ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯಗಳ ಕೊರತೆ ನೀಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜನವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಜನವೇದಿಕೆ ನಾಯಕ ಅಕ್ರಂ ಮಾಶ್ಯಾಳಕರ ಮಾತನಾಡಿ, ಅಧ್ಯಯನ ನಡೆಸಿದ ೧೦೫ (೩೩%) ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇರಲಿಲ್ಲ, ಸ್ವಂತ ಕಟ್ಟಡ ಇಲ್ಲದ ಹಾಗೂ ಶಿಥಿಲಗೊಂಡ ಕಟ್ಟಡಗಳಲ್ಲಿ ಕೆಲಸ ಮಾಡುವ ಅಂಗನವಾಡಿಗಳ ಕಟ್ಟಡಕ್ಕೆ ಪ್ರತ್ಯೇಕ ಬಜೆಟ್ ಹಂಚಿಕೆ ಮಾಡಬೇಕು. ಕಟ್ಟಡಗಳ ತೀವ್ರ ಕೊರತೆ ಹೊಂದಿರುವ ವಿಜಯಪುರ ನಗರ ಪ್ರದೇಶಗಳಲ್ಲಿನ ಅಂಗನವಾಡಿಗಳಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ೧೦೪ ಅಂ.ಕೇಂದ್ರಗಳಲ್ಲಿ ಯೋಗ್ಯ ಶೌಚಾಲಯಗಳಿಲ್ಲ. ಕೇವಲ ೧೯ ಅಂಗನವಾಡಿಗಳಿಗೆ ಮಾತ್ರ ಬಳಕೆಗೆ ಯೋಗ್ಯ ಕುಡಿಯುವ ನೀರಿನ ಫಿಲ್ಟರ್ ಇದೆ. ರಾಜ್ಯದ ಎಲ್ಲ ಅಂಗನವಾಡಿಗಳಿಗೆ ನೀರು ಮತ್ತು ನೈರ್ಮಲ್ಯ ವ್ಯವಸ್ಥೆಯನ್ನು ಕೂಡಲೇ ಪರಿಶೀಲಿಸಿ ವಿದ್ಯುತ್ ಚಾಲಿತ ಕುಡಿಯುವ ನೀರಿನ ಫಿಲ್ಟರ್ ಒದಗಿಸಬೇಕು ಎಂದು ಆಗ್ರಹಿಸಿದರು.ರಾಜ್ಯದ ಎಲ್ಲಾ ಅಂಗನವಾಡಿಗಳಿಗೆ ಸುತ್ತುಗೋಡಗೆ ಪ್ರತ್ಯೇಕ ಬಜೆಟ್ ಮೀಸಲಿಡಬೇಕು. ಹಲವಾರು ಕೇಂದ್ರದಲ್ಲಿ ಮಕ್ಕಳಿಗೆ ಆಟವಾಡಲು ಹೊರಾಂಗಣ ವ್ಯವಸ್ಥೆ ಇಲ್ಲ, ಹೊರಾಂಗಣ ವ್ಯವಸ್ಥೆ ಒದಗಿಸಲು ಸ್ಥಳೀಯ ಸರ್ಕಾರಗಳಿಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.ಅಂಗನವಾಡಿ ಕೇಂದ್ರಗಳು ಬೆಳ್ಳಿಗೆ ೯ ರಿಂದ ಮಧ್ಯಾಹ್ನ ೧ ರವರೆಗೆ ಮಾತ್ರ ಶಾಲಾ ಪೂರ್ವ ಶಿಕ್ಷಣ ನಡೆಸುತ್ತಿದ್ದು, ವಿಜಯಪುರ ಜಿಲ್ಲೆಯ ೫೨ ಅಂಗನವಾಡಿಗಳೂ ಮಧ್ಯಾಹ್ನದವರೆಗೆ ಕೆಲಸ ನಿರ್ವಹಿಸುತ್ತಿವೆ. ಮಾರ್ಗ ಸೂಚಿಯಂತೆ ಬೆಳ್ಳಿಗೆ ೯ ರಿಂದ ಸಂಜೆ ೪ ರವರೆಗೆ ಕಾರ್ಯ ನಿರ್ವಹಿಸಬೇಕು. ಸಂಜೆವರೆಗೆ ನಡೆಸದ ಎಲ್ಲ ಕಾರ್ಯಕರ್ತೆಯರ ಮೇಲೆ ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಹಮೀದಾ ಪಟೇಲ್, ಮುತ್ತು ಭೋವಿ, ನಿರ್ಮಲಾ ಹೊಸಮನಿ, ಮಡಿವಾಳಪ್ಪ ಎಡ್ರಾಮಿ, ಲಕ್ಷ್ಮೀ ಮಾದರ, ಲಕ್ಷ್ಮೀ ಸನಪ, ರಮೇಶ ರಾಠೋಡ, ದೀಪಾ ರಾಠೋಡ, ಮಹಾನಂದಾ ಹೊಸಮನಿ, ಇಮಾಮ ಮುಲ್ಲಾ, ಮೋಟಾಬಾಯಿ ರಾಠೋಡ, ರಾಮನಗೌಡ ಬಿರಾದಾರ, ಬಸವರಾಜ ಕುಂಟೋಜಿ, ಸುಮಂಗಲಾ ಬಬಲಾದ, ಶಾಂತಾಬಾಯಿ ನಾಟೀಕಾರ ಮುಂತಾದವರು ಇದ್ದರು.