್ಳುವ ಕೇರಳ ಯತ್ನಕ್ಕೆ ಕರಾವಳಿಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು/ಉಡುಪಿ
ಕರ್ನಾಟಕದ ಪಾಲಾದ ಮಂಗಳೂರು ರೈಲ್ವೆ ಪ್ರದೇಶದ ಆಡಳಿತವನ್ನು ಮರಳಿ ಕಸಿದುಕೊಳ್ಳುವ ಕೇರಳ ಯತ್ನಕ್ಕೆ ಕರಾವಳಿಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕರಾವಳಿಯ ರೈಲ್ವೆ ಹೋರಾಟಗಾರರು ಜಾಲತಾಣಗಳಲ್ಲಿ ವ್ಯಾಪಕ ಅಭಿಯಾನ ಆರಂಭಿಸಿದ್ದಾರೆ. ಇದುವರೆಗೆ ಕೇರಳದ ಅಧಿಕಾರಿಗಳು ಕರ್ನಾಟಕದ ರೈಲ್ವೆ ಆದಾಯ ಕಸಿದುಕೊಂಡಿರುವ ಬಗ್ಗೆ ತರಹೇವಾರಿಯಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.ರೈಲ್ವೆ ಹೋರಾಟಗಾರ, ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್‌ನ ಪಿ.ವಿ.ಮೋಹನ್ ಅವರು, ಮಂಗಳೂರನ್ನು ಮೈಸೂರು ವಿಭಾಗಕ್ಕೆ ಸೇರಿಸುವ ಬದಲು ಮಂಗಳೂರನ್ನೇ ಪ್ರತ್ಯೇಕ ವಿಭಾಗ ಮಾಡಬೇಕಾಗಿತ್ತು ಎಂದಿದ್ದಾರೆ. ಕಾಸರಗೋಡಿನ ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಅವರು ಎಕ್ಸ್ ಖಾತೆಯಲ್ಲಿ, ಮಂಗಳೂರನ್ನು ಕೇರಳದಿಂದ ಮೈಸೂರು ವಿಭಾಗ ರೈಲ್ವೆಗೆ ಸೇರ್ಪಡೆಗೊಳಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಡಿವೈಎಫ್‌ಐ ಸಂಘಟನೆ ಮುಖಂಡರು, ಮಂಗಳೂರನ್ನು ಮೈಸೂರು ವಿಭಾಗಕ್ಕೆ ಮಾತ್ರ ಸೇರಿಸದರೆ ಸಾಲದು, ಉತ್ತರ ಕರ್ನಾಟಕ ಭಾಗಗಳಿಗೆ ಹೆಚ್ಚು ರೈಲು ಓಡಿಸುವಂತೆ ಆಗ್ರಹಿಸಿದ್ದಾರೆ. ಮಂಗಳೂರು ವಲಯ ನಮಗೆ ದಕ್ಕಿರುವುದರಿಂದ ನಮ್ಮ ರಾಜ್ಯಕ್ಕೆ ಬಹಳ ದೊಡ್ಡ ಲಾಭದಾಯಕ, ಅನುಕೂಲಕರ ಆಗಲಿದೆ, ಆದ್ದರಿಂದ ನಮ್ಮ ಜನಪ್ರತಿನಿಧಿಗಳು ಇದನ್ನು ಹಬ್ಬದ ರೀತಿಯಲ್ಲಿ ಆಚರಿಸಿ ಸ್ವಾಗತಿಸಬೇಕು ಎಂದು ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಧೀರಜ್ ಎನ್. ಶಾಂತಿ ಹೇಳಿದ್ದಾರೆ.ನಿಲ್ದಾಣಗಳ ಅಭಿವೃದ್ಧಿ ಅಗತ್ಯ: ಮಂಗಳೂರನ್ನು ಮೈಸೂರು ವಿಭಾಗದ ವ್ಯಾಪ್ತಿಗೆ ತಂದಿರುವುದರಿಂದ ಕರ್ನಾಟಕದ ಕರಾವಳಿ ಪ್ರದೇಶದ ರೈಲ್ವೆ ಅಭಿವೃದ್ಧಿಗೆ ಹೊಸ ಅವಕಾಶಗಳು ಸೃಷ್ಟಿಯಾಗಬಹುದು. ವಿಶೇಷವಾಗಿ, ಕೇರಳದ ಪ್ರವೇಶ ದ್ವಾರಗಳಂತಿರುವ ಮಂಜೇಶ್ವರ, ಉಪ್ಪಳ ಹಾಗೂ ಕುಂಬಳೆ ರೈಲು ನಿಲ್ದಾಣಗಳ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ದೊರೆಯುವ ಸಾಧ್ಯತೆಯಿದೆ ಎಂದು ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಪ್ರತಿಕ್ರಿಯಿಸಿದ್ದಾರೆ.
