ಸ್ಥಳೀಯ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಬುಧವಾರ ಉಳ್ಳೂರಿನಲ್ಲಿ ನಡೆದ ಪ್ರೌಢಶಾಲಾ ವಿಭಾಗದ ವಲಯಮಟ್ಟದ ಕ್ರೀಡೆಯಲ್ಲಿ ಸ್ಪರ್ಧಿಸಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಆನಂದಪುರ

ಸ್ಥಳೀಯ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಬುಧವಾರ ಉಳ್ಳೂರಿನಲ್ಲಿ ನಡೆದ ಪ್ರೌಢಶಾಲಾ ವಿಭಾಗದ ವಲಯಮಟ್ಟದ ಕ್ರೀಡೆಯಲ್ಲಿ ಸ್ಪರ್ಧಿಸಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.

ವೈಯಕ್ತಿಕ ಹಾಗೂ ಟೀಮ್‌ ಗೇಮ್ಸ್‌ಗಳಲ್ಲಿ ಸ್ಪರ್ಧಿಸಿದ 40ಕ್ಕೂ ಅಧಿಕ ಬಾಲಕ, ಬಾಲಕಿಯರು ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿ ಸಮಗ್ರ ಪ್ರಶಸ್ತಿ ಪಡೆದು ತಾಲೂಕುಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳು ಬುಧವಾರ ರಾತ್ರಿ ಬಸ್‌ನಿಲ್ದಾಣಕ್ಕೆ ಬಂದಾಗ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ನಟರಾಜ್, ಜಯಶ್ರೀ ಅವರಿಗೆ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ರಂಗನಾಥ್, ಉಮೇಶ್, ಬಿ.ಡಿ. ರವಿಕುಮಾರ್, ದೇವು, ಜಗನ್ನಾಥ್, ಮಮತಾ, ಸಂಗೀತಾ, ಸವಿತಾ, ಹಾಗೂ ಪೋಷಕರು ಶುಭಹಾರೈಸಿ ಬಳಿಕ ಸಿಹಿ ತಿಂಡಿ ವಿತರಿಸಲಾಯಿತು.

ಕರ್ನಾಟಕ ಪಬ್ಲಿಕ್ ಶಾಲೆಯ ಹಿರಿಯ ವಿದ್ಯಾರ್ಥಿ, ಬೆಂಗಳೂರು ರೇಕ್ಯೋ ಸಂಸ್ಥೆಯ ಸಿಇಓ ಪ್ರಕಾಶ್ ರುಕ್ಮಯ್ಯ ಅವರು ದೂರವಾಣಿ ಕರೆ ಮಾಡಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮುಂದಿನ ದಿನಗಳಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುವುದಾಗಿ ಭರವಸೆ ನೀಡಿದರು.