ರಾಜ್ಯ ಸರ್ಕಾರ ಕನಿಷ್ಠ ವೇತನ ಪರಿಷ್ಕರಿಸಿ ತಾನೇ ಹೊರಡಿಸಿದ್ದ ಅಧಿಸೂಚನೆ ತಡೆಹಿಡಿದು ಮರುಪರಿಷ್ಕರಣೆಗಾಗಿ ಸಚಿವ ಸಂಪುಟ ಉಪಸಮಿತಿ ರಚಿಸುವ ಮೂಲಕ ಸಾಮಾಜಿಕ ನ್ಯಾಯ ಧಿಕ್ಕರಿಸಿದೆ ಎಂದು ಆರೋಪಿಸಿ ಹುಬ್ಬಳ್ಳಿ ಅಮರಗೋಳ ಎಪಿಎಂಸಿ ಹಮಾಲಿ ಕಾರ್ಮಿಕರ ಒಕ್ಕೂಟ (ಸಿಐಟಿಯು)ದ ನೇತೃತ್ವದಲ್ಲಿ ಹಮಾಲಿ ಕಾರ್ಮಿಕರು ಪ್ರತಿಭಟಿಸಿದರು.
ಹುಬ್ಬಳ್ಳಿ:
ರಾಜ್ಯ ಸರ್ಕಾರ ಕನಿಷ್ಠ ವೇತನ ಪರಿಷ್ಕರಿಸಿ ತಾನೇ ಹೊರಡಿಸಿದ್ದ ಅಧಿಸೂಚನೆ ತಡೆಹಿಡಿದು ಮರುಪರಿಷ್ಕರಣೆಗಾಗಿ ಸಚಿವ ಸಂಪುಟ ಉಪಸಮಿತಿ ರಚಿಸುವ ಮೂಲಕ ಸಾಮಾಜಿಕ ನ್ಯಾಯ ಧಿಕ್ಕರಿಸಿದೆ ಎಂದು ಆರೋಪಿಸಿ ಹುಬ್ಬಳ್ಳಿ ಅಮರಗೋಳ ಎಪಿಎಂಸಿ ಹಮಾಲಿ ಕಾರ್ಮಿಕರ ಒಕ್ಕೂಟ (ಸಿಐಟಿಯು)ದ ನೇತೃತ್ವದಲ್ಲಿ ಹಮಾಲಿ ಕಾರ್ಮಿಕರು ಪ್ರತಿಭಟಿಸಿದರು.ಎಪಿಎಂಸಿಯ ಬಸವೇಶ್ವರ ವೃತ್ತದಿಂದ ಎಪಿಎಂಸಿ ಕಚೇರಿ ವರೆಗೆ ಮೆರವಣಿಗೆ ನಡೆಸಿದ ಹಮಾಲಿ ಕಾರ್ಮಿಕರು, ಮಾಲೀಕರ ಲಾಬಿಗೆ ಮಣಿದು ಅಧಿಸೂಚನೆ ತಡೆ ಹಿಡಿದು ಶ್ರಮಜೀವಿಗಳಿಗೆ ದ್ರೋಹ ಬಗೆದಿದೆ ಎಂದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಎಪಿಎಂಸಿ ಕಾರ್ಯದರ್ಶಿ ಮೂಲಕ ಸಿಎಂ ಡಿ.ಕೆ. ಶಿವಕುಮಾರಗೆ ಮನವಿ ಸಲ್ಲಿಸಿದರು.
ಹತ್ತು ವರ್ಷಗಳಿಂದ ಕನಿಷ್ಠ ವೇತನ ಪರಿಷ್ಕರಣೆ ಆಗಿರಲಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನದಂತೆ ನ್ಯಾಯಬದ್ಧ ಕನಿಷ್ಠ ವೇತನ ನಿಗದಿಪಡಿಸಲು ಹೈಕೋರ್ಟ್ ಕೂಡ ಸೂಚಿಸಿತ್ತು. ಅದರ ಆಧಾರದಲ್ಲಿ ರಾಜ್ಯ ಕನಿಷ್ಠ ವೇತನ ಸಲಹಾ ಸಮಿತಿ ಹಲವು ವರ್ಷಗಳಿಂದ ಅನೇಕ ಸಭೆ ನಡೆಸಿ, ಬೆಲೆ ಏರಿಕೆ ಸೂಚ್ಯಂಕ ಆಧರಿಸಿ 3 ವಲಯಗಳನ್ನಾಗಿ ವಿಂಗಡಿಸಿ ಕನಿಷ್ಠ ವೇತನ ನಿಗದಿಪಡಿಸಿ ವರದಿ ನೀಡಿತ್ತು. ಇದರ ಅನ್ವಯ ಸರ್ಕಾರ ಮೇ 22ರಂದು ಅಧಿಸೂಚನೆ ಹೊರಡಿಸಿತ್ತು. ಆದರೆ, ಅಧಿಸೂಚನೆಯಲ್ಲಿ ಎಪಿಎಂಸಿ, ಮಿಲ್, ಗೋದಾಮು, ಸರಕು ಸಾಗಣೆ, ಬಜಾರಗಳಲ್ಲಿ ಕೆಲಸ ಮಾಡುವ ಲೋಡಿಂಗ್ ಮತ್ತು ಅನ್‌ಲೋಡಿಂಗ್ (ಹಮಾಲಿ) ಕಾರ್ಮಿಕರನ್ನೊಳಗೊಂಡ ಒಟ್ಟು 19 ಕೈಗಾರಿಕೆಗಳಿಗೆ ಕನಿಷ್ಠ ವೇತನ ನಿಗದಿ ಮಾಡಲೇ ಇಲ್ಲ. ಈ ಕುರಿತು ಕಾರ್ಮಿಕ ಇಲಾಖೆಗೆ ಮನವಿ ಮಾಡಲಾಗಿತ್ತು. ಈ ಪ್ರಕ್ರಿಯೆ ಇನ್ನೇನು ಪ್ರಾರಂಭವಾಗುವ ಮುನ್ನವೇ ಕನಿಷ್ಠ ವೇತನ ಮರುಪರಿಶೀಲನೆಗಾಗಿ ಸಮಿತಿ ರಚಿಸಿರುವುದು ಅಘಾತವನ್ನುಂಟು ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.ಕೂಡಲೇ ಸಚಿವ ಸಂಪುಟ ಉಪಸಮಿತಿ ರದ್ದುಪಡಿಸಿ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕನಿಷ್ಠ ವೇತನ ದರಗಳನ್ನು ವೈಜ್ಞಾನಿಕವಾಗಿ ಪರಿಷ್ಕರಿಸಿ ದರ ನಿಗದಿ ಮಾಡಿ ಜಾರಿಗೊಳಿಸಬೇಕೆಂದು ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಹಮಾಲಿ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ, ನಿವೃತ್ತಿ ಪರಿಹಾರ, ವಸತಿ ಯೋಜನೆ ಮುಂತಾದ ಬೇಡಿಕೆಗಳಿಗಾಗಿ ಪ್ರತಿಭಟನಾಕಾರರರು ಒತ್ತಾಯಿಸಿದರು.ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಜಿಲ್ಲಾಧ್ಯಕ್ಷ ಬಸವಣ್ಣೆಪ್ಪ ನೀರಲಗಿ, ಪ್ರಧಾನ ಕಾರ್ಯದರ್ಶಿ ಗುರುಸಿದ್ದಪ್ಪ ಅಂಬಿಗೇರ, ಕರಿಯಪ್ಪ ದಳವಾಯಿ, ಮಂಜುನಾಥ ಹುಜರಾತಿ, ಕತಾಲಸಾಬ ಮುಲ್ಲಾ, ಹನಮಂತ ಅಂಬಿಗೇರ, ಮೊಹ್ಮರಫೀಕ್ ಮುಳಗುಂದ, ಲಕ್ಷ್ಮವ್ವ ಹೊಸೂರಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.