ಸಾರಾಂಶ
ವಿಶ್ವವಿಖ್ಯಾತ ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ವೀಕೆಂಡ್ ಹಿನ್ನೆಲೆ ಭಾನುವಾರ ಒಂದೇ ದಿನ 25 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದರು. ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆ ಪ್ರವಾಸೋದ್ಯಮ ನೆಚ್ಚಿಕೊಂಡಿರುವವರಿಗೂ ಅನುಕೂಲವಾಗಿದೆ.
ಕನ್ನಡಪ್ರಭ ವಾರ್ತೆ ಹೊಸಪೇಟೆ
ವಿಶ್ವವಿಖ್ಯಾತ ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ವೀಕೆಂಡ್ ಹಿನ್ನೆಲೆ ಭಾನುವಾರ ಒಂದೇ ದಿನ 25 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದರು. ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆ ಪ್ರವಾಸೋದ್ಯಮ ನೆಚ್ಚಿಕೊಂಡಿರುವವರಿಗೂ ಅನುಕೂಲವಾಗಿದೆ.ಹಂಪಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿರುವುದರಿಂದ ಪ್ರವಾಸಿ ಮಾರ್ಗದರ್ಶಿಗಳು, ಹೋಟೆಲ್, ರೆಸಾರ್ಟ್ ಮಾಲೀಕರು ಮತ್ತು ಸಿಬ್ಬಂದಿಗೂ ಅನುಕೂಲ ಆಗಿದೆ. ಅಲ್ಲದೇ, ಆಟೋ, ಕಾರು ಚಾಲಕರು ಮತ್ತು ಅಂಗಡಿಕಾರರಿಗೂ ಅನುಕೂಲ ಆಗುತ್ತಿದೆ. ಹಂಪಿಗೆ ಪ್ರವಾಸಿಗರು ಭಾರೀ ಪ್ರಮಾಣದಲ್ಲಿ ಬರುತ್ತಿರುವುದರಿಂದ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದೆ.
ಜಿ-20 ಶೃಂಗಸಭೆ ಬಳಿಕ ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಅದರಲ್ಲೂ ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಬೆಂಗಳೂರಿನಿಂದ ಟೆಕ್ಕಿಗಳ ದಂಡೇ ಹರಿದು ಬರುತ್ತಿದ್ದು, ಹಂಪಿಯ ಐತಿಹಾಸಿಕ ಸ್ಮಾರಕಗಳನ್ನು ಕಂಡು ಸಂತಸಗೊಳ್ಳುತ್ತಿದ್ದಾರೆ. ಹಂಪಿಗೆ ಪ್ರವಾಸಿಗರು ಬರುತ್ತಿರುವುದರಿಂದ ಈ ಭಾಗದಲ್ಲೇ ಪ್ರವಾಸೋದ್ಯಮ ಚೇತರಿಸಿದ್ದು, ಹೋಟೆಲ್, ರೆಸಾರ್ಟ್‌ಗಳಲ್ಲೂ ಪ್ರವಾಸಿಗರು ಇರುವುದರಿಂದ ಹೋಟೆಲ್ ಉದ್ಯಮ ಕೂಡ ಚೇತರಿಸುತ್ತಿದೆ.ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯ, ಎದುರು ಬಸವಣ್ಣ ಮಂಟಪ, ವಿಜಯ ವಿಠ್ಠಲ ದೇವಾಲಯ, ಕಲ್ಲಿನತೇರು, ಪುರಂದರದಾಸರ ಮಂಟಪ, ಕಮಲ ಮಹಲ್, ಮಹಾನವಮಿ ದಿಬ್ಬ, ಹಜಾರರಾಮ ದೇವಾಲಯ, ಕಡಲೆ ಕಾಳು, ಸಾಸಿವೆ ಕಾಳು ಗಣಪತಿ ಮಂಟಪಗಳು, ಶ್ರೀಕೃಷ್ಣ ದೇವಾಲಯ, ಅಚ್ಯುತರಾಯ ದೇವಾಲಯ, ಸೀತೆ ಸೆರಗು, ವಾಲಿ, ಸುಗ್ರೀವ ಗುಹೆ, ಉಗ್ರ ನರಸಿಂಹ, ಬಡವಿ ಲಿಂಗ, ಕೋದಂಡರಾಮ ದೇವಾಲಯ, ಮಾಲ್ಯವಂತ ರಘುನಾಥ ದೇವಾಲಯ, ನೆಲಸ್ತರದ ಶಿವ ದೇವಾಲಯ, ಕಮಲಾಪುರದ ಪ್ರಾಚ್ಯವಸ್ತು ಸಂಗ್ರಹಾಲಯ, ಪಟ್ಟಾಭಿರಾಮ ದೇವಾಲಯ ಸೇರಿದಂತೆ ವಿವಿಧ ಸ್ಮಾರಕಗಳು ಹಾಗೂ ಬಜಾರ್‌ಗಳನ್ನು ಪ್ರವಾಸಿಗರು ವೀಕ್ಷಿಸಿದರು.
ರಾಜ್ಯ ಸೇರಿದಂತೆ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ದಿಲ್ಲಿ, ಹರ್ಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಪ್ರವಾಸಿಗರು ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಹಂಪಿಯಲ್ಲಿ ಪೊಲೀಸರು ಕೂಡ ಬಂದೋಬಸ್ತ್ ಒದಗಿಸಿದ್ದಾರೆ.