ವೇತನ ವಿಳಂಭ ಖಂಡಿಸಿ ಕೆಕೆಆರ್‌ಟಿಸಿ ಸಾರಿಗೆ ಹೊರಗುತ್ತಿಗೆ ಚಾಲಕರು ದಿಢೀರ್ ಪ್ರತಿಭಟನೆ ನಡೆಸಿದರು.
ಹೂವಿನಹಡಗಲಿ: ಇಲ್ಲಿನ ಕೆಕೆಆರ್‌ಟಿಸಿ ಸಾರಿಗೆ ಘಟಕದ ಹೊರಗುತ್ತಿಗೆ ಚಾಲಕರ ವೇತನ ವಿಳಂಬ ವಿರೋಧಿಸಿ ಮಂಗಳವಾರ ಬೆಳಗ್ಗೆಯಿಂದಲೇ ಸಾರಿಗೆ ಬಸ್‌ಗಳನ್ನು ಘಟಕದಿಂದ ಹೊರಗೆ ತರದೇ ದಿಢೀರ್ ಪ್ರತಿಭಟನೆ ಮಾಡಿದ ಪ್ರಸಂಗ ಜರುಗಿದೆ.
ಈ ವೇಳೆ ಮಾತನಾಡಿದ ಗೊರಗುತ್ತಿಗೆ ಚಾಲಕರು, ಕಳೆದ ಮೂರು ವರ್ಷಗಳಿಂದ ಸಾರಿಗೆ ಘಟಕದಲ್ಲಿ ಹೊರಗುತ್ತಿಗೆ ಚಾಲಕರಾಗಿ ಕೆಲಸ ಮಾಡುತ್ತಿದ್ದೇವೆ. ಗುತ್ತಿಗೆದಾರರು ಸೇರಿದಂತೆ ಇಲಾಖೆಯವರು ವೇತನ ನೀಡುತ್ತಿಲ್ಲ. ನಮ್ಮಿಂದಲೇ ಆರಂಭದಲ್ಲಿ ₹30 ಸಾವಿರ ಠೇವಣಿ ಪಡೆದಿದ್ದಾರೆ. ನಾವು ವೇತನದಲ್ಲಿ ಪಿಎಫ್, ಇಎಸ್‌ಐ ಹಾಗೂ ಇತರೆ ಸೇರಿ ₹2800 ಕಡಿತಗೊಳಿಸುತ್ತಿದ್ದಾರೆ. ಇದರಿಂದ ನಮಗೆ ಇಎಸ್‌ಐ ಸೌಲಭ್ಯವಾಗಲಿ ಪಿಎಫ್ ಸೌಲಭ್ಯವಾಗಲಿ ದೊರೆಯುತ್ತಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳು ಕಳೆದ ಮೂರು ತಿಂಗಳಿಂದಲೂ ನಮ್ಮ ಮನವೊಲಿಸಿ ಕರ್ತವ್ಯಕ್ಕೆ ಹಾಜರು ಪಡಿಸಿದ್ದಾರೆ. ಆದರೆ, ನಮ್ಮ ಸಮಸ್ಯೆಗಳನ್ನು ಯಾರೂ ಕೇಳಿ ಪರಿಹರಿಸುತ್ತಿಲ್ಲ ಎಂದು ದೂರಿದರು.ಮೈಲಾರ, ಕೊಟ್ಟೂರು, ಕುರುವತ್ತಿ ಜಾತ್ರೆಗಳು, ಪಿಯುಸಿ ಪರೀಕ್ಷೆಗಳಿವೆ ಎಂದು ನಮ್ಮ ಮುಷ್ಕರವನ್ನು ಮುಂದೂಡುವ ಕೆಲಸ ಮಾಡಿದ್ದಾರೆ. ಆದರೆ, ನಮ್ಮ ಸಮಸ್ಯೆಯನ್ನು ಯಾರೂ ಪರಿಹರಿಸುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಟೆಂಡರ್ ಪಡೆದವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ, ಇಲ್ಲಿ ವರೆಗೂ ನಮ್ಮಿಂದ ಸೇವೆ ಮಾಡಿಸಿಕೊಂಡ ನಮ್ಮವರೇ ಹೀಗೆಂದರೆ ನಮ್ಮ ಸಮಸ್ಯೆ ಪರಿಹರಿಸುವವರು ಯಾರು? ವೇತನ ಇಲ್ಲದೆ ನಮ್ಮ ಜೀವನ ಬೀದಿಗೆ ಬರುತ್ತಿದೆ. ಇಂದು ನಮ್ಮ ವೇತನ ನೀಡಿದರೆ ಮಾತ್ರ ನಾವು ಕರ್ತವ್ಯಕ್ಕೆ ಹಾಜರಾಗುತ್ತೇವೆ ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ನವೀನ, ಆನಂದ ಜೆ., ನಾಗರಾಜ, ಬಿ. ಶಶಿಕಿರಣ, ಹಾಲೇಶ, ಕೊಟ್ರೇಶ, ಚನ್ನಮಲ್ಲಪ್ಪ, ಶೇಕ್ ಸಾಹೇಬ್, ಶರಣಪ್ಪ, ನಾಗರಾಜ, ವೀರೇಶ, ಪ್ರಭು, ಪ್ರಶಾಂತ್, ನಾಗರಾಜ್ ಸಿ, ದುರುಗೇಶ್, ಕಳಕರಡ್ಡಿ, ಗುರುಬಸವರಾಜ, ನಾಗರಾಜ್ ಡಿ. ಇ, ಕೊಟ್ರೇಶ್ ಬಡಿಗೇರ್, ಶರಪ್ಪ ಬಾರ್ಕಿ, ಪ್ರಶಾಂತ್ ಗೌಡ ಹಾಗೂ ಇತರರಿದ್ದರು.ಹೊರ ಗುತ್ತಿಗೆ ಚಾಲಕರ ಪ್ರತಿಭಟನೆಯ ಪರಿಣಾಮ, ಮಂಗಳವಾರ ಬೆಳಗ್ಗೆಯಿಂದಲೇ ತಾಲೂಕಿನ ಸಾರಿಗೆ ಇಲಾಖೆಯ ಗ್ರಾಮೀಣ ಸೌಲಭ್ಯಗಳು ಸ್ಥಗಿತವಾಗಿದ್ದವು. ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿನ 3 ಕೇಂದ್ರದಲ್ಲಿ ಪಿಯುಸಿ ಅರ್ಥಶಾಸ್ತ್ರ ಪರೀಕ್ಷೆ ಜರುಗುತ್ತಿದ್ದು, ಪರೀಕ್ಷಾ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳು ಹಾಜರಾಗಲು ಪರದಾಡುವ ಸ್ಥಿತಿ ಉಂಟಾಗಿತ್ತು.
ಸಂಸ್ಥೆಗೆ ಚಾಲಕರನ್ನು ಒದಗಿಸುವಂತೆ ಟೆಂಡರ್ ಕರೆಯಲಾಗಿತ್ತು. ಅದರಂತೆ ಟೆಂಡರ್ ಪಡೆದವರು ಹೊರಗುತ್ತಿಗೆ ಚಾಲಕರನ್ನು ಒದಗಿಸಿದ್ದರು. ಅವರ ಸಮಸ್ಯೆಯನ್ನು ನಾವು ಪರಿಹರಿಸಲು, ಕಳೆದ ಮೂರು ತಿಂಗಳಿಂದ ಪ್ರಯತ್ನಿಸುತ್ತಿದ್ದೇವೆ. ಟೆಂಡರ್ ಪಡೆದವರ ಠೇವಣಿ ಹಣ ನಮ್ಮಲ್ಲಿಯೇ ಇದೆ. ಆ ಹಣದಿಂದಲೇ ಹೊರಗುತ್ತಿಗೆ ಚಾಲಕರ ಸಮಸ್ಯೆ ಪರಿಹರಿಸುತ್ತೇವೆ ಎಂದು, ವಿಜಯನಗರ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಉದ್ದಾರ್ ತಿಳಿಸಿದ್ದಾರೆ.ಈ ವೇಳೆ ವಿಭಾಗೀಯ ಸಂಚಾರ ಅಧಿಕಾರಿ ವಿ.ಆರ್. ರೆಡ್ಡಿ ಸ್ಥಳಕ್ಕೆ ಭೇಟಿ, ಹೊರ ಗುತ್ತಿಗೆ ಚಾಲಕರ ಜನವರಿ ತಿಂಗಳ ವೇತನ, ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿದ ಬಳಿಕ, ಚಾಲಕರು ಮಧ್ಯಾಹ್ನದ ಹೊತ್ತಿಗೆ ಕರ್ತವ್ಯಕ್ಕೆ ಹಾಜರಾದರು.