ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕರ್ನಾಟಕ ಪಬ್ಲಿಕ್ ಶಾಲೆಯ ಮೂಲಭೂತ ಸೌಕರ್ಯಕ್ಕೆ ಬಿಡುಗಡೆಯಾಗಿದ್ದ ಹಣವನ್ನು ಏಕಾಏಕಿ ಹಿಂತೆಗೆದುಕೊಂಡ ಸರ್ಕಾರದ ವಿರುದ್ಧ ಗ್ರಾಮಾಂತರ ಶಾಸಕ ಸುರೇಶಗೌಡ ಅವರು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಆಕ್ರೋಶ ಹೊರಹಾಕಿದ್ದಾರೆ.ಪ್ರಶ್ನಾವಳಿ ವೇಳೆ ಮಾತನಾಡಿದ ಅವರು ನಮ್ಮ ಜಿಲ್ಲೆಗೆ ಎರಡು ಸಾರಿ ಮುಖ್ಯಮಂತ್ರಿಗಳು ಬಂದು ಹಲವು ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಆದರೆ, ಕಳೆದ ಸಾರಿ ಬಂದಾಗ ನನ್ನ ಕ್ಷೇತ್ರದಲ್ಲಿ ಹಿಂದಿನ ಸರ್ಕಾರ ಮಂಜೂರು ಮಾಡಿದ್ದ ಕರ್ನಾಟಕ ಪಬ್ಲಿಕ್ ಶಾಲೆಗೆ ಮೂಲ ಸೌಕರ್ಯ, ಕಲ್ಪಿಸಲು 1.21 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಟೆಂಡರ್ ಕೂಡ ಆಗಿತ್ತು. 1314 ಮಕ್ಕಳು ಓದುವ ಶಾಲೆಗೆ ಬಿಡುಗಡೆಯಾಗಿದ್ದ ಹಣವನ್ನು ಏಕಾಏಕಿ ಹಿಂತೆಗೆದುಕೊಂಡು ಬಿಟ್ಟರು. ಇದು ಈ ಸರ್ಕಾರದ ಆರ್ಥಿಕ ಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಅವರು ಟೀಕಿಸಿದರು.ಒಂದು ತಿಂಗಳ ಹಿಂದೆ 1,500 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗೆ ಶಂಕು ಸ್ಥಾಪನೆ ಮಾಡಿದರು. ಅವು ಯಾವ ಯಾವ ಯೋಜನೆಗಳು ಎಂದು ಅಧಿಕಾರಿಗಳ ಹತ್ತಿರ ದಾಖಲೆ ತರಿಸಿಕೊಂಡು ನೋಡಿದರೆ ಅದು ಕೇಂದ್ರ ಸರ್ಕಾರದ ಅನುದಾನದ ಜಲಜೀವನ್ ಮಿಷನ್ ಯೋಜನೆ ಮತ್ತು ಗಣಿಗಾರಿಕೆಯಿಂದ ಬಂದ ಕೇಂದ್ರದ ಸೆಸ್ ಹಣ. ಎಲ್ಲವನ್ನೂ ಸೇರಿಸಿ ನೋಡಿದರೆ ರಾಜ್ಯ ಸರ್ಕಾರದಿಂದ ಒಂದು ರೂಪಾಯಿ ಅನುದಾನವೂ ಇರಲಿಲ್ಲ ಎಂದರು.ಎತ್ತಿನ ಹೊಳೆ ನೀರಾವರಿ ಯೋಜನೆಯಡಿ ಸಚಿವರಾದ ಡಾ.ಜಿ. ಪರಮೇಶ್ವರ್ ಮತ್ತು ಕೆ.ಎನ್. ರಾಜಣ್ಣ ಅವರ ಕ್ಷೇತ್ರಗಳಾದ ಕೊರಟಗೆರೆ ಮತ್ತು ಮಧುಗಿರಿಯಲ್ಲಿ ತಲಾ 75 ಕೆರೆಗಳನ್ನು ತುಂಬಿಸಲು ತಲಾ 250 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕಿತ್ತು. ನಮ್ಮ ಜಿಲ್ಲೆಗೆ ಒಂದಿಷ್ಟು ಹಣ ಬರುತ್ತದೆ ಎಂದು ನಾನು ಸಂತೋಷದಲ್ಲಿ ಇದ್ದೆ. ಆದರೆ, ಅದಕ್ಕೂ ಒಂದು ಪೈಸೆ ಹಣ ಬಿಡುಗಡೆ ಮಾಡಲಿಲ್ಲ . ಆದರೆ, ನಮ್ಮ ಜಿಲ್ಲೆಯ ಕುಣಿಗಲ್ ಕ್ಷೇತ್ರದ ಶಾಸಕರಿಗೆ ಅನುಕೂಲ ಮಾಡಿಕೊಡಲು ಹೇಮಾವತಿ ಲಿಂಕ್ ಎಕ್ಸ್‌ಪ್ರೆಸ್ ಕೆನಾಲ್‌ಗೆ 1 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದರು. ಇದು ಹೇಗೆ ಸಾಧ್ಯವಾಯಿತು ಎಂದು ಅವರು ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ಅವರ ವಿರೋಧದ ನಡುವೆಯೇ ತಮ್ಮ ಮಾತನ್ನು ಮುಂದುವರಿಸಿದರು.ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿಯೂ ಸರ್ಕಾರ ತಾರತಮ್ಯ ಮಾಡಿದೆ. ಎಲ್ಲಾ ಕ್ಷೇತ್ರಗಳಿಗೆ ತಲಾ 25 ಕೋಟಿ ರೂಪಾಯಿ ಕೊಡುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರು. ಆದರೆ, ಜಿಲ್ಲೆಯ ಎನ್.ಡಿ.ಎ ಶಾಸಕರಿಗೆ ಒಂದು ಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಅಲ್ಲಿಯೂ ಕುಣಿಗಲ್ ಶಾಸಕರಿಗೆ 40 ಕೋಟಿ ರೂಪಾಯಿ ಕೊಟ್ಟರು. ಸಚಿವ ರಾಜಣ್ಣ ಅವರಿಗೆ ಏನೂ ಕೊಟ್ಟಿಲ್ಲ. ಜಯಚಂದ್ರ ಅವರಿಗೆ 5 ಕೋಟಿ ರೂಪಾಯಿ ಕೊಟ್ಟರು. ಪರಮೇಶ್ವರ್ ಅವರಿಗೆ 8 ಕೋಟಿ ರೂಪಾಯಿ ಕೊಟ್ಟರು. ನಮಗೂ 10 ಕೋಟಿ ರೂಪಾಯಿ ಕೊಡಬೇಕಿತ್ತು ಎಂದು ಅವರು ಆಗ್ರಹಿಸಿದರು.ʻಕ್ಷೇತ್ರಕ್ಕೆ ಯಾವುದೇ ಅನುದಾನ ಸಿಗದೇ ಇರುವ ಕಾರಣ ನಾವು ಕೇವಲ ಕಾಗದದ ಮೇಲೆ ಶಾಸಕರಾಗಿದ್ದೇವೆ. ನಾವು ಊರಿಗೆ ಹೋಗಿ ಜನರಿಗೆ ಮುಖ ತೋರಿಸಲು ಆಗುವುದಿಲ್ಲ. ಈ ಸರ್ಕಾರ ತೊಲಗಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.