ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದ ಕಳಂಕಿತ ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಧರಣಿ ವೇಳೆ ರಸ್ತೆ ತಡೆ ನಡೆಸುತ್ತಿದ್ದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಮಾಜಿ ಶಾಸಕ ಎಚ್.ಪಿ.ರಾಜೇಶ ಸೇರಿದಂತೆ 50ಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದರು. ತಾಸಿನ ಬಳಿಕ ಬಿಡುಗಡೆಗೊಳಿಸಿದ್ದಾರೆ.
- ಸಚಿವ ನಾಗೇಂದ್ರಗೆ ಸಂಪುಟದಿಂದ ವಜಾಕ್ಕೆ ಬಿಜೆಪಿ ತಾಕೀತು
- ಧರಣಿ ವೇಳೆ ರೇಣು-ಸಿಪಿಐ ಮಧ್ಯೆ ತೀವ್ರ ವಾಗ್ವಾದ: ಡಿವೈಎಸ್ಪಿ ಮಧ್ಯ ಪ್ರವೇಶ- - -
ಕನ್ನಡಪ್ರಭ ವಾರ್ತೆ ದಾವಣಗೆರೆಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದ ಕಳಂಕಿತ ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಧರಣಿ ವೇಳೆ ರಸ್ತೆ ತಡೆ ನಡೆಸುತ್ತಿದ್ದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಮಾಜಿ ಶಾಸಕ ಎಚ್.ಪಿ.ರಾಜೇಶ ಸೇರಿದಂತೆ 50ಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದರು. ತಾಸಿನ ಬಳಿಕ ಬಿಡುಗಡೆಗೊಳಿಸಿದರು.
ನಗರದ ಹಳೇ ಪಿ.ಬಿ. ರಸ್ತೆಗೆ ಹೊಂದಿಕೊಂಡಿರುವ ಉಪ ವಿಭಾಗಾಧಿಕಾರಿ ಕಚೇರಿ ಎದುರು ಕಳೆದ ಐದು ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿತ್ತು. ವಾಲ್ಮೀಕಿ ನಿಗಮದ ಲೂಟಿಯ ರೂವಾರಿ ಸಚಿವ ಬಿ.ನಾಗೇಂದ್ರಗೆ ಸಚಿವ ಸಂಪುಟದಿಂದ ಕೈ ಬಿಡುವಂತೆ ಹಾಗೂ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ಈ ಧರಣಿಯಲ್ಲಿ ನಡೆಸುತ್ತಿದೆ. ಧರಣಿಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಇತರರು ದಿಢೀರನೇ ಹಳೇ ಪಿ.ಬಿ. ರಸ್ತೆ ತಡೆ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಹೋರಾಟಕ್ಕೆ ತೀವ್ರತೆ ನೀಡಿದರು.ಧರಣಿ ಸ್ಥಳದಲ್ಲಿದ್ದ ಮುಖಂಡರು, ಕಾರ್ಯಕರ್ತರು ಏಕಾಏಕಿ ಹಳೆ ಪಿ.ಬಿ. ರಸ್ತೆಯ ಎರಡೂ ಬದಿಗೆ ಅಡ್ಡಲಾಗಿ ಕುಳಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರಲ್ಲದೇ, ಕಳಂಕಿತ ಸಚಿವ ಬಿ.ನಾಗೇಂದ್ರಗೆ ಸಂಪುಟದಿಂದ ವಜಾ ಮಾಡಬೇಕು. ವಾಲ್ಮೀಕಿ ನಿಗಮದ ಹಣ ದುರುಪಯೋಗದಲ್ಲಿ ಪ್ರಮುಖವಾಗಿ ಹೆಸರು ಕೇಳಿಕೊಂಡು ಬಂದರೂ ತಮ್ಮನ್ನು ರಕ್ಷಿಸಿಕೊಳ್ಳಲು ಈಗ ಅದಕ್ಕೆ ಜಾತಿಯ ಬಣ್ಣ ಬಳಿಯಲು ಮುಂದಾಗಿದ್ದಾರೆಂದು ಆರೋಪಿಸಿ ಘೋಷಣೆಗಳನ್ನು ಕೂಗ ತೊಡಗಿದರು.
