ಹೊರಗುತ್ತಿಗೆ ನೌಕರರಿಗೆ ಸಿಕ್ತು 3 ತಿಂಗಳ ಸಂಬಳ

| Published : Jul 13 2025, 01:19 AM IST

ಸಾರಾಂಶ

ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಸಾವಿನ ಕುರಿತಂತೆ ಪ್ರಮುಖ ಕಾರಣ, ಹೊರಗುತ್ತಿಗೆ ನೌಕರರ ಸಂಬಳ, ನೀಡಬೇಕಾದ ಸವಲತ್ತುಗಳನ್ನು ಸಕಾಲದಲ್ಲಿ ಸಲ್ಲಿಸದ ಗುತ್ತಿಗೆದಾರರ ಹಾಗೂ ಹಿಂದಿನ ಅಧಿಕಾರಿಗಳ ಲೋಪ, ಕರ್ತವ್ಯ ನಿರ್ಲಕ್ಷ್ಯದ ಕುರಿತು ಸರ್ಕಾರ ನೇಮಿಸಿರುವ ಉನ್ನತ ಸಮಿತಿ ಸೋಮವಾರ ಸರ್ಕಾರ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಸಾವಿನ ಕುರಿತಂತೆ ಪ್ರಮುಖ ಕಾರಣ, ಹೊರಗುತ್ತಿಗೆ ನೌಕರರ ಸಂಬಳ, ನೀಡಬೇಕಾದ ಸವಲತ್ತುಗಳನ್ನು ಸಕಾಲದಲ್ಲಿ ಸಲ್ಲಿಸದ ಗುತ್ತಿಗೆದಾರರ ಹಾಗೂ ಹಿಂದಿನ ಅಧಿಕಾರಿಗಳ ಲೋಪ, ಕರ್ತವ್ಯ ನಿರ್ಲಕ್ಷ್ಯದ ಕುರಿತು ಸರ್ಕಾರ ನೇಮಿಸಿರುವ ಉನ್ನತ ಸಮಿತಿ ಸೋಮವಾರ ಸರ್ಕಾರ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ.

ಕಳೆದ ಜೂನ್ ತಿಂಗಳಲ್ಲಿ ತಾಯಿ, 4 ಮರಿ ಹುಲಿ ಸಾವನ್ನಪ್ಪಿದ್ದವು. ಹೊರಗುತ್ತಿಗೆ ನೌಕರರಿಗೆ ಕಳೆದ 1 ವರ್ಷಗಳಿಂದ ಪಾವತಿಸಲಾದ ಸಂಬಳದ ಸ್ಟೇಟ್ ಮೆಂಟ್ ಸಮೇತ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಬೇಕಿದೆ. 10 ದಿನದೊಳಗೆ ವರದಿ ಸಲ್ಲಿಸಿದ ಬಳಿಕ ಪರಿಶೀಲಿಸಿ ಕರ್ತವ್ಯದಲ್ಲಿ ನಿರ್ಲಕ್ಯತೆ ತೋರಿದ ಅಧಿಕಾರಿ, ಸಿಬ್ಬಂದಿ ವಿರುದ್ದ ಕ್ರಮ ಜರುಗಿಸಲು ಅಗತ್ಯ ದಾಖಲೆ ಸಲ್ಲಿಸುವಂತೆ ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶಿವಪ್ರಕಾಶ್ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇಲಾಖೆ ಹಿರಿಯ ಅಧಿಕಾರಿ ಕುಮಾರ್ ಪುಷ್ಕರ್ ಅವರನ್ನೊಳಗೊಂಡ ತನಿಖಾ ತಂಡ ನೇಮಿಸಿದ್ದು ಈ ತಂಡವು 10ದಿನದೊಳಗೆ (ಜುಲೈ 10ರಂದು) ವಾಸ್ತವಾಂಶದಿಂದ ಕೂಡಿದ ವರದಿ ನೀಡಬೇಕಿತ್ತು. ಆದರೆ 10ರಂದು ಕಾರಣಾಂತರಗಳಿಂದ ಉನ್ನತ ತನಿಖಾ ತಂಡ ವರದಿ ಸಲ್ಲಿಸಿಲ್ಲ.

