ಸಾರಾಂಶ
ಕನ್ನಡಪ್ರಭ ವಾರ್ತೆ ಮುನಿರಾಬಾದ
ಬನದ ಹುಣ್ಣಿಮೆ ಪ್ರಯುಕ್ತ ಸೋಮವಾರ 4 ಲಕ್ಷಕ್ಕೂ ಅಧಿಕ ಭಕ್ತರು ಸಮೀಪದ ಪವಿತ್ರ ಧಾರ್ಮಿಕ ಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಿಯ ದರ್ಶನ ಪಡೆದರು.ಕಳೆದ ಮೂರು ಹುಣ್ಣಿಮೆ (ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಪೌರ್ಣಮಿ) ಸಂದರ್ಭದಲ್ಲೂ 3 ಲಕ್ಷಕ್ಕೂ ಅಧಿಕ ಭಕ್ತರು ಹುಲಿಗಿಗೆ ಆಗಮಿಸಿ ದೇವಿ ದರ್ಶನ ಪಡೆಯುತ್ತಿರುವುದು ವಿಶೇಷ. ಈ ಬಾರಿ ಬನದ ಹುಣ್ಣಿಮೆ ನಿಮಿತ್ತ ಈ ಸಂಖ್ಯೆ 4 ಲಕ್ಷ ದಾಟಿದೆ. ಮುಂದಿನ ತಿಂಗಳು ಭರತ್ ಹುಣ್ಣಿಮೆ ಇದ್ದು, ಅದು ವಿಶೇಷವಾಗಿದ್ದು, ಆ ಸಂದರ್ಭದಲ್ಲಿ 6 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯಬಹುದೆಂದು ಅಂದಾಜಿಸಲಾಗಿದೆ.
ಭಾನುವಾರ ರಾತ್ರಿಯಿಂದಲೇ ದೇವಸ್ಥಾನದಲ್ಲಿ ಬೀಡುಬಿಟ್ಟ ಭಕ್ತರು:ಭಾನುವಾರ ರಾತ್ರಿ ಸುಮಾರು 50ರಿಂದ 60 ಸಾವಿರ ಭಕ್ತಾಧಿಗಳು ಹುಲಿಗಿ ಗ್ರಾಮಕ್ಕೆ ಆಗಮಿಸಿ ದೇವಸ್ಥಾನ ಮುಂಭಾಗದಲ್ಲಿರುವ ತಂಗುದಾಣದಲ್ಲಿ ವಿಶ್ರಾಂತಿ ಪಡೆದು ಬೆಳಗಿನ ಜಾವ ಅಮ್ಮನವರ ದರ್ಶನ ಪಡೆದರು. ಮದ್ಯಾಹ್ನ 12 ಗಂಟೆಗೆ ಸುಮಾರಿಗೆ ಅಮ್ಮನವರ ದರ್ಶನವನ್ನು ಪಡೆದ ಭಕ್ತರ ಸಂಖ್ಯೆಯು ಸುಮಾರು 2.5 ಲಕ್ಷ ದಾಟಿತ್ತು. ಸಂಜೆ 4 ಗಂಟೆಗೆ ಅಮ್ಮನವರ ದರ್ಶನವನ್ನು ಪಡೆದ ಭಕ್ತರ ಸಂಖ್ಯೆಯು 4 ಲಕ್ಷ ದಾಟಿತು. ಮಧ್ಯಾಹ್ನದ ನಂತರ ಹುಲಿಗಿ ಗ್ರಾಮಕ್ಕೆ ಹೆಚ್ಚು ರೆಲು ಆಗಮಿಸಿದ ಹಿನ್ನೆಲೆ ಭಕ್ತರು ಹುಬ್ಬಳ್ಳಿ, ಗದಗ, ಬೆಳಗಾವಿ, ಕೊಪ್ಪಳ, ಹೊಸಪೇಟೆ ಹಾಗೂ ಬಳ್ಳಾರಿ ಕಡೆಯಿಂದ ಭಾರಿ ಸಂಖ್ಯೆಯಲ್ಲಿ ಅಗಮಿಸಿ ಅಮ್ಮನವರ ದರ್ಶನ ಪಡೆದರು.
ದೇವಸ್ಥಾನದ ವತಿಯಿಂದ ಭಕ್ತರಿಗೆ ದಾಸೋಹ:ಅಮ್ಮನವರ ದರ್ಶನಕ್ಕೆ ಆಗಮಿಸಿದ ಲಕ್ಷಾಂತರ ಭಕ್ತರಿಗೆ ದೇವಸ್ಥಾನದ ವತಿಯಿಂದ ದಾಸೋಹ ನಡೆಸಲಾಯಿತು. ಬೆಳಗ್ಗೆ 11 ಗಂಟೆಯಿಂದ ಭಕ್ತರಿಗಾಗಿ ದಾಸೋಹ ಪ್ರಾರಂಭಿಸಲಾಗಿದ್ದು, ಜನರ ಸಂಖ್ಯೆ ಹೆಚ್ಚಿದ್ದರಿಂದ ಸಂಜೆಯವರೆಗೂ ದಾಸೋಹ ನಡೆಸಲಾಗಿದೆ ಎಂದು ದೇವಸ್ಥಾನದ ಕಾರ್ಯದರ್ಶಿ ಪ್ರಕಾಶ ರಾವ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಬನದ ಹುಣ್ಣಿಮೆ ಪ್ರಯುಕ್ತ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಹಿಟ್ನಾಳ ರಸ್ತೆ, ಶಿವಪುರ ರಸ್ತೆ, ಹಾಗೂ ಹೊಸಪೇಟೆ ರಸ್ತೆಯಿಂದ ಲಕ್ಷಾಂತರ ಭಕ್ತಾಧಿಗಳು ಆಗಮಿಸಿದರು. ಈ ಮೂರು ರಸ್ತೆಗಳಲ್ಲಿ ಪೋಲಿಸ್ ಇಲಾಖೆಯಿಂದ ಬ್ಯಾರಿಕೇಡ್ ಗಳನ್ನು ನಿರ್ಮಿಸಿ ಜನದಟ್ಟಣೆ ಆಗದಂತೆ ನಿಯಂತ್ರಿಸಲಾಯಿತು ಎಂದು ಮುನಿರಾಬಾದ ಠಾಣಾ ಪೋಲಿಸ್ ಇನ್ ಸ್ಪೆಕ್ಟರ್ ಸುನಿಲ್ ಕನ್ನಡ ಪ್ರಭಕ್ಕೆ ತಿಳಿಸಿದರು.ಕನ್ನಡ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಕೊಪ್ಪಳ, ಗಂಗಾವತಿ, ಹಾಗೂ ಹೊಸಪೇಟೆಯಿಂದ ಹುಲಿಗಿ ಗ್ರಾಮಕ್ಕೆ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಲಾಯಿತು.