ಟಿಎಸ್‌ಎಸ್‌ಗೆ ಆಡಳಿತಾಧಿಕಾರಿ ನೇಮಕಕ್ಕೆ ಆಕ್ರೋಶ

| Published : May 26 2024, 01:33 AM IST

ಸಾರಾಂಶ

ಶಿರಸಿಯ ಟಿಎಸ್‌ಎಸ್‌ಗೆ ವಿಶೇಷಾಧಿಕಾರಿ ನೇಮಕಗೊಳಿಸಿರುವುದನ್ನು ವಿರೋಧಿಸಿ, ನೂರಾರು ಷೇರು ಸದಸ್ಯರು ಸಂಸ್ಥೆಯ ಆವಾರದಲ್ಲಿ ಶನಿವಾರ ಮುಂಜಾನೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿರಸಿ

ಇಲ್ಲಿನ ಟಿಎಸ್‌ಎಸ್‌ಗೆ ವಿಶೇಷಾಧಿಕಾರಿ ನೇಮಕಗೊಳಿಸಿರುವುದನ್ನು ವಿರೋಧಿಸಿ, ನೂರಾರು ಷೇರು ಸದಸ್ಯರು ಸಂಸ್ಥೆಯ ಆವಾರದಲ್ಲಿ ಶನಿವಾರ ಮುಂಜಾನೆ ಜಮಾಯಿಸಿ, ಉಪನಿಬಂಧಕರ ಆದೇಶದ ಕುರಿತು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಆಡಳಿತಾಧಿಕಾರಿಯನ್ನು ಹಲವು ಪ್ರಶ್ನೆಗಳ ಮೂಲಕ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಸ್.ಜಿ. ಮಂಜುನಾಥಸಿಂಗ್ ಶಿರಸಿಯ ಟಿಎಸ್‌ಎಸ್‌ಗೆ ಆಗಸ್ಟ್‌ ೨೦, ೨೦೨೩ರಂದು ನಡೆದ ಚುನಾವಣೆ ರದ್ದುಮಾಡಿ ಆಡಳಿತಾಧಿಕಾರಿ ನೇಮಿಸಿ ಶುಕ್ರವಾರ ಮಧ್ಯಾಹ್ನ ಆದೇಶ ಹೊರಡಿಸಿದ್ದರು. ಇದರಿಂದ ಆತಂಕಗೊಂಡ ನೂರಾರು ಷೇರು ಸದಸ್ಯರು ಶನಿವಾರ ಮುಂಜಾನೆ ಟಿಎಸ್‌ಎಸ್ ಆವಾರಕ್ಕೆ ಆಗಮಿಸಿ, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು, ತೋಟಗಾರರಾದ ತಮ್ಮ ಸ್ವಾಯತ್ತ ಸಂಸ್ಥೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆರದಿದ್ದ ಸದಸ್ಯರನ್ನು ಉದ್ದೇಶಿಸಿ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಹಿಂದಿನ ಆಡಳಿತ ಮಂಡಳಿಯೇ ಘೋಷಣೆ ಮಾಡಿದ ಚುನಾವಣೆಯಲ್ಲಿ ೧೫ ಜನರ ನಿರ್ದೇಶಕ ಸ್ಥಾನದಲ್ಲಿ ೧೪ ಸ್ಥಾನಗಳಲ್ಲಿ ನಮ್ಮ ತಂಡದ ಸದಸ್ಯರು ಆಯ್ಕೆಯಾಗಿದ್ದರು. ಚುನಾವಣೆಯಲ್ಲಿ ಸೋಲು ಅನುಭವಿಸಿದವರು ಮತ್ತು ಸಂಸ್ಥೆಯನ್ನು ವಿಶೇಷವಾಗಿ ಬಳಸಿಕೊಂಡಿರುವವರೆಲ್ಲರೂ ಸೇರಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ಚುನಾವಣೆ ಸರಿಯಾದ ಕ್ರಮದಲ್ಲಿ ನಡೆದಿಲ್ಲ ಎಂದು ಆರೋಪಿಸಿದ್ದರು. ನಾವು ಕಾರವಾರದ ಅವರ ಕಚೇರಿಗೆ ತೆರಳಿದರೂ ಕಚೇರಿಯಲ್ಲಿ ಯಾರೂ ಇರಲಿಲ್ಲ. ಈ ಎಲ್ಲ ಪ್ರಕ್ರಿಯೆಗಳನ್ನು ಗಮನಿಸಿದರೆ ಉಪನಿಬಂಧಕರು ಕಚೇರಿಯ ಬದಲು ಯಾವುದೋ ಕೊಠಡಿಯಲ್ಲಿ ಕುಳಿತು ತೀರ್ಪು ಬರೆದಂತಿದೆ. ಮುಂದಿನ ಆರು ತಿಂಗಳಿನಲ್ಲಿ ಮತ್ತೆ ಚುನಾವಣೆ ನಡೆಸಬೇಕು ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಾವು ಮುಂದೇನು ಮಾಡಬೇಕು ಎಂಬ ಬಗ್ಗೆ ಕಾನೂನು ಸಲಹೆ ಪಡೆದುಕೊಳ್ಳುತ್ತೇವೆ. ಉದ್ದೇಶ ಪೂರ‍್ವಕವಾಗಿ ಇದೆಲ್ಲವನ್ನೂ ನಡೆಸಿದ್ದಾರೆ. ನಾವು ಹೋರಾಟ ಮಾಡಲಿದ್ದೇವೆ. ಒಂದೊಮ್ಮೆ ಸದಸ್ಯರ ಹಿತಾಸಕ್ತಿಗೆ ನಮ್ಮ ಹೋರಾಟ ತೊಂದರೆ ಆಗುವಂತಿದೆ ಎಂತಾದರೆ ಚುನಾವಣೆಯನ್ನು ಮತ್ತೊಮ್ಮೆ ಎದುರಿಸಲೂ ಸಿದ್ಧರಾಗಿದ್ದೇವೆ ಎಂದರು.

