ಸಾರಾಂಶ
ಧಾರವಾಡ: ಇಷ್ಟು ವರ್ಷಗಳ ಕಾಲ ಮಹದಾಯಿ ಯೋಜನೆ ಜಾರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಡ್ಡಿ ಪಡಿಸಿದವು. ಈ ಅವಧಿಯಲ್ಲಿ ಸುಮ್ಮನಿದ್ದ ಪರಿಸರವಾದಿಗಳು ಇದೀಗ ಅನಗತ್ಯವಾಗಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ನಡೆಯನ್ನು ವಿರೋಧಿಸಿ ಮಹದಾಯಿ ಹೋರಾಟಗಾರರು ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಮಹಾದಾಯಿಗಾಗಿ ಮಹಾ ವೇದಿಕೆ ಸದಸ್ಯರ ನೇತೃತ್ವದಲ್ಲಿ ಪ್ರಗತಿಪರ ರೈತರು, ಕನ್ನಡಪರ ಹೋರಾಟಗಾರರು, ದಲಿತ ಮುಖಂಡರು ಸೇರಿದಂತೆ 9 ತಾಲೂಕಿನ ರೈತರು ಇಲ್ಲಿಯ ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ನಡೆಸಿದರು.ಮಹದಾಯಿ ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಕೇಂದ್ರ, ರಾಜ್ಯ ಸರ್ಕಾರಗಳು ವಿಳಂಬ ಮಾಡುವ ಮೂಲಕ ಹೋರಾಟಗಾರರೊಂದಿಗೆ ಚೆಲ್ಲಾಟ ನಡೆಸಿದ್ದಾರೆ. ಇದೀಗ ರಾಜಕೀಯ ಪ್ರೇರಿತ ಪರಿಸರವಾದಿಗಳು ಯೋಜನೆಗೆ ಉದ್ದೇಶಪೂರ್ವಕವಾಗಿ ಅಡ್ಡಿ ಪಡಿಸುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ಶಂಕರಪ್ಪಅಂಬಲಿ, ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ. ಈ ಯೋಜನೆ ಅನುಷ್ಠಾನಗೊಳಿಸಲು ಇರುವ ಎಲ್ಲ ಅಡ್ಡಿ- ಆತಂಕಗಳನ್ನು ನಿವಾರಣೆ ಮಾಡದಿದ್ದರೆ ಬರುವ ಜುಲೈ 21ರಂದು ರೈತ ಹುತಾತ್ಮ ದಿನಾಚರಣೆಯನ್ನು ಕೇಂದ್ರ ಸಚಿವರ ಮನೆ ಎದುರು ಮಾಡಲು ಮಹದಾಯಿ ಹೋರಾಟಗಾರರು ನಿರ್ಧರಿಸಿದ್ದಾರೆ. ಅಷ್ಟರಲ್ಲಿ ಎಲ್ಲ ಅಡ್ಡಿಗಳನ್ನು ಬಗೆಹರಿಸಿದರೆ ಅವರನ್ನು ಗೌರವಿಸಲಾಗುವುದು ಎಂದರು.ನವಲಗುಂದ, ನರಗುಂದದಲ್ಲಿ ಸಾಂಕೇತಿಕವಾಗಿ ಹುತಾತ್ಮ ರೈತರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ನಂತರ ಕೇಂದ್ರ ಸಚಿವರ ನಿವಾಸದ ಎದುರು ಸಹಸ್ರಾರು ರೈತರು ಸೇರಿ ಪ್ರತಿಭಟನೆ ಮೂಲಕ ರೈತ ಹುತಾತ್ಮ ದಿನಾಚರಣೆ ಆಚರಿಸಲು ತೀರ್ಮಾನಿಸಲಾಗಿದೆ.
ಗಡಿಪಾರು ಮಾಡಿ: ಕೆಲವು ಡೋಂಗಿ ಪರಿಸರವಾದಿಗಳು ಗೋವಾ ಸರ್ಕಾರದಿಂದ ಹಣ ಪಡೆದು ಮಹದಾಯಿ ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ. ಯೋಜನೆಯಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ಆರೋಪಿಸುತ್ತಿದ್ದಾರೆ. ಆದರೆ ನಾಲ್ಕು ದಶಕಗಳಿಂದ ಹೋರಾಟ ನಡೆದಿದ್ದರೂ ಸುಮ್ಮನಿದ್ದ ಪರಿಸರವಾದಿಗಳು ಈಗ ಏಕಾಏಕಿ ವಿರೋಧಿಸುತ್ತಿರುವುದು ಏಕೆ. ಅಂತವರನ್ನು ಕೂಡಲೇ ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.ರೈತ ಹೋರಾಟಗಾರ ಬಸನಗೌಡ ಪಾಟೀಲ ಮಾತನಾಡಿ, ಮಹದಾಯಿ ಯೋಜನೆಯಿಂದ ನಾಲ್ಕು ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಇದರೊಂದಿಗೆ ಕೃಷಿಗೂ ಅನುಕೂಲವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನೆ ಅನುಷ್ಠಾನಕ್ಕೆ ವಿಳಂಬ ಮಾಡದೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತರು ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಜಾಲಿಕಟ್ಟಿಯ ಕೃಷ್ಣಾನಂದ ಸ್ವಾಮೀಜಿ, ಬಿ.ಬಿ. ಮಾಸೂರ, ಲೋಕನಾಥ ಹೆಬಸೂರ, ರಾಜಶೇಖರ ಮೆಣಸಿನಕಾಯಿ, ಬಾಬಾಜಾನ ಮುಧೋಳ, ಲಕ್ಷ್ಮಣ ಬಕ್ಕಾಯಿ, ಹಮೀದ್ ಕೊಪ್ಪದ, ಶ್ರೀಶೈಲಗೌಡ ಕಮತರ, ಹೇಮಾ ಜಾಲಗಾರ, ಮಾಣಿಕ್ಯ ಚಿನ್ನೂರ, ಸಿದ್ಧೇಶ್ವರ, ಶಾಂತವ್ವ ಸುಳ್ಳದ, ಶಿವಕ್ಕ, ಮಹಾದೇವಿ ಹಿರೇಮಠ, ಶಿವಲೀಲಾ ಮುನವಳ್ಳಿ ಹಾಗೂ ಕರ್ನಾಟಕ ರಾಜ್ಯ ರೈತ ಸೇನೆ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಭಾರತೀಯ ಕಿಸಾನ್ ಸಂಘ, ಧಾರವಾಡ ಜಿಲ್ಲಾ ರಾಷ್ಟ್ರೀಯ ಮಹಿಳಾ ಸಂಘ, ಜಿಲ್ಲಾ ಅಸಂಘಟಿತ ಕಾರ್ಮಿಕರ ಸಂಘ, ಉತ್ತರ ಕರ್ನಾಟಕ ಅಂಜುಮನ್ ಇಸ್ಲಾಂ ಸಂಸ್ಥೆ, ದಲಿತ ಸಂಘರ್ಷ ಸಮಿತಿ, ಸಂಯುಕ್ತ ಜನತಾದಳ, ಈರುಳ್ಳಿ ಬೆಳೆಗಾರರ ಸಂಘ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))