ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಮ್ಮನ್ನು ಹೊರ ಗುತ್ತಿಗೆ ಎಂಬ ಜೀತಪದ್ಧತಿಯಿಂದ ವಿಮುಕ್ತಿಗೊಳಿಸಿ ಒಳಗುತ್ತಿಗೆ ನೌಕರರಾಗಿ ಪರಿಗಣಿಸಿ ಸೇವಾ ಭದ್ರತೆಯನ್ನು ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದಿಂದ ಸೋಮವಾರ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಇದೇ ವೇಳೆ ದಲಿತ ಹಿರಿಯ ಮುಖಂಡ ಕೃಷ್ಣದಾಸ್ ಮಾತನಾಡಿ, ಹಲವಾರು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನಡೆಯುತ್ತಿರುವ ಮೆಟ್ರಿಕ್ ನಂತರದ ಹಾಗೂ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ಹಲವಾರು ವರ್ಷಗಳಿಂದ ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಯಾವುದೇ ಸೇವಾ ಭದ್ರತೆ ಇಲ್ಲದೆ ಕೆಲಸ ನಿರ್ವಹಿಸುತ್ತಿದ್ದು, ನಮಗೆ ಯಾವುದೇ ಅವಘಡಗಳು ಸಂಭವಿಸಿದರೂ ಪರಿಹಾರದ ರೂಪದಲ್ಲಿ ಭದ್ರತೆ ಇರುವುದಿಲ್ಲ. ಆದ್ದರಿಂದ ನಮ್ಮನ್ನು ಹೊರಗುತ್ತಿಗೆ ಎಂಬ ಜೀತಪದ್ಧತಿಯಿಂದ ವಿಮುಕ್ತಿಗೊಳಿಸಿ ಒಳಗುತ್ತಿಗೆ ನೌಕರರಾಗಿ ಪರಿಗಣಿಸಿ ಸೇವಾ ಭದ್ರತೆಯನ್ನು ನೀಡಬೇಕೆಂದು ಮತ್ತು ಸರ್ಕಾರದ ಗಮನಕ್ಕೆ ತರಬೇಕೆಂದು ವಿನಂತಿಸಿಕೊಳ್ಳುವುದಾಗಿ ಹೇಳಿದರು. ಪ್ರಮುಖ ಬೇಡಿಕೆಗಳು:ಹೊರಗುತ್ತಿಗೆ ನೌಕರರನ್ನು ಒಳಗುತ್ತಿಗೆ ನೌಕರರಾಗಿ ಪರಿಗಣಿಸುವುದು, ನೌಕರರ ಹೆಸರಿನಲ್ಲಿ ಇಲಾಖೆ ವತಿಯಿಂದ ನೇರ ವೇತನವನ್ನು ಪಾವತಿ ಮಾಡಬೇಕು. ಇಲಾಖೆ ವತಿಯಿಂದ ಏನಾದರೂ ಅರ್ಜಿ ಆಹ್ವಾನಿಸಿದರೆ ಹೊರಗುತ್ತಿಗೆ ನೌಕರರಿಗೆ ಮೊದಲ ಆದ್ಯತೆಯನ್ನು ನೀಡಿ ಸೇವಾ ಭದ್ರತೆಯನ್ನು ನೀಡಬೇಕು. ೧೨-೧೨-೨೦೧೨ರ ದಿನಗೂಲಿ ನೌಕರರಿಗೆ ಅಂದಿನ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್‌ರವರು ದಿನಗೂಲಿ ನೌಕರಿಗೆ ಕ್ಷೇಮಾಭಿವೃದ್ಧಿ ನೌಕರರಾಗಿ ಪರಿಗಣಿಸಬೇಕು ಎಂದರು. ಹೊರಗುತ್ತಿಗೆ ನೌಕರರನ್ನು ಸೇವೆ ಮುಗಿಯುವವರೆಗೂ (೬೦ವರ್ಷ) ಕೆಲಸದಿಂದ ತೆಗೆಯಬಾರದು. ಹೊರಗುತ್ತಿಗೆ ನೌಕರರಿಗೆ ಹಲವಾರು ತಿಂಗಳಿಂದ ಬಾಕಿ ಇರುವ ಪಿ.ಎಪ್ ಹಣವನ್ನು ಖಾತೆಗೆ ಜಮಾ ಮಾಡಬೇಕು ಮತ್ತು ಹೊರಗುತ್ತಿಗೆ ನೌಕರರ ಕನಿಷ್ಠ ವೇತನವನ್ನು ಕನಿಷ್ಠ ೩೧,೦೦೦ಕ್ಕೆ ಹೆಚ್ಚಳ ಮಾಡುವುದರ ಜೊತೆಗೆ ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಎಚ್.ಕೆ. ಸಂದೇಶ್, ಹೊರಗುತ್ತಿಗೆ ಮತ್ತು ಒಳಗುತ್ತಿಗೆ ನೌಕರರ ಸಂಘ ಮಹಾಮಂಡಳಿ ಹುಬ್ಬಳ್ಳಿ ಜಿಲ್ಲಾ ಹಾಸ್ಟೇಲ್ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಕೆ.ಸಿ. ಪುಟ್ಟರಾಜು, ಪ್ರಧಾನ ಕಾರ್ಯದರ್ಶಿ ಎಸ್.ವಿ. ಪ್ರಕಾಶ್, ಗೌರವಾಧ್ಯಕ್ಷ ಕೃಷ್ಣಕುಮಾರ್, ಡಿ.ಎಸ್.ಎಸ್. ಜಿಲ್ಲಾಧ್ಯಕ್ಷ ರಮೇಶ್ ಇತರರು ಉಪಸ್ಥಿತರಿದ್ದರು.