ಪಾದಯಾತ್ರೆ ಮೂಲಕ ಮನವಿ

ಟಿಎಸ್‌ಎಸ್ ಆವಾರದಿಂದ ಗೋಪಾಲಕೃಷ್ಣ ವೈದ್ಯ ಮತ್ತು ಷೇರು ಸದಸ್ಯರು ಪಾದಯಾತ್ರೆ ಮೂಲಕ ಶಾಸಕ ಭೀಮಣ್ಣ ನಾಯ್ಕ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಮನವಿಯಲ್ಲಿ ಸಂಸ್ಥೆ ನ್ಯಾಯಬದ್ಧವಾಗಿ ನಡೆಯುತ್ತಿರುವಾಗ ಒಮ್ಮೆಲೇ ಆಡಳಿತಾಧಿಕಾರಿ ನೇಮಕ ಮಾಡಿರುವುದು ಸಿಡಿಲು ಬಡಿದಂತಾಗಿದೆ. ಆಡಳಿತಾಧಿಕಾರಿ ರದ್ದುಗೊಳಿಸಿ ಕಾನೂನು ಬದ್ಧ ಆಯ್ಕೆಯಾದ ಆಡಳಿತ ಮಂಡಳಿಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಲಾಗಿದೆ.

ಮನವಿ ಸ್ವೀಕರಿಸಿ, ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಈ ಕ್ಷೇತ್ರದ ಶಾಸಕನಾಗಿ ಏಕೆ ಹೀಗಾಗಿದೆ ಎಂಬ ಮಾಹಿತಿ ನನಗೂ ಇಲ್ಲ. ಈ ಘಟನೆ ಬಗ್ಗೆ ಸಮಗ್ರ ತನಿಖೆಗಾಗಿ ಸಹಕಾರಿ ಸಚಿವರಿಗೆ ವಿನಂತಿಸುತ್ತೇನೆ. ನಾನೂ ಒಬ್ಬ ಟಿಎಸ್‌ಎಸ್ ಸದಸ್ಯನಾಗಿದ್ದು, ಯಾವುದೇ ಸಂಸ್ಥೆ ಉತ್ತಮವಾಗಿ ನಡೆಯಬೇಕು ಎಂದರು.

