ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಮಾದಕ ವಸ್ತುಗಳ (ಡ್ರಗ್ಸ್) ಹಾವಳಿ ಸಂಪೂರ್ಣವಾಗಿ ಬೇರು ಸಹಿತ ಕಿತ್ತುಹಾಕಲು ಜಿಲ್ಲಾಡಳಿತ ಕಠಿಣ ಹೆಜ್ಜೆ ಇರಿಸಿದ್ದು, ನಗರ ಪ್ರದೇಶಗಳ ಖಾಲಿ ನಿವೇಶನಗಳಲ್ಲಿ ಗಾಂಜಾ ಗಿಡಗಳು ಕಂಡುಬಂದರೆ ನೇರವಾಗಿ ಆಯಾ ನಿವೇಶನಗಳ ಮಾಲೀಕರ ವಿರುದ್ಧವೇ ಕ್ರಿಮಿನಲ್ ಪ್ರಕರಣ (ಎಫ್‌ಐಆರ್) ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.ನಗರದ ಜಿಲ್ಲಾಧಿಕಾರಿ ಕೇಸ್ವಾನ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಎನ್ಕೋರ್ಡ್ ಸಮಿತಿ ಸಭೆಯಲ್ಲಿ ಡ್ರಗ್ಸ್ ನಿಯಂತ್ರಣ ಕುರಿತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.ಇತ್ತೀಚೆಗೆ ನಗರದ ಖಾಲಿ ನಿವೇಶನವೊಂದರಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ, ನಗರ ಮತ್ತು ಪಟ್ಟಣ ಪ್ರದೇಶಗಳ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮಾಲೀಕರ ಜವಾಬ್ದಾರಿ. ಇಂತಹ ಜಾಗಗಳು ಅಕ್ರಮ ಚಟುವಟಿಕೆಗಳ ತಾಣವಾಗುತ್ತಿವೆ. ಹೀಗಾಗಿ ಸ್ಥಳೀಯ ಸಂಸ್ಥೆಗಳು ತಕ್ಷಣವೇ ತಮ್ಮ ವ್ಯಾಪ್ತಿಯ ಖಾಲಿ ನಿವೇಶನಗಳ ಮಾಲೀಕರಿಗೆ ಜಾಗ ಸ್ವಚ್ಛಗೊಳಿಸುವಂತೆ ನೋಟಿಸ್ ಜಾರಿ ಮಾಡಬೇಕು. ಒಂದು ವೇಳೆ ಸ್ವಚ್ಛಗೊಳಿಸದ ಜಾಗದಲ್ಲಿ ಗಾಂಜಾ ಬೆಳೆದಿರುವುದು ಕಂಡುಬಂದರೆ, ಮಾಲೀಕರೇ ಅದಕ್ಕೆ ಹೊಣೆಗಾರರಾಗಲಿದ್ದು, ಅವರ ಮೇಲೆ ಎಫ್‌ಐಆರ್ ದಾಖಲಿಸುವಂತೆ ಸ್ಪಷ್ಟ ಸೂಚನೆ ನೀಡಿದರು.ಜಿಲ್ಲೆಯಲ್ಲಿ ವಿಶೇಷವಾಗಿ ಕೆಜಿಎಫ್ ಸೇರಿದಂತೆ ವಿವಿಧೆಡೆ ನರ್ಸಿಂಗ್, ಫಾರ್ಮಸಿ ಮುಂತಾದ ಕೋರ್ಸ್ ವ್ಯಾಸಂಗ ಮಾಡುತ್ತಿರುವ ಹೊರರಾಜ್ಯದ ವಿದ್ಯಾರ್ಥಿಗಳು ಉಳಿದುಕೊಳ್ಳುವ ಪಿಜಿ ಹಾಗೂ ಖಾಸಗಿ ಹಾಸ್ಟೆಲ್‌ಗಳ ಮೇಲೆ ನಿಗಾ ಇಡುವಂತೆ ಡಿಸಿ ಸೂಚಿಸಿದರು.ಮಾದಕ ವಸ್ತುಗಳ ಜಾಲ ಕೇವಲ ಶಾಲಾ-ಕಾಲೇಜುಗಳಿಗೆ ಸೀಮಿತವಾಗಿಲ್ಲ, ಕೈಗಾರಿಕಾ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ವೇಮಗಲ್, ನರಸಾಪುರ, ಮಾಲೂರು ಕೈಗಾರಿಕಾ ಪ್ರದೇಶಗಳ ಕಾರ್ಖಾನೆಗಳ ಆಡಳಿತ ಮಂಡಳಿಗಳು ಮತ್ತು ಮಾನವ ಸಂಪನ್ಮೂಲ ವಿಭಾಗದೊಂದಿಗೆ ಸಭೆ ನಡೆಸಿ, ಕಾರ್ಮಿಕರಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿಯೊಂದು ಕಾರ್ಖಾನೆಯಲ್ಲೂ ಮಾದಕ ವಸ್ತು ವಿರೋಧಿ ಸಮಿತಿ ರಚಿಸುವಂತೆ ಕಾರ್ಮಿಕ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರು.

ಸಂಜೆ ಮತ್ತು ರಾತ್ರಿ ವೇಳೆಯಲ್ಲಿ ನಗರದ ಉದ್ಯಾನವನಗಳು ಡ್ರಗ್ಸ್ ಪೆಡ್ಲರ್‌ಗಳು ಮತ್ತು ದುಷ್ಕರ್ಮಿಗಳ ತಾಣವಾಗುತ್ತಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ, ತಕ್ಷಣವೇ ಪಾರ್ಕ್‌ಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲು ನಗರಸಭೆಗೆ ಸೂಚಿಸಲಾಯಿತು. ಕತ್ತಲಿರುವ ಪ್ರದೇಶಗಳಲ್ಲಿ ಪೊಲೀಸರು ಗಸ್ತು ಹೆಚ್ಚಿಸಬೇಕು ಎಂದು ನಿರ್ದೇಶಿಸಿದರು.ಆರೋಹಣ್ ಫೌಂಡೇಶನ್ ನಂತಹ ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡ ಪೊಲೀಸ್ ಮಾರ್ಷಲ್ಸ್ ಪಡೆ ರಚಿಸಿ, ಅವರ ಮೂಲಕ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಹಾಗೂ ಮಾಹಿತಿ ಸಂಗ್ರಹಿಸುವ ವಿನೂತನ ಪ್ರಯೋಗ ಪ್ರಶಂಸಿಸಿದ ಜಿಲ್ಲಾಧಿಕಾರಿ, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ವಿದ್ಯಾರ್ಥಿಗಳನ್ನು ಟ್ರಾಫಿಕ್ ನಿರ್ವಹಣೆಗೂ ಬಳಸಿಕೊಳ್ಳುವ ಮೂಲಕ ಅವರಲ್ಲಿ ಶಿಸ್ತು ಮತ್ತು ಜವಾಬ್ದಾರಿ ಬೆಳೆಸುವಂತೆ ಸಲಹೆ ನೀಡಿದರು.-----೨೬ಕೆಎಲ್‌ಆರ್-೩ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿದರು.