ಲೋಕ ಅದಾಲತ್‌ನಲ್ಲಿ 885 ಪ್ರಕರಣಗಳು ಇತ್ಯರ್ಥ

| Published : Jul 16 2024, 12:35 AM IST

ಸಾರಾಂಶ

ಅರಸೀಕೆರೆ ನಗರದ ನ್ಯಾಯಾಲಯ ಸಮುಚ್ಚಯದಲ್ಲಿ ನಡೆದ ಲೋಕ ಅದಾಲತ್ ನಲ್ಲಿ 885 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಜೆ.ಎಂ.ಎಫ್.ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣ್ ಕುಮಾರ್ ಡಿ.ವಡಿಗೇರಿ ತಿಳಿಸಿದರು. ನ್ಯಾಯಾಲಯದಲ್ಲಿ 9418 ದಾವೆಗಳಿದ್ದು, ಇವುಗಳಲ್ಲಿ 1213 ದಾವೆಗಳನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ 885 ಪ್ರಕರಣಗಳನ್ನು ಪರಸ್ಪರ ರಾಜಿ ಸಂಧಾನದೊಂದಿಗೆ ಬಗೆಹರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನ್ಯಾಯಾಲಯದಲ್ಲಿ 9418 ದಾವೆಗಳಿದ್ದು, ಇವುಗಳಲ್ಲಿ 1213 ದಾವೆಗಳನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ 885 ಪ್ರಕರಣಗಳನ್ನು ಪರಸ್ಪರ ರಾಜಿ ಸಂಧಾನದೊಂದಿಗೆ ಬಗೆಹರಿಸಲಾಗಿದೆ. ವಿಚ್ಛೇದಿತ ದಾವೆ ಮೂರು ಪ್ರಕರಣಗಳು ರಾಜಿ ಸಂಧಾನದೊಂದಿಗೆ ದಂಪತಿಗಳು ಒಂದಾಗಿರುವುದು ಈ ಬಾರಿಯ ಲೋಕ ಅದಾಲತ್‌ನ ವಿಶೇಷವಾಗಿದ್ದು, ಪಿ.ಎಲ್.ಸಿ ದಾವೆಗಳು ಸೇರಿದಂತೆ ಎಲ್ಲಾ ಪ್ರಕರಣಗಳಲ್ಲಿ ಒಟ್ಟು 4,78,85,515 ರು. ಸಂಗ್ರಹ ಮಾಡಲಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಮತ್ತು ಜೆ.ಎಂ.ಎಫ್.ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣ್ ಕುಮಾರ್ ಡಿ.ವಡಿಗೇರಿ ತಿಳಿಸಿದರು.

ನಗರದ ನ್ಯಾಯಾಲಯ ಸಮುಚ್ಚಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಮತ್ತು ಜೆ.ಎಂ.ಎಫ್.ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣ್ ಕುಮಾರ್ ಡಿ.ವಡಿಗೇರಿ ಸೇರಿದಂತೆ ತಾಲ್ಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಸಂದೇಶ್ ವಿ.ಭಂಡಾರಿ, ಅಪರ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಎಚ್.ಬಿ ರಶ್ಮಿ, ಅಪರ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಕೆ. ರವಿಕುಮಾರ್ ಇವರ ಪೀಠಗಳ ಮೂಲಕ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದೊಂದಿಗೆ ನಡೆದ ಲೋಕ ಅದಾಲತ್ ನಲ್ಲಿ 885 ಪ್ರಕರಣಗಳನ್ನು ಇತ್ಯರ್ಥಪಡಿಸಿದ ನಂತರ ಮಾಹಿತಿ ನೀಡಿದ ಅವರು ಮಾತನಾಡಿದರು.

ನ್ಯಾಯಾಲಯದಲ್ಲಿ 8418 ಪ್ರಕರಣಗಳಿದ್ದು, ಈ ಪ್ರಕರಣಗಳಲ್ಲಿ 1213 ದಾವೆಗಳನ್ನು ಲೋಕ್ ಅದಾಲತ್‌ಗೆ ಶಿಫಾರಸು ಮಾಡಲಾಗಿತ್ತು. ಈ ದಾವೆಗಳಲ್ಲಿ 885 ಪ್ರಕರಣಗಳು ಇತ್ಯರ್ಥವಾಗಿವೆ. ಹಣಕಾಸು ಮತ್ತು ದಂಡ ಪ್ರಕರಣಗಲ್ಲಿ ಒಟ್ಟು 3,23,60,221 ರು. ಇತ್ಯರ್ಥವಾಗುವುದರ ಮೂಲಕ ಕಕ್ಷಿದಾರರು ರಾಜಿ ಸಂಧಾನ ಮಾಡಿಕೊಂಡಿದ್ದಾರೆ. ಇವುಗಳಲ್ಲಿ ಚೆಕ್ ಕೇಸ್-22, ಬ್ಯಾಂಕ್ ಕೇಸ್-05 ಸೇರಲ್ಪಟ್ಟಿವೆ. ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ 16 ಪ್ರಕರಣಗಳು ಇತ್ಯಾರ್ಥವಾಗುವುದರ ಮೂಲಕ 17,38,525ರೂ ಪರಿಹಾರ ಕೊಡಿಸಲಾಗಿದೆ. ಇಂದಿನ 885 ದಾವೆಗಳಲ್ಲಿ 4,27,12,221 ರು. ಸಂಗ್ರಹವಾಗಿರುವುದು ವಿಶೇಷವಾಗಿದೆ.

