ಜಿಪಿಎಸ್, ಪ್ಯಾನಿಕ್ ಬಟನ್ ಅಳವಡಿಸುವ ಆದೇಶಕ್ಕೆ ಆಕ್ರೋಶ

| Published : Jul 24 2024, 12:15 AM IST

ಜಿಪಿಎಸ್, ಪ್ಯಾನಿಕ್ ಬಟನ್ ಅಳವಡಿಸುವ ಆದೇಶಕ್ಕೆ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ವಾಣಿಜ್ಯ ಬಳಕೆ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸುವ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಟ್ಯಾಕ್ಸಿ ಚಾಲಕರ ಸಂಘದ ಜಿಲ್ಲಾ ಘಟಕದಿಂದ ಚಿತ್ರದುರ್ಗಲ್ಲಿ ಪ್ರತಿಭಟನೆ ನಡೆಸಲಾಯಿತು

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಾಣಿಜ್ಯ ಬಳಕೆ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸುವ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಟ್ಯಾಕ್ಸಿ ಚಾಲಕರ ಸಂಘದ ಜಿಲ್ಲಾ ಘಟಕದಿಂದ ಮಂಗಳವಾರ ಚಿತ್ರದುರ್ಗಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.

ನಗರದ ಒನಕೆ ಓಬವ್ವ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಮೆರಣಿಗೆಯಲ್ಲಿ ತೆರಳಿ ಮೊದಲು ಜಿಲ್ಲಾಧಿಕಾರಿ ನಂತರ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸಾರಿಗೆ ಇಲಾಖೆ ಆದೇಶದಂತೆ ರಾಜ್ಯ ಸರ್ಕಾರ ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್ ಮತ್ತು ಜಿಪಿಆರ್‌ಎಸ್ ಎಂಬ ಅವೈಜ್ಞಾನಿಕ ಸಾಧನ ಅಳವಡಿಸಲು ಆದೇಶ ನೀಡಿದೆ. ಇದು ತುಂಬಾ ತ್ರಾಸದಾಯಕವಾಗಿದ್ದು, ರಾಜ್ಯದ ಎಲ್ಲಾ ವಾಣಿಜ್ಯ ವಾಹನಗಳು ಹಾಗೂ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕ ಮಾಲೀಕರು ಹೈರಾಣರಾಗಿರುತ್ತಾರೆ. ಇಂಥಹ ಅವೈಜ್ಞಾನಿಕ ಸಾಧನ ಅಳವಡಿಸಲು ಕೇಂದ್ರ ಸರ್ಕಾರ ನಿಗದಿಪಡಿಸಿರುವ ದರ ₹7890 ಆಗಿದೆ. ಆದರೆ ರಾಜ್ಯದ ಎಲ್ಲಾ ಸಾರಿಗೆ ಕಚೇರಿಗಳಲ್ಲಿ ₹13 ಸಾವಿರದಿಂದ ₹15 ಸಾವಿರ ವರೆಗೆ ವಸೂಲಿ ಮಾಡುತ್ತಿದ್ದು, ರಾಜ್ಯದ ಟೂರಿಸ್ಟ್ ವಾಹನ ಚಾಲಕ ಮಾಲೀಕರಿಗೆ ಮಾಡುತ್ತಿರುವ ಅಕ್ಷಮ್ಯ ಅಪರಾಧವಾಗಿದೆ ಎಂದು ಅಳಲು ತೋಡಿಕೊಂಡರು.

ರಾಜ್ಯ ಸಾರಿಗೆ ಮಂತ್ರಿಗಳು ಈ ಬಗ್ಗೆ ಸೆಪ್ಟೆಂಬರ್ 2024ರ ತನಕ ಯಾವುದೇ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸದೆ ಎಫ್‌ಸಿ ಮಾಡಬಹುದು ಎಂದು ತಿಳಿಸಿದ್ದಾರೆ. ಸಚಿವರ ಆದೇಶ ನಿರ್ಲಕ್ಷಿಸಿ ತರಾತುರಿಯಲ್ಲಿ ಎಫ್‌ಸಿ ಮಾಡಲು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಪ್ಯಾನಿಕ್ ಬಟನ್ ಕಡ್ಡಾಯ ಮಾಡಿರುತ್ತಾರೆ. ದುಬಾರಿ ತೆರಿಗೆ, ಸ್ಪೀಡ್ ಗವರ್ನರ್ ಅಳವಡಿಸಿಕೊಂಡು ವಾಹನ ಚಾಲನೆ ಮಾಡುತ್ತಿರುವ ಟ್ಯಾಕ್ಸಿ ಚಾಲಕರು, ಮಾಲೀಕರು ದುಬಾರಿ ಇನ್ಸೂರೆನ್ಸ್ ಮುಂತಾದ ಸರ್ಕಾರಿ ವೆಚ್ಚಗಳಿಂದ ಹೈರಾಣವಾಗಿದ್ದಾರೆ. ತಕ್ಷಣವೇ ಪ್ಯಾನಿಕ್ ಬಟನ್ ಮತ್ತು ಜಿಪಿಆರ್‌ಎಸ್ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಸಂಘಟನೆ ರಾಜ್ಯ ಗೌರವಾಧ್ಯಕ್ಷ ಇಕ್ಬಾಲ್ ಬಿ.ಸಿ.ರೋಡ್, ಪ್ರಧಾನ ಕಾರ್ಯದರ್ಶಿ ಆರೀಫ್ ಉಜಿರೆ, ಶರತ್‍ಕುಮಾರ್, ದಿನೇಶ್, ನರಹರಿ ಸೇರಿ ನೂರಾರು ಚಾಲಕರು ಮತ್ತು ಮಾಲೀಕರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.