ಶಾಸಕರ ಹಸ್ತಕ್ಷೇಪದ ಆರೋಪ

ಹಿಂದಿನ ಆಡಳಿತ ಮಂಡಳಿಯ ನೂರಾರು ಕೋಟಿಯ ಅವ್ಯವಹಾರದ ಕುರಿತು ಇಂದಿನ ಆಡಳಿತ ಮಂಡಳಿಯು ಹಿಂದಿನ ಕಾರ‍್ಯಾಧ್ಯಕ್ಷ, ಹಿಂದಿನ ಪ್ರಧಾನ ವ್ಯವಸ್ಥಾಪಕ, ನಿವೃತ್ತ ಸಿಬ್ಬಂದಿ ಹಾಗೂ ಅವ್ಯವಹಾರದಲ್ಲಿ ಭಾಗಿಯಾದವರ ಮೇಲೆ ಗೋಪಾಲಕೃಷ್ಣ ವೈದ್ಯ ನೇತೃತ್ವದ ಆಡಳಿತ ಮಂಡಳಿಯು ಐದು ಕ್ರಿಮಿನಿಲ್ ಪ್ರಕರಣ ದಾಖಲಿಸಿದೆ. ಇನ್ನೂ ಕೆಲ ದಿನಗಳಲ್ಲಿ ನೂರು ಕೋಟಿ ಅವ್ಯವಹಾರ ನಡೆಸಿದ ಪ್ರಕರಣದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ನಿರ್ಧರಿಸಲಾಗಿತ್ತು. ಇದರಿಂದ ಬೆಚ್ಚಿ ಬಿದ್ದವರು ಶಾಸಕರ ಮೂಲಕ ಕಾನೂನು ಸಚಿವರು ಹಾಗೂ ಇನ್ನಿತರರ ಮೇಲೆ ಒತ್ತಡ ತಂದು ಟಿಎಸ್‌ಎಸ್‌ಗೆ ಆಡಳಿತಾಧಿಕಾರಿ ನೇಮಕ ಮಾಡಿದ್ದಾರೆ. ಶಾಸಕರು ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರನ್ನು ಕರೆಸಿ, ಅವರ ಮೂಲಕ ಹೇಳಿಕೆ ನೀಡಿಸಿ ಎಂದರೂ ಶಾಸಕರು ತಮಗೆ ಈ ವಿಷಯದ ಬಗ್ಗೆ ಮಾಹಿತಿ ಇಲ್ಲ ಎಂದರು. ಆಗ ನೆರದಿದ್ದವರು ಇದರಲ್ಲಿ ಶಾಸಕರ ಹಸ್ತಕ್ಷೇಪವಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಸಂಶಯ ಬೇಡ

ಸಂಸ್ಥೆಯ ಮೇಲೆ ಮತ್ತು ಆಡಳಿತದ ಮೇಲೆ ಯಾರೂ ಸಂಶಯ ಪಡಬೇಡಿ, ನಮ್ಮ ವ್ಯವಹಾರ ಮುಂದೆಯೂ ಪ್ರಾಮಾಣಿಕವಾಗಿ ನಡೆಯಲಿದ್ದು, ಯಾವುದೇ ಸದಸ್ಯರಿಗೆ ತೊಂದರೆ ಆದರೆ ನಮ್ಮನ್ನು ಸಂರಕ್ಷಿಸಿ, ನಾವು ನ್ಯಾಯ ಒದಗಿಸುತ್ತೇವೆ. ಈಗಾಗಲೇ ಸಂಸ್ಥೆಯಲ್ಲಿ ಅನ್ಯಾಯ ಮಾಡಿದವರ ಮೇಲೆ, ಕೋಟಿ ಕೋಟಿ ರೂ. ಸಂಸ್ಥೆಯಿಂದ ದೋಚಿದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದೇವೆ. ಸಿವಿಲ್ ಕೇಸ್ ಸಹ ಶೀಘ್ರದಲ್ಲಿ ದಾಖಲಿಸಲಿದ್ದೇವೆ. ಸಂಸ್ಥೆಯಲ್ಲಿ ಆಡಿಟ್ ನಡೆಯುತ್ತಿದ್ದು, ಹಣ ದೋಚಿದವರ ಮೇಲೆ ಶೀಘ್ರವೇ ಇನ್ನೊಂದು ಪ್ರಕರಣ ಸಹ ದಾಖಲಿಸಲು ನಿರ್ಧರಿಸಿದ್ದೇವೆ. ಒಳ್ಳೆಯ ಕಾಲ ಬಂದೇ ಬರುತ್ತದೆ. ನಾವು ಯಾವುದಕ್ಕೂ ಹೆದರುವುದಿಲ್ಲ. ಜೀವದ ಹಂಗು ತೊರೆದು ಸದಸ್ಯರಿಗೆ ನ್ಯಾಯ ಒದಗಿಸುತ್ತೇವೆ ಎಂದು ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮತ್ತಿಘಟ್ಟ ಹೇಳಿದರು.ವದಂತಿಗೆ ಆದ್ಯತೆ ಬೇಡ

ಸಂಸ್ಥೆಯ ಕುರಿತು ಕೇಳಿಬರುವ ಗುಸುಗುಸು ಸುದ್ದಿಗಳಿಗೆ ಆದ್ಯತೆ ನೀಡಬೇಡಿ. ಏನೇ ತೊಂದರೆ ಇದ್ದರೂ ಧೈರ್ಯವಾಗಿ ನನ್ನ ಮುಂದೆ ಬಂದು ತಿಳಿಸಿ. ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲಿ ನಾನು ಕೈ ಹಾಕಿಲ್ಲ. ಟಿಎಸ್‌ಎಸ್ ಮತ್ತು ಪ್ರಾಥಮಿಕ ಸಹಕಾರಿ ಸಂಘಗಳು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಅವು ಪ್ರಗತಿ ಆಗಬೇಕು.

ಭೀಮಣ್ಣ ನಾಯ್ಕ, ಶಾಸಕ

ಆಡಳಿತಾಧಿಕಾರಿ ವಿರುದ್ಧ ಅಸಮಾಧಾನ

ಕನ್ನಡಪ್ರಭ ವಾರ್ತೆ ಶಿರಸಿ

ನಗರದ ಟಿಎಸ್‌ಎಸ್ ಆವರದಲ್ಲಿ ಷೇರು ಸದಸ್ಯರು ಪಟ್ಟು ಹಿಡಿದು, ಆಡಳಿತಾಧಿಕಾರಿ ಕೆಲ ಪ್ರಶ್ನೆಗೆ ಉತ್ತರಿಸಬೇಕು ಎಂದು ಆಗ್ರಹಿಸಿದಾಗ ಆಗಮಿಸಿದ ಆಡಳಿತಾಧಿಕಾರಿ ಎಂ.ಎಚ್‌. ನಾಯ್ಕ, ಜಿಲ್ಲಾ ಸಹಕಾರ ನಿಬಂಧಕರು ಆದೇಶದ ಮೇರೆಗೆ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದೇನೆ ಎಂದರು. ಆಗ ಆಕ್ರೋಶಗೊಂಡ ಸದಸ್ಯರು, ನಿನ್ನೆಯ ಅಡಕೆ ದರ ಎಷ್ಟಿದೆ? ಶಿಕ್ಷಣ ಇಲಾಖೆಯ ಅಧಿಕಾರಿಯಾದ ತಮಗೆ ಸಹಕಾರಿ ಕ್ಷೇತ್ರದ ಬಗ್ಗೆ ಯಾವ ಅನುಭವ ಇದೆ ಎಂದು ಪ್ರಶ್ನಿಸಿದರು.

ರೈತರ ಪ್ರಶ್ನೆಗೆ ಉತ್ತರಿಸಲು ತಡಬಡಿಸಿದ ಆಡಳಿತಾಧಿಕಾರಿ, ಸಂಸ್ಥೆಯ ಉದ್ದೇಶಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತೇನೆ ಎಂದು ಹೇಳಿದಾಗ ಕೆರಳಿದ ಸದಸ್ಯರು, ನಿಮ್ಮ ಆದೇಶದ ಮೂಲ ಪ್ರತಿ ತೋರಿಸಿ, ನಿಮ್ಮ ಆದೇಶದ ಕುರಿತು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಷೇರು ಸದಸ್ಯರಿಗೆ ಆಡಳಿತಾಧಿಕಾರಿಯ ನೇಮಕ ಕುರಿತು ತಿಳಿಸಬೇಕು ಎಂದು ಆಗ್ರಹಿಸಿದರು. ತೋಟಗಾರ್ಸ್‌ ಸೇಲ್ ಸೊಸೈಟಿಯಲ್ಲಿ ೪೦ ಸಾವಿರ ಶೇರು ಸದಸ್ಯರಿದ್ದಾರೆ. ಎಲ್ಲರ ವ್ಯವಹಾರದ ಕುರಿತು ನಿಮಗೆ ತಿಳಿದಿದೆಯೇ ಎಂದು ಪ್ರಶ್ನಿಸಿದರು.