ಪಿ.ಎಲ್.ಸಿ 7110 ದಾವೆಗಳಲ್ಲಿ 6290 ಪ್ರಕರಣಗಳು ರಾಜಿ ಸಂಧಾನ ಮೂಲಕ ಇತ್ಯಾರ್ಥವಾಗಿದ್ದು, ಇವುಗಳ ಮೂಲಕ 1,55,25,294 ರೂ ವಸೂಲಾಗುವುದರೊಂದಿಗೆ ಬ್ಯಾಂಕ್ ಪ್ರಕರಣಗಳಿಗೆ ಸಂಬಂಧಿಸಿದಂತೆ 839 ಪ್ರಕರಣಗಳಿಂದ 18,94,800 ರು. ಸಂಗ್ರಹವಾಗಿದ್ದು, ಬಿ.ಎಸ್.ಎನ್.ಎಲ್ ಸರ್ಕಾರಿ ಸಂಸ್ಥೆ ದಾವೆಗಳಲ್ಲಿ 9153 ರು. ಪಾವತಿಸಿದ ಕಕ್ಷಿದಾರರು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಿಕೊಂಡಿದ್ದಾರೆ.

ಮೋಟಾರು ವಾಹನಗಳ ಕಾಯ್ದೆ ಅಡಿಯ 350 ದಾವೆಗಳಲ್ಲಿ 1,60,700 ರು. ದಂಡ ಸಂಗ್ರಹದೊಂದಿಗೆ, ನಗರಸಭೆಯ ನೀರಿನ ತೆರಿಗೆ, ಮನೆ ಕಂದಾಯ ಸೇರಿದಂತೆ ವಿವಿಧ 5915 ದಾವೆಗಳಿಂದ ತೆರಿಗೆ ರೂಪದಲ್ಲಿ ಒಟ್ಟು 1,34,54,641 ರು. ರಾಜಿಸಂಧಾನ ಮೂಲಕ ಸಂಗ್ರಹ ಮಾಡಲಾಗಿದೆ. ವಿವಾಹ ವಿಚ್ಚೇದನ ಪ್ರಕರಣಗಳಲ್ಲಿ ಮೂರು ಪ್ರಕರಣಗಳನ್ನು ಇತ್ಯಾರ್ಥಪಡಿಸಿ ದಂಪತಿಗಳು ಒಗ್ಗೂಡಿ ಜೀವನ ಸಾಗಿಸಲು ಅವಕಾಶ ಮಾಡಿಕೊಟ್ಟಿರುವುದು ಲೋಕ್ ಅದಾಲತ್‌ನ ವಿಶೇಷವಾಗಿದೆ. ಉತ್ತಮ ಪ್ರಮಾಣ ಸಂಖ್ಯೆಯಲ್ಲಿ ದಾವೆಗಳು ಇತ್ಯರ್ಥವಾಗುವ ನಿಟ್ಟಿನಲ್ಲಿ ಸಂಬಂಧಿಸಿದ ಪ್ರಕರಣಗಳ ಕಕ್ಷಿದಾರರನ್ನು ರಾಜಿ ಸಂಧಾನ ಮೂಲಕ ಭಾಗವಹಿಸಲು ಪ್ರಮುಖ ಪಾತ್ರ ವಹಿಸಿದ ವಕೀಲರು ಕೂಡ ಕಾರಣಕರ್ತರಾಗಿದ್ದಾರೆ.

ನ್ಯಾಯಾಲಯದಲ್ಲಿ ರಾಜಿ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಂಡ ಕಕ್ಷಿದಾರರು ಪರಸ್ಪರ ಸೌಹಾರ್ದಯುತರಾಗಿ ಇರಲು ಈ ಲೋಕ್ ಅದಾಲತ್ ಆಂದೋಲನ ಕಾರ್ಯಕ್ರಮ ಸಹಕರಿಸುತ್ತಿದೆ. ನ್ಯಾಯಾಂಗ ಇಲಾಖೆಯಲ್ಲಿ ರಚಿಸಲಾಗಿರುವ ಕಾನೂನು ಸೇವಾ ಸಮಿತಿಯೊಂದಿಗೆ ನ್ಯಾಯಾಧೀಶರು, ವಕೀಲರು ಪ್ರಮುಖ ಪಾತ್ರವನ್ನು ವಹಿಸಿ ಆಸಕ್ತ ಕಕ್ಷಿದಾರರಿಗೆ ರಾಜಿ ಸಂಧಾನ ಮಾರ್ಗದರ್ಶನಗಳನ್ನು ನೀಡಿದ್ದಾರೆ. ರಾಜಿ ಸಂಧಾನವೇ ಅಂತಿಮವಾಗಿದ್ದು, ಇಲ್ಲಿ ಇತ್ಯರ್ಥವಾದ ಪ್ರಕರಣಗಳ ಸಂಬಂಧ ಮೇಲ್ಪಟ್ಟ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ಮುಂದುವರೆಸಲು ಅವಕಾಶ ಇರುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಸರ್ಕಾರಿ ವಕೀಲರಾದ ವಿರೂಪಾಕ್ಷಪ್ಪ, ಶಶಾಂಕ್, ವಕೀಲರ ಸಂಘದ ನೂತನ ಅಧ್ಯಕ್ಷ ಕೆ.ಜಿ ಸದಾನಂದ , ಪ್ರಧಾನ ಕಾರ್ಯದರ್ಶಿ ಎಸ್. ಪ್ರಕಾಶ್, ಲೋಕೇಶ್ , ಕಾರ್ಯಕ್ರಮ ಆಯೋಜಕ ಮುದ್ದುರಾಜ್ ಸೇರಿದಂತೆ ಹಿರಿಯ ಮತ್ತು ಕಿರಿಯ ವಕೀಲರು , ಸಿಬ್ಬಂದಿ ಉಪಸ್ಥಿತರಿದ್ದರು.