ಹೊರಗುತ್ತಿಗೆ ನೌಕರರಿಗೆ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳ ಸಂಬಳವನ್ನು ಪಾವತಿಸಲಾಗಿದೆ. ಆದರೆ ಅವರಿಗೆ ದೊರೆಯಬೇಕಾದ ಕಷ್ಟಕರ ಭತ್ಯೆ, ಇ ಎಸ್ ಐ ಕಾರ್ಡ್, ಪಿ ಎಫ್ ಕಾರ್ಡ್, ಗುರುತಿನ ಚೀಟಿ ಸೌಲಭ್ಯ ಇನ್ನು ದೊರೆತಿಲ್ಲ, ಚಾ.ನಗರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್‌ ಮಾತನಾಡಿ, ಗುತ್ತಿಗೆದಾರರ ಲೋಪ, ಹೊರಗುತ್ತಿಗೆ ನೌಕರರಿಗೆ ಕಳೆದ ಹಲವು ತಿಂಗಳಿಂದ ಹಣ ಪಾವತಿಸದ ವಿಚಾರ ಸೇರಿದಂತೆ ಹಲವು ವಿಚಾರಗಳನ್ನು ತನಿಖಾ ತಂಡದಲ್ಲಿದ್ದುಕೊಂಡೆ ವಿವರಿಸಿದ್ದೇನೆ. ಹಿರಿಯ ಅಧಿಕಾರಿಗಳು ಗುತ್ತಿಗೆದಾರರಿಗೆ ಸಂಬಳದ ವಿಚಾರದಲ್ಲಿ ಅಂತಿಮ ಗಡುವು ನೀಡಿ ಎಚ್ಚರಿಕೆ ನೀಡಬಹುದು. ಇಲ್ಲದೆ ಕಪ್ಪುಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಹೊರಗುತ್ತಿಗೆ ನೌಕರರಿಗೆ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳ ವೇತನವನ್ನು ಜುಲೈ ತಿಂಗಳ 2 ಮತ್ತು 4ನೇ ತಾರೀಖು ಪಾವತಿಸಲಾಗಿದೆ. ಅದೇ ರೀತಿಯಲ್ಲಿ ಜೂನ್ ತಿಂಗಳ ವೇತವನ್ನು ಜುಲೈ ತಿಂಗಳ ಅಂತ್ಯದಲ್ಲಿ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು, ಕಷ್ಟಕರ ಭತ್ಯೆ, ಇ ಎಸ್ ಐ ಮತ್ತು ಪಿ ಎಫ್ ಭತ್ಯೆ ದೊರಕಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.7 ಅಂಶದ ಮಾಹಿತಿ ಕೇಳಿದ ಸರ್ಕಾರದ ಕಾರ್ಯದರ್ಶಿ ಶಿಬಿರಗಳ ವ್ಯಾಪ್ತಿಯಲ್ಲಿ ಮೊಬೈಲ್ ನೆಟ್ ವರ್ಕ್ ಇಲ್ಲದಿದ್ದರೆ ವಾಕಿಟಾಕಿ ಒದಗಿಸಲಾಗಿತ್ತೆ, ಒದಗಿಸಿದ್ದರೆ ವಾಕಿ ಟಾಕಿಯಲ್ಲಿ ದಾಖಲಾಗಿರುವ ದತ್ತಾಂಶದ ಪರಿಶೀಲನೆ, 5 ಹುಲಿಗಳು ಸಾವಿಗೀಡಾದ ದಿನ ಗಸ್ತು ಸಿಬ್ಬಂದಿ ಮೊಬೈಲ್ ಟವರ್ ಲೋಕೇಶನ್, ಹೊರಗುತ್ತಿಗೆ ನೌಕರರ ಹಾಜರಾತಿ ಮಾಹಿತಿ, ಮಹದೇಶ್ವರ ವನ್ಯಧಾಮದಲ್ಲಿ ಇರುವ ಗುತ್ತಿಗೆ ನೌಕರರ ಸಂಖ್ಯೆ, ಅವರಿಗೆ ಯಾವ ಯಾವ ದಿನಾಂಕದಂದು ಯಾವ ತಿಂಗಳಲ್ಲಿ ವೇತನ ನೀಡಲಾಗಿದೆ ಎಂಬ ಕುರಿತು ಬ್ಯಾಂಕ್ ದಾಖಲೆ ಪುಸ್ತಕ ಸಹಿತ ದಾಖಲೆ ಒದಗಿಸಬೇಕು. ಕಳೆದ ವರ್ಷದ ಅವಧಿಯಲ್ಲಿನ ಬೀಟ್ ಫಾರೆಸ್ಟರ್, ಎಸಿಎಫ್ , ಆರ್‌ಎಫ್, ಡಿಸಿಎಫ್ 1 ವರ್ಷದ ಡೈರಿ, 1 ವರ್ಷದಲ್ಲಿ ಗಸ್ತು ನಡೆಸಿದ್ದರ ಬಗ್ಗೆ ಸ್ವಿಪ್ಟ್ ಮಾಹಿತಿ, ದತ್ತಾಂಶ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಡ್ರಾಯಿಂಗ್ ಆಫೀಸರ್‌ಗೆ ಹಣ ಬಿಡುಗಡೆಯಾದ ದಿನಾಂಕ, ಹೊರಗುತ್ತಿಗೆದಾರಿಗೆ ಸಂಬಳ ತಲುಪಿದ ದಿನಾಂಕ, ಕೆ2ನಲ್ಲಿ ಹಣ ಬಿಡುಗಡೆಯಾದ ದಿನಾಂಕ ವಿವರ ಕೇಳಿದ್ದಾರೆ. ಕಳೆದ ವರ್ಷದಲ್ಲಿ ನೀಡಿದ ಸಂಬಳ, ಅಪಾಯ ಭತ್ಯೆ, ಆಹಾರ ಭತ್ಯೆ ನೀಡಿರುವ ವಿವರ, ಮಹದೇಶ್ವರ ವನ್ಯಧಾಮದಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಕಳ್ಳಬೇಟೆ ನಿಗ್ರಹ ಶಿಬಿರ, ಜಿಪಿಎಸ್ ಒಳಗೊಂಡ ಮಾಹಿತಿ ದಾಖಲೆ 5 ದಿನದಲ್ಲಿ ಕಚೇರಿಯಿಂದ ಪಡೆದು 10ದಿನದೊಳಗೆ ವರದಿ ಸಲ್ಲಿಸುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಶಿವಪ್ರಕಾಶ್ ಸೂಚಿಸಿದ್ದಾರೆ.