ಹೋರಾಟನಿರತ ಎಂ.ಪಿ.ರೇಣುಕಾಚಾರ್ಯ ಹಾಗೂ ಸ್ಥಳದಲ್ಲಿ ಬಂದೋಬಸ್ತ್‌ಗೆ ನೇಮಕಗೊಂಡಿದ್ದ ವೃತ್ತ ನಿರೀಕ್ಷಕ ಉಮೇಶ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ಸಮವಸ್ತ್ರ ಹಾಗೂ ಮಫ್ತಿ ಪೊಲೀಸರು ಕಿರಿಯ ಮುಖಂಡರು, ಕಾರ್ಯಕರ್ತರನ್ನು ವಶಕ್ಕೆ ಪಡೆದು, ವಾಹನಗಳಿಗೆ ಹತ್ತಿಸಿಕೊಳ್ಳಲಾರಂಭಿಸಿದರು. ಆಗ ಸಿಪಿಐ ಹಾಗೂ ರೇಣುಕಾಚಾರ್ಯ ಮಧ್ಯೆ ಮಾತಿನ ಚಕಮಕಿ ಶುರುವಾಯಿತು. ಒಂದು ಹಂತದಲ್ಲಿ ರೇಣುಕಾಚಾರ್ಯ ತಾಳ್ಮೆ ಕಳೆದುಕೊಂಡು ಸಿಪಿಐ ವಿರುದ್ಧ ಹರಿಹಾಯುತ್ತಿದ್ದಂತೆ ಸ್ಥಳಕ್ಕೆ ಡೌಡಾಯಿಸಿದ ನಗರ ಡಿವೈಎಸ್ಪಿ ಬಿ.ಶರಣ ಬಸವೇಶ್ವರ ಪ್ರತಿಭಟನಾಕಾರರ ಮನವೊಲಿಸಿದರು.ಇದೇ ವೇಳೆ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ರು. ದುರ್ಬಳಕೆ ಮಾಡಿಕೊಂಡಿರುವ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ಮೇಲೂ ಕಳಂಕವಿದೆ. ನಾಗೇಂದ್ರ ವಜಾಗೆ ಒತ್ತಾಯಿಸಿ ಬಿಜೆಪಿ ರಾಜ್ಯ ನಾಯಕರು, ವಿಪಕ್ಷ ನಾಯಕರ ನೇತೃತ್ವದಲ್ಲಿ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆದಿದೆ. ರಾಜ್ಯವ್ಯಾಪಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದೇವೆ. ಪೊಲೀಸರನ್ನು ಬಳಸಿ ನಮ್ಮ ಹೋರಾಟವನ್ನು ಹತ್ತಿಕ್ಕುವ ದುಸ್ಸಾಹಸಕ್ಕೆ ಕಾಂಗ್ರೆಸ್ ಸರ್ಕಾರ ಹೈಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವತಃ ಡಿವೈಎಸ್ಪಿ ಬಿ.ಶರಣ ಬಸವೇಶ್ವರ ಹಾಗೂ ಇತರೆ ಅಧಿಕಾರಿಗಳು ಮಾಜಿ ಸಚಿವ ರೇಣುಕಾಚಾರ್ಯ ಇತರರನ್ನು ಪೊಲೀಸ್ ವಾಹನಕ್ಕೆ ಕರೆದೊಯ್ದರು. ರೇಣುಕಾಚಾರ್ಯ, ಡಾ. ಎ.ಎಚ್. ಶಿವಯೋಗಿಸ್ವಾಮಿ, ಎಚ್.ಪಿ. ರಾಜೇಶ, ಬಿಜೆಪಿ ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ಎ.ಇ.ನಾಗರಾಜ, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಎಸ್.ಎಂ.ವೀರೇಶ ಹನಗವಾಡಿ, ಎನ್.ರಾಜಶೇಖರ ನಾಗಪ್ಪ, ಚಂದ್ರಶೇಖರ ಪೂಜಾರ, ಲೋಕಿಕೆರೆ ನಾಗರಾಜ, ಬಿ.ಎಸ್.ಜಗದೀಶ, ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಕೆ.ಎಂ.ಸುರೇಶ, ಆರ್.ಎಲ್.ಶಿವಪ್ರಕಾಶ, ಶಂಕರಗೌಡ ಬಿರಾದಾರ, ಕೆಟಿಜೆ ನಗರ ಬಿ.ಆನಂದ, ಪಂಜು ಪೈಲ್ವಾನ್, ಸಂತೋಷ ಪೈಲ್ವಾನ್, ಕಾಯಿಪೇಟೆ ಮಂಜುನಾಥ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದು, ಕವಾಯಿತು ಮೈದಾನಕ್ಕೆ ಕರೆದೊಯ್ದರು. ಸುಮಾರು ಗಂಟೆ ನಂತರ ಬಿಡುಗಡೆ ಮಾಡಿದರು.ಇದಕ್ಕೂ ಮುನ್ನ ರೇಣುಕಾಚಾರ್ಯ, ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಎಚ್.ಪಿ.ರಾಜೇಶ, ಲೋಕಿಕೆರೆ ನಾಗರಾಜ, ಧನಂಜಯ ಕಡ್ಲೇಬಾಳು, ಆರ್.ಲಕ್ಷ್ಮಣ, ಅನಿಲಕುಮಾರ ನಾಯ್ಕ, ಐರಣಿ ಅಣ್ಣೇಶ, ಅಕ್ಕಿ ಪ್ರಭು ಕಲ್ಬುರ್ಗಿ, ಎಚ್.ಎಂ.ರುದ್ರಮುನಿಸ್ವಾಮಿ, ಶಾಮ ನೂರು ಹರೀಶ, ಗೌತಮ್ ಜೈನ್, ಶಿವನಗೌಡ ಪಾಟೀಲ, ತಾರೇಶ ನಾಯ್ಕ, ಕೆಟಿಜೆ ನಗರ ಲೋಕೇಶ, ನಿಂಗರಾಜ ರೆಡ್ಡಿ, ರಾಜು ನೀಲಗುಂದ, ಪ್ರವೀಣ ಜಾಧವ್, ಎಚ್.ಪಿ.ವಿಶ್ವಾಸ, ರಾಕೇಶ ಭಜರಂಗಿ, ಪಂಜು ಪೈಲ್ವಾನ್, ರಾಜು ವೀರಣ್ಣ ಸೇರಿದಂತೆ ದಾವಣಗೆರೆ ಉತ್ತರ, ದಕ್ಷಿಣ, ಮಾಯಕೊಂಡ, ಚನ್ನಗಿರಿ, ಹರಿಹರ, ಜಗಳೂರು ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಶುಕ್ರವಾರಕ್ಕೆ ಬಿಜೆಪಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮುಕ್ತಾಯಗೊಳಿಸಿದೆ.
- - --20ಕೆಡಿವಿಜಿ1: ದಾವಣಗೆರೆ ಎಸಿ ಕಚೇರಿ ಎದುರು ಬಿಜೆಪಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.