ಸಾರಾಂಶ
ಕನಕಪುರ: ಕಾಡಾನೆ ದಾಳಿಗೆ ಹೊರಗುತ್ತಿಗೆ ನೌಕರನೊಬ್ಬ ಬಲಿಯಾಗಿರುವ ಧಾರುಣ ಘಟನೆ ತಾಲೂಕಿನ ಕಬ್ಬಾಳು ಅರಣ್ಯ ಪ್ರದೇಶದಲ್ಲಿ ನಡೆದಿದೆ. ಚನ್ನಪಟ್ಟಣ ತಾಲೂಕಿನ ಎಲೆಕೇರಿ ನಿವಾಸಿ ಶ್ರೇಯಸ್(20) ಕಾಡಾನೆ ದಾಳಿಗೆ ತುತ್ತಾದ ದುರ್ದೈವಿ. ಈತ ಇಟಿಎಫ್(ಆನೆ ದಾಳಿ ನಿಗ್ರಹ ತಂಡ)ದಲ್ಲಿ ಹೊರಗುತ್ತಿಗೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದನು. ಮಂಗಳವಾರ ಮಧ್ಯಾಹ್ನ ಸುಮಾರು 3.30ರಲ್ಲಿ ಕಬ್ಬಾಳು-ಕಂಚನಹಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿ ಯಲ್ಲಿ ಆನೆಗಳ ಹಿಂಡು ಬೀಡುಬಿಟ್ಟಿರುವ ಬಗ್ಗೆ ಮಾಹಿತಿ ಆದರಿಸಿ ಅವನ್ನು ಕಾಡಿಗೆ ಅಟ್ಟಲು 20 ಜನ ಸಹೋದ್ಯೋಗಿಗಳ ಜೊತೆ ತೆರಳಿದ್ದು ಆನೆಗಳ ಹಿಂಡನ್ನು ಓಡಿಸುವ ವೇಳೆ ಒಂದು ಆನೆ ಹಿಂದಿರುಗಿ ಬಂದು ಅಲ್ಲೇ ಇದ್ದ ಶ್ರೇಯಸ್ ಮೇಲೆ ದಾಳಿ ಮಾಡಿದ ಪರಿಣಾಮ ತೀವ್ರ ಗಾಯಗೊಂಡ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾರೋಹಳ್ಳಿ ಬಳಿಯ ದಯಾನಂದ ಸಾಗರ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯದಲ್ಲೇ ಅಸುನೀಗಿರುವುದಾಗಿ ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಡಿಎಫ್‌ಒ ರಾಮಕೃಷ್ಣಪ್ಪ, ಎಸಿಎಫ್ ಚೈತ್ರ, ಪುಟ್ಟಮ್ಮ, ಆರ್‌ಎಫ್‌ಒ ಮಲ್ಲೇಶ್, ಜಗದೀಶ್, ಮನ್ಸೂರ್ ಹಾಗೂ ಸಿಬ್ಬಂದಿ ಮುತ್ತು ನಾಯಕ ಸೇರಿದಂತೆ ಅರಣ್ಯ ಸಿಬ್ಬಂದಿ ಸ್ಥಳ ಪರಿಶೀಲಿಸಿದರು.