ಸಾರಾಂಶ
ಹುಬ್ಬಳ್ಳಿ: ಅತಿಯಾದ ಆತ್ಮವಿಶ್ವಾಸವೇ ಅಪಘಾತಕ್ಕೆ ಕಾರಣವಾಗುತ್ತದೆ. ಪ್ರತಿಯೊಬ್ಬ ವಿದ್ಯುತ್ ನೌಕರರು ಕೆಲಸದ ಪ್ರಾರಂಭದಲ್ಲಿ ಆಲೋಚಿಸಿದ ನಂತರ ಕೆಲಸಕ್ಕೆ ಮುಂದಾಗಬೇಕು ಎಂದು ಉಪ ಮುಖ್ಯ ವಿದ್ಯುತ್ ಪರಿವೀಕ್ಷಕ ಚಂದ್ರಶೇಖರ್ ಎಂ. ಕಡಕೋಳ ಹೇಳಿದರು.
ಗೋಪನಕೊಪ್ಪದ ಕವಿಪ್ರನಿ ನೌಕರರ ಸಮುದಾಯ ಭವನದಲ್ಲಿ ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ವಿಭಾಗದಿಂದ ಆಯೋಜಿಸಿದ ವಿದ್ಯುತ್ ಸುರಕ್ಷತೆ ಹಾಗೂ ಮುಂಜಾಗ್ರತೆ ಬಗ್ಗೆ ಅರಿವು ಮೂಡಿಸುವ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು.ಕೆಪಿಟಿಸಿಎಲ್ ನೌಕರರ ಸಂಘದ ಉಪಾಧ್ಯಕ್ಷ ವಿ.ಎಲ್. ಗುಂಜಿಕರ ಮಾತನಾಡಿ, ಅತಿಯಾದ ಆತ್ಮವಿಶ್ವಾಸ, ನಿರ್ಲಕ್ಷ್ಯ, ಸುರಕ್ಷಿತ ಕ್ರಮ ಪಾಲಿಸದಿರುವುದು ಅಪಘಾತಕ್ಕೆ ಪ್ರಮುಖ ಕಾರಣಗಳಾಗಿವೆ. ಸುರಕ್ಷತೆಗೆ ಹೆಚ್ಚು ಒತ್ತು ಕೊಡಬೇಕು. ನೀವು ಸುರಕ್ಷಿತವಾಗಿದ್ದರೆ ನಾವೆಲ್ಲರೂ ಸುರಕ್ಷಿತವಾಗಿರುತ್ತೇವೆ. ಸರ್ಕಾರ ಕೊಟ್ಟ ಉಪಕರಣಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸರ್ಕಾರ ನೀಡಿದ ಸಮವಸ್ತ್ರ, ಶೂ, ಜಾಕೇಟ್ ಮತ್ತು ಹೆಲ್ಮೇಟ್‌ಗಳನ್ನು ಎಲ್ಲ ನೌಕರರು ಕಡ್ಡಾಯವಾಗಿ ಧರಿಸಿಕೊಳ್ಳಬೇಕು. ಇವೆಲ್ಲವು ನಿಮ್ಮ ಸುರಕ್ಷತೆಯ ಸಲುವಾಗಿ ನೀಡಲಾಗಿದೆ ಎಂದರು.
ಸೈನಿಕರು ಹೇಗೆ ದೇಶದ ಸಲುವಾಗಿ ದುಡಿಯುತ್ತಾರೋ ಹಾಗೇ ವಿದ್ಯುತ್ ನೌಕರರು ದೇಶದ ಒಳಗಿನ ಜನರ ಸಲುವಾಗಿ ದುಡಿಯುತ್ತಾರೆ. ನೌಕರರು ದೇಶದ ಸೈನಿಕರಿದ್ದಂತೆ. ನೌಕರಿಗಾಗಿ ಜೀವ ವಿಮೆ ಮಾಡಿಸಲಾಗಿದೆ. ಮೃತಪಟ್ಟ ನೌಕರರ ಕುಟುಂಬಕ್ಕೆ ₹5 ಲಕ್ಷ ಮತ್ತು ಮೇಜರ್ ಪಾಯಿಂಟ್‌ನವರಿಗೆ ₹10 ಲಕ್ಷ ನೀಡಲಾಗುವುದು ಎಂದರು.ಉಪ ವಿದ್ಯುತ್ ಪರಿವೀಕ್ಷಕ ಲೋಹಿತ್ ಎಂ.ಕಡಲಾಸ್ಕರ್ ಮಾತನಾಡಿದರು. ಕಾರ್ಯಾಗಾರದಲ್ಲಿ ವೃತ್ತ ಹೆಸ್ಕಾಂನ ಅಧೀಕ್ಷಕ ಎಂಜಿನಿಯರ್ ಎಸ್.ಎಸ್. ಜಂಗೀನ, ವಿದ್ಯುತ್ ಪರಿವೀಕ್ಷಕ ಮಂಜುನಾಥ.ಸಿ. ಹಿರೇಮಠ, ನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನೀಯರ್ ಜಯಪ್ರದಾ, ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಎಂಜಿನೀಯರ್ ಕಿರಣಕುಮಾರ್.ಬಿ.ಮತ್ತು ವಲಯದ ಶಾಖಾಧಿಕಾರಿಗಳು, ನೌಕರರು ಉಪಸ್ಥಿತರಿದ್ದರು.