2007ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ, ಸಿಪಿಐ(ಎಂ) ಬೆಂಬಲದೊಂದಿಗೆ ಪ್ರತ್ಯೇಕ ಸೇಲಂ ವಿಭಾಗ ರಚನೆಯಾದಾಗ ಪಾಲಕ್ಕಾಡ್ ವಿಭಾಗಕ್ಕೆ ಗಣನೀಯ ಪ್ರಮಾಣದ ಆದಾಯ ಹಾಗೂ ಪ್ರದೇಶ ನಷ್ಟವಾಗಿರಲಿಲ್ಲವೇ?. ಆಗ ಹೊಸ ವಿಭಾಗ ರಚನೆಗೆ ಕಾಂಗ್ರೆಸ್ ಮುಂದಾಗಿತ್ತು. ಆದರೆ, ಈಗ ಮಂಗಳೂರಿನ ಆಡಳಿತಾತ್ಮಕ ವ್ಯಾಪ್ತಿಯಲ್ಲಿ ಬದಲಾವಣೆ ಪ್ರಸ್ತಾಪವಾದಾಗ ಮಾತ್ರ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಕಾರಣವೇನು ಎಂದು ಅವರು ಪ್ರಶ್ನಿಸಿದ್ದಾರೆ. ಈ ವಿಚಾರದಲ್ಲಿ ಕರ್ನಾಟಕ ಮುಖ್ಯಮಂತ್ರಿಯವರ ನಿಲುವು ಏನು ಎಂಬುದನ್ನೂ ಕಾದು ನೋಡಬೇಕಿದೆ ಎಂದಿದ್ದಾರೆ.ಪ್ರತ್ಯೇಕ ರೈಲ್ವೆ ವಲಯ ಬೇಕು: ಕೇರಳದ ಪಾಲಕ್ಕಾಡ್‌ನಿಂದ ಮಂಗಳೂರು ರೈಲ್ವೆ ಪ್ರದೇಶವನ್ನು ಮುಕ್ತಗೊಳಿಸಿರುವುದು ಉತ್ತಮ ಕ್ರಮ. ಆದರೆ, ಮಂಗಳೂರನ್ನು ಮೈಸೂರು ವಿಭಾಗಕ್ಕೆ ಸೇರಿಸಿರುವುದು ಸರಿಯಲ್ಲ. ಕರಾವಳಿಗರ ಹಲವು ವರ್ಷಗಗಳ ಬೇಡಿಕೆಯಾದ ಮಂಗಳೂರು ಪ್ರತ್ಯೇಕ ರೈಲ್ವೆ ವಲಯವನ್ನು ಘೋಷಣೆ ಮಾಡಬೇಕಿತ್ತು ಎಂದು ರೈಲ್ವೆ ಹೋರಾಟಗಾರರೂ ಆಗಿರುವ ವಿಧಾನ ಪರಿಷತ್ ಸದಸ್ಯ ಪಿ.ವಿ.ಮೋಹನ್ ಹೇಳಿದ್ದಾರೆ.
ಹೆಚ್ಚುವರಿ ರೈಲು ಸೇವೆ ಅಗತ್ಯ: ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲ್ವೆ ಪ್ರದೇಶವನ್ನು ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಆಡಳಿತ ವ್ಯಾಪ್ತಿಗೆ ಒಳಪಡಿಸಿದರಷ್ಟೇ ಸಾಲದು. ಮಂಗಳೂರನ್ನು ಕೇಂದ್ರೀಕರಿಸಿ ರಾಜ್ಯದ ವಿವಿಧ ಭಾಗಗಳಿಗೆ, ವಿಶೇಷವಾಗಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಭಾಗಗಳಿಗೆ ಹೆಚ್ಚುವರಿ ರೈಲು ಸೇವೆಗಳನ್ನು ಕಲ್ಪಿಸುವ ಕ್ರಮಗಳು ಒಳಗೊಳ್ಳಲು ಸಾಧ್ಯವಾಗಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಕೇಂದ್ರದ ರೈಲ್ವೆ ಇಲಾಖೆಯನ್ನು ಆಗ್ರಹಿಸಿದೆ.ಕೇರಳದ ಹೋರಾಟ ಅರ್ಥಹೀನ: ರೈಲ್ವೆಯ ಬಗ್ಗೆ ಕರಾವಳಿಯಲ್ಲಿ ಬಹಳ ಹಿಂದಿನಿಂದಲೂ ಹೋರಾಟ ನಡೆದಿದೆ. ನಾವು ಧ್ವನಿ ಎತ್ತಿದ ಬಳಿಕವೇ ವಂದೇ ಭಾರತ್‌ನಲ್ಲಿ ಈಗ ಕನ್ನಡ ಭಾಷೆ ಬಂದಿದೆ. ಆದರೆ ರೈಲ್ವೆಯ ಮೂಲ ಸೌಕರ್ಯ ಪಡೆಯುವಲ್ಲಿ ಮಂಗಳೂರು ತೀರಾ ಹಿಂದುಳಿದಿದೆ. ನಮ್ಮ ಭಾಗದ ಅಭಿವೃದ್ಧಿಯ ನಿರ್ಧಾರಕ್ಕೆ ಕೇರಳದ ಆಕ್ಷೇಪ ಸರಿಯಲ್ಲ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರತಿಕ್ರಿಯಿಸಿದ್ದಾರೆ. ಹಬ್ಬದಂತೆ ಆಚರಿಸಬೇಕು: ಮಂಗಳೂರು ವಲಯ ನಮಗೆ ದಕ್ಕಿರುವುದರಿಂದ ನಮ್ಮ ರಾಜ್ಯಕ್ಕೆ ಬಹಳ ದೊಡ್ಡ ಲಾಭದಾಯಕ, ಅನುಕೂಲಕರ ಆಗಲಿದೆ, ಆದ್ದರಿಂದ ನಮ್ಮ ಜನಪ್ರತಿನಿಧಿಗಳು ಇದನ್ನು ಹಬ್ಬದ ರೀತಿಯಲ್ಲಿ ಆಚರಿಸಿ ಸ್ವಾಗತಿಸಬೇಕು ಎಂದು ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಧೀರಜ್ ಎನ್. ಶಾಂತಿ ಹೇಳಿದ್ದಾರೆ.