ನವರಾತ್ರಿ ಉತ್ಸವದ ಆರನೇ ದಿನವಾದ ಶುಕ್ರವಾರ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಒಂದು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು ಎಂದು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ ತಿಳಿಸಿದ್ದಾರೆ.

ಮುನಿರಾಬಾದ್: ನವರಾತ್ರಿ ಉತ್ಸವದ ಆರನೇ ದಿನವಾದ ಶುಕ್ರವಾರ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಒಂದು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು ಎಂದು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ ತಿಳಿಸಿದ್ದಾರೆ.

ಮಂಗಳವಾರ ಹಾಗೂ ಶುಕ್ರವಾರ ಅಮ್ಮನವರ ವಾರಗಳಾಗಿದ್ದು, ಪ್ರಸಕ್ತ ಸಾಲಿನ ನವರಾತ್ರಿ ಉತ್ಸವದಲ್ಲಿ ಒಂದೇ ಶುಕ್ರವಾರ ಬಂದಿರುವ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು ಎಂದು ಅವರು ಹೇಳಿದರು.

ನವರಾತ್ರಿ ಅಂಗವಾಗಿ ಹುಲಿಗೆಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ದೇವಸ್ಥಾನದ ರಾಜಬೀದಿಯ ಸೊಬಗನ್ನು ಭಕ್ತರು ಕಣ್ತುಂಬಿಕೊಂಡರು. ದೇವಸ್ಥಾನದ ಆವರಣದಲ್ಲಿ ಭಕ್ತರ ದಟ್ಟಣೆ ಕಂಡುಬಂದಿತು.

ಮೇಲ್ಸೇತುವೆ ಉದ್ಘಾಟನೆ ಯಾವಾಗ?: ದೇವಿಯ ದರ್ಶನಕ್ಕೆ ಹೆಚ್ಚಿನ ಭಕ್ತರು ಸ್ವಂತ ವಾಹನ ಮಾಡಿಕೊಂಡು ಬಂದಿದ್ದರು. ಕೆಲವರು ಹೊರರಾಜ್ಯಗಳಿಂದ ರೈಲು ಮೂಲಕ ಆಗಮಿಸಿದ್ದರು. ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬದಿಂದ ಸಂಚಾರ ದಟ್ಟಣೆ ಉಂಟಾಗಿ ಭಕ್ತರು ತೊಂದರೆ ಅನುಭವಿಸುವಂತಾಯಿತು. ದಸರಾಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಕಾಮಗಾರಿ ಇನ್ನೂ ಮುಗಿಯದಿರುವುದರಿಂದ ಮೇಲ್ಸೇತುವೆ ಉದ್ಘಾಟನೆ ಯಾವಾಗ ಎಂಬ ಪ್ರಶ್ನೆ ಹುಲಿಗೆ ಗ್ರಾಮದ ನಿವಾಸಿಗಳು ಹಾಗೂ ಭಕ್ತರನ್ನು ಕಾಡುತ್ತಿದೆ.

ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಮೇಲ್ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು. ಪದೇ ಪದೇ ಉಂಟಾಗುವ ಟ್ರಾಫಿಕ್ ಜಾಮ್‌ನಿಂದ ಮುಕ್ತಿ ಕಲ್ಪಿಸಬೇಕು ಎಂದು ಗ್ರಾಮಸ್ಥರು ಹಾಗೂ ಭಕ್ತರು ಆಗ್ರಹಿಸಿದ್ದಾರೆ.