ಡೇರೆಯಲ್ಲಿ ‘ವೆರೈಟಿ ಸಾರಿ ಸದನ್’ ಬಟ್ಟೆ ಮಳಿಗೆಯ ಮಾಲಕ!

| Published : Feb 14 2024, 02:19 AM IST

ಸಾರಾಂಶ

ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಜಂಕ್ಷನ್‌ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪಾಳು ಡೇರೆಯೊಳಗೆ ಗಣೇಶ ಪ್ರಭು ವಾಸಿಸುತ್ತಿದ್ದಾರೆ. ಟಾರ್ಪಲ್‌ಗಳನ್ನು ಬಳಸಿ ಮಾಡಿರುವ ಡೇರೆ ಬೀಳುವ ಸ್ಥಿತಿಯಲ್ಲಿದೆ, ಮೇಲ್ಭಾಗದ ಸಿಮೆಂಟ್ ಶೀಟ್ ಆಕಾಶ ತೋರಿಸುತ್ತಿದೆ, ಒಳಭಾಗದಲ್ಲಿ ರಾಶಿ ಹಾಕಲಾದ ಬಟ್ಟೆಗಳ ನಡುವೆ ಗಣೇಶ ಪ್ರಭು ಬದುಕು ದೂಡುತ್ತಿದ್ದಾರೆ.

ಮೌನೇಶ ವಿಶ್ವಕರ್ಮ

ಕನ್ನಡಪ್ರಭ ವಾರ್ತೆ ಬಂಟ್ವಾಳ ದೇಶದ ಪ್ರತಿಷ್ಠಿತ ರೇಮಂಡ್‌ ಕಂಪನಿಯ ಮಾಲಕರು ಕೌಟುಂಬಿಕ ಕಲಹದಿಂದ ಕುಟುಂಬದವರಿಂದ ಬೇರ್ಪಟ್ಟು ಕೋಟ್ಯಾಧೀಶ್ವರನಾಗಿದ್ದರೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇಂಥದ್ದೇ ಘಟನೆಯೊಂದು ಮಂಗಳೂರಿನಲ್ಲೂ ನಡೆದಿದ್ದು, ಒಂದು ಕಾಲದಲ್ಲಿ ಲಕ್ಷಾಧೀಶ್ವರನಾಗಿದ್ದ ವ್ಯಕ್ತಿ ಈಗ ಇಳಿವಯಸ್ಸಿನಲ್ಲಿ ರಸ್ತೆ ಬದಿಯಲ್ಲಿ ಡೇರೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

81 ವರ್ಷ ಪ್ರಾಯದ ಗಣೇಶ ಪ್ರಭು ಮೂಲತಃ ಮಂಗಳೂರಿನವರು. ಒಂದು ಕಾಲಕ್ಕೆ ಲಕ್ಷಾಧೀಶ್ವರನಾಗಿದ್ದ ಇವರು, 2004 ರಲ್ಲಿ ತಮ್ಮ ಕೌಟುಂಬಿಕ ಕಲಹದಿಂದ ಕುಟುಂಬದಿಂದ ಬೇರ್ಪಟ್ಟು ಇದೀಗ ಎಲ್ಲ ಇದ್ದರೂ ( ಕುಟುಂಬದವರು ಎಲ್ಲಿದ್ದಾರೆಂದು ಗೊತ್ತಿಲ್ಲ) ಅನಾಥ ಸ್ಥಿತಿಯಲ್ಲಿದ್ದಾರೆ.

1968 ರಿಂದ 1979ರ ವರೆಗೆ ವೆರೈಟಿ ಸಾರಿ ಸದನ್ ಎನ್ನುವ ಬಟ್ಟೆ ಮಳಿಗೆಯನ್ನು ನಡೆಸಿದ್ದ ಇವರು ಲಾಭದಾಯಕ ವ್ಯವಹಾರ ನಡೆಸುತ್ತಿದ್ದು, ಐದಾರು ಕೆಲಸದಾಳುಗಳಿದ್ದರು. ತದ ನಂತರ ಕೆಲಸದಾಳುಗಳ ಅಸಹಕಾರದಿಂದ ವ್ಯಾಪಾರದಲ್ಲಿ ನಷ್ಟ ಉಂಟಾಗಿ ಅದೇ ಸ್ಥಳದಲ್ಲಿ1986ರಲ್ಲಿ ಕ್ಯಾಂಟೀನ್‌ ಆರಂಭಿಸಿದ್ದರಂತೆ. ಪತ್ನಿ ಮಕ್ಕಳು ಎಲ್ಲರೂ ಕ್ಯಾಂಟೀನ್ ನಿರ್ವಹಣೆಗೆ ನೆರವಾಗುತ್ತಿದ್ದರು ಎಂದು ಅವರು ಈಗಲೂ ಸ್ಮರಿಸಿಕೊಳ್ಳುತ್ತಿದ್ದಾರೆ. ಕ್ಯಾಂಟೀನ್ ಉದ್ಯಮದಿಂದ ಬಂದ ಹಣದಲ್ಲಿ ಹೊಸಂಗಡಿ ಸಮೀಪ ತೋಟಮಾಡಲೆಂದು ಜಾಗ ಖರೀದಿ ಮಾಡಿದ್ದೇ ಇವರ ಬದುಕಿಗೆ ಮಾರಕವಾಯಿತಂತೆ. ಆ ಬಳಿಕ ಕೌಟುಂಬಿಕ ಕಲಹ ಉಂಟಾಗಿ ಮನೆಯಿಂದ ದೂರ ಉಳಿದಿದ್ದ ಇವರ ಜಮೀನನ್ನೂ ಮನೆಮಂದಿಯೇ ಮಾರಿದ್ದಾರಂತೆ.

ಡೇರೆಯಲ್ಲಿ ವಾಸ: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಜಂಕ್ಷನ್‌ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪಾಳು ಡೇರೆಯೊಳಗೆ ಗಣೇಶ ಪ್ರಭು ವಾಸಿಸುತ್ತಿದ್ದಾರೆ. ಟಾರ್ಪಲ್‌ಗಳನ್ನು ಬಳಸಿ ಮಾಡಿರುವ ಡೇರೆ ಬೀಳುವ ಸ್ಥಿತಿಯಲ್ಲಿದೆ, ಮೇಲ್ಭಾಗದ ಸಿಮೆಂಟ್ ಶೀಟ್ ಆಕಾಶ ತೋರಿಸುತ್ತಿದೆ, ಒಳಭಾಗದಲ್ಲಿ ರಾಶಿ ಹಾಕಲಾದ ಬಟ್ಟೆಗಳ ನಡುವೆ ಗಣೇಶ ಪ್ರಭು ