ವಾಲ್ಮೀಕಿ ಭವನ ಅವೈಜ್ಞಾನಿಕ ನಿರ್ಮಾಣಕ್ಕೆ ಆಕ್ರೋಶ

| Published : Oct 02 2024, 01:12 AM IST

ಸಾರಾಂಶ

ವಾಲ್ಮೀಕಿ ಜಯಂತಿ ಆಚರಣೆ ಸಂಬಂಧ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆ ವಾಲ್ಮೀಕಿ ಭವನದ ಅವೈಜ್ಞಾನಿಕ ನಿರ್ಮಾಣದ ಆಕ್ರೋಶಕ್ಕೆ ವೇದಿಕೆಯಾದ ಪ್ರಸಂಗ ನಡೆಯಿತು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ವಾಲ್ಮೀಕಿ ಜಯಂತಿ ಆಚರಣೆ ಸಂಬಂಧ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆ ವಾಲ್ಮೀಕಿ ಭವನದ ಅವೈಜ್ಞಾನಿಕ ನಿರ್ಮಾಣದ ಆಕ್ರೋಶಕ್ಕೆ ವೇದಿಕೆಯಾದ ಪ್ರಸಂಗ ನಡೆಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ನಾಯಕ ಸಮಾಜದ ಮುಖಂಡ ಬಿ. ಕಾಂತರಾಜ್ , ಚಿತ್ರದುರ್ಗ ನಗರದ ಮದಕರಿ ವೃತ್ತದಲ್ಲಿ ನಿರ್ಮಿಸಲಾಗಿರುವ ವಾಲ್ಮೀಕಿ ಭವನ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ. ಕೋಟಿಗಟ್ಟಲೆ ಸರ್ಕಾರಿ ಅನುದಾನ ಸುರಿದರೂ ಭವನ ಬಳಕೆಗೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲವೆಂದು ದೂರಿದರು.

ವಾಲ್ಮೀಕಿ ಭವನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರವಾಗಿಲ್ಲ. ಕಾಮಗಾರಿ ನಿರ್ವಹಣೆ ಮಾಡಿದ ಗುತ್ತಿಗೆದಾರ ಹಣ ಪಡೆದು ತನ್ನ ಪಾಡಿಗೆ ತಾನಿದ್ದಾನೆ. ಇಡೀ ಆಸನ ವ್ಯವಸ್ಥೆ ಅವೈಜ್ಞಾನಿಕವಾಗಿದೆ. ಪರಿಶಿಷ್ಟರ ಅನುದಾನ ಬಳಕೆ ಮಾಡಿ ಕಟ್ಟಿದ ಭವನ ಇಷ್ಟೊಂದು ಕೆಟ್ಟದಾಗಿರಬೇಕೇ? ಕೆಲವು ತಾಂತ್ರಿಕ ಸಮಸ್ಯೆಗಳು ಇದ್ದು, ಈ ಕುರಿತು ಸಂಬಂಧಪಟ್ಟವರು ಅಗತ್ಯ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ನಗರಸಭೆ ಸದಸ್ಯ ವೆಂಕಟೇಶ್, ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಎಚ್.ಜೆ. ಕೃಷ್ಣಮೂರ್ತಿ, ವಾಲ್ಮೀಕಿ ಭವನ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದೆ. ಅಂದಿನ ಸಚಿವ ನಾಗೇಂದ್ರ ಸ್ವತಃ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದರು. ಭವನದ ಕಾಮಗಾರಿ ಮುಗಿದು ವರ್ಷಗಳೇ ಉರುಳಿದರೂ ಹಸ್ತಾಂತರವಾಗಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ಎಂ. ಕಾರ್ತಿಕ್, ನಗರದ ಮಧ್ಯಭಾಗದಲ್ಲಿರುವ ವಾಲ್ಮೀಕಿ ಭವನ ಯಾವ ಉದ್ದೇಶಕ್ಕೆ ನಿರ್ಮಾಣವಾಗಿದೆಯೋ ಅದು ಸದುಪಯೋಗವಾಗಬೇಕು. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಸಂಬಂಧಪಟ್ಟವರ ಜತೆ ಚರ್ಚಿಸಿ, ಸಭೆ ನಡೆಸಿ, ತಕ್ಷಣವೇ ಅಗತ್ಯ ಕ್ರಮ ವಹಿಸಲಾಗುವುದು ಎಂಬ ಭರವಸೆ ನೀಡಿದರು.

ಜಿಲ್ಲಾ ಮಟ್ಟದಲ್ಲಿ ಶ್ರೀ ವಾಲ್ಮೀಕಿ ಜಯಂತಿ ಅರ್ಥಪೂರ್ಣವಾಗಿ ಹಾಗೂ ಜಯಂತಿ ಯಶಸ್ವಿಗೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ವಸತಿ ನಿಲಯ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿಚಾರ ಸಂಕಿರಣ, ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಏರ್ಪಡಿಸಬೇಕು. ಭಾಷಣ, ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಹಮ್ಮಿಕೊಂಡು ವಾಲ್ಮೀಕಿ ಕುರಿತು ಅರಿವು ಮೂಡಿಸಬೇಕು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಗೆ ಕ್ರಮ ವಹಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಚಿತ್ರದುರ್ಗ ನಗರದ ಜೆಸಿಆರ್ 4ನೇ ಕ್ರಾಸ್, ಗಣೇಶ ದೇವಸ್ಥಾನ ಹತ್ತಿರ ಇರುವ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಾರ್ವಜನಿಕರ ಹಿತದೃಷ್ಠಿಯಿಂದ ನಗರದ ಬಿ.ಡಿ ರಸ್ತೆಯ ಪ್ರವಾಸಿ ಮಂದಿರದ ಸಮೀಪ ಲಿಡ್ಕರ್ ಭವನಕ್ಕೆ ಸ್ಥಳಾಂತರಿಸಬೇಕು ಎಂದು ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮವಹಿಸಿಲ್ಲ. ವಾಲ್ಮೀಕಿ ಜಯಂತಿಯಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಉದ್ಘಾಟನೆ ಕಾರ್ಯ ಆಗಬೇಕು ಎಂದು ನಾಯಕ ಸಮಾಜದ ಮುಂಡರು ಉಪವಿಭಾಗಾಧಿಕಾರಿ ಎಂ. ಕಾರ್ತಿಕ್‍ಗೆ ಮನವಿ ಮಾಡಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಕಾಳೆಸಿಂಗೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್. ದಿವಾಕರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ ಸೇರಿದಂತೆ ನಗರಸಭೆ ಸದಸ್ಯರಾದ ದೀಪು, ವೆಂಕಟೇಶ್, ಸಮಾಜದ ಮುಖಂಡರಾದ ಡಿ. ಗೋಪಾಲಸ್ವಾಮಿ ನಾಯಕ, ರತ್ನಮ್ಮ, ಪ್ರಶಾಂತ ನಾಯಕ, ರಾಜ ಮದಕರಿ ನಾಯಕ, ಗೋಪಿ, ಕಾಟಿಹಳ್ಳಿ ಕರಿಯಣ್ಣ, ಇಂಗಳದಾಳ್ ದರ್ಶನ್ ಸೇರಿದಂತೆ ಮತ್ತಿತರರು ಇದ್ದರು.17 ರಂದು ವಾಲ್ಮೀಕಿ ಜಯಂತಿ

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಜಿಲ್ಲಾ ಕೇಂದ್ರದಲ್ಲಿ ಅಕ್ಟೋಬರ್ 17 ರಂದು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿ ಎಂ. ಕಾರ್ತಿಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ 10ಕ್ಕೆ ನಗರದ ಐತಿಹಾಸಿಕ ಕೋಟೆ ಮುಂಭಾಗದಿಂದ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಪ್ರಾರಂಭವಾಗಿ, ಆನೆಬಾಗಿಲು ಮೂಲಕ, ಗಾಂಧಿವೃತ್ತ, ಮದಕರಿ ನಾಯಕ ವೃತ್ತದ ಮೂಲಕ ತರಾಸು ರಂಗಮಂದಿರ ತಲುಪಲಿದೆ. ಮಧ್ಯಾಹ್ನ 12ಕ್ಕೆ ನಗರದ ತರಾಸು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.