ಗ್ರಾಮಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿಕ್ಕಮಗಳೂರು ತಾಲೂಕು ಬ್ಯಾರವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಗ್ರಾಮಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿಕ್ಕಮಗಳೂರು ತಾಲೂಕು ಬ್ಯಾರವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.ತಾಲೂಕಿನ ಬ್ಯಾರವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಗ್ರಾಮಸಭೆ ಆರಂಭಗೊಳ್ಳುತ್ತಿದ್ದಂತೆ ಸ್ಥಳೀಯರು ಎಲ್ಲ ಇಲಾಖೆ ಅಧಿಕಾರಿಗಳು ಹಾಜರಾಗುವವರೆಗೆ ಗ್ರಾಮಸಭೆ ನಡೆಸಬಾರದು ಎಂದು ಪಟ್ಟು ಹಿಡಿದರು.
ಗ್ರಾಮಸಭೆಗೆ 27 ಇಲಾಖೆ ಅಧಿಕಾರಿಗಳು ಹಾಜರಾಗಬೇಕು. ಆದರೆ ನಾಲ್ಕೈದು ಇಲಾಖೆ ಅಧಿಕಾರಿಗಳು ಮಾತ್ರ ಆಗಮಿಸಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಗ್ರಾಮಸಭೆ ನಡೆಸಬಾರದು ಎಂದು ಪಟ್ಟು ಹಿಡಿದಿದ್ದರಿಂದಾಗಿ ಗ್ರಾಮಸಭೆ ರದ್ದುಗೊಳಿಸಲಾಯಿತು. ಸ್ಥಳೀಯ ಹೊಲದಗದ್ದೆ ಗಿರೀಶ್ ಮಾತನಾಡಿ, ಗ್ರಾಮ ಸಭೆಯಲ್ಲಿ ಸರ್ಕಾರದಿಂದ ಬರುವ ಸವಲತ್ತುಗಳು, ಸಹಾಯಧನದ ಬಗ್ಗೆ ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡದ ಬೇಜವಾಬ್ದಾರಿ ಅಧಿಕಾರಿಗಳು ಹಾಜರಾಗುವವರೆಗೂ ಸಭೆ ಮುಂದೂಡಬೇಕು. ಗ್ರಾಮಸಭೆ ನಡೆಸಬೇಕಾದ ಆಡಳಿತಾಧಿಕಾರಿಯೇ ಸಭೆಗೆ ಗೈರಾಗಿದ್ದಾರೆ. ಗ್ರಾಮಸಭೆಯಂತಹ ಪ್ರಮುಖ ಸಭೆಗಳಿಗೆ ಅಧಿಕಾರಿಗಳು ಗೈರಾಗುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮಗಳ ನೈರ್ಮಲ್ಯ ಮತ್ತು ಸ್ವಚ್ಛತೆಯ ಕೊರತೆ ಎಲ್ಲಡೆ ಎದ್ದು ಕಾಣುತ್ತಿದೆ. ಮಲ್ಲಂದೂರು ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡದಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಚರಂಡಿ ನೈರ್ಮಲ್ಯ, ತ್ಯಾಜ್ಯ ವಿಲೇವಾರಿ ಹಾಗೂ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಗ್ರಾಮ ಪಂಚಾಯಿತಿ ತಕ್ಷಣವೇ ಕ್ರಮ ಕೈಗೊಳ್ಳಬೇಕು. ನೈರ್ಮಲ್ಯ ಕಾರ್ಯಗಳನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.ಗ್ರಾಮದ ಅಭಿವೃದ್ಧಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಮಲ್ಲಂದೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತಾ ಕಾರ್ಯಗಳನ್ನು ತಕ್ಷಣವೇ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಸಹಿತ ಜಿಲ್ಲೆಯಾದ್ಯಂತ ಕೇಂದ್ರ ಸರ್ಕಾರದ ಯೋಜನೆ ಜಲಜೀವನ್ ಮಿಷನ್ ಅಡಿ ನೀರು ಬಂದಿಲ್ಲ. ಈ ಯೋಜನೆಯಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆದಿದೆ. ನೀರಿನ ಮೂಲವೇ ಇಲ್ಲದೆ ಪೈಪ್‌ಲೈನ್ ಅಳವಡಿಕೆ ಮಾಡಲಾಗಿದೆ. ಗುತ್ತಿಗೆದಾರರ ಜತೆ ಇಂಜಿನಿಯರ್‌ಗಳು ಕೂಡ ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವುದಕ್ಕೆ ಈ ಸಭೆಗೆ ಬಂದರೆ ಇಲ್ಲಿ ಸಂಬಂಧಪಟ್ಟ ಇಲಾಖೆಯವರೇ ಗೈರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭ ಸ್ಥಳೀಯರಾದ ಸಿ.ಎಸ್.ಶಶಿಧರ್, ರೂಪೇಶ್, ನಾರಾಯಣಗೌಡ, ಅಹಮದ್ ಮತ್ತಿತರರಿದ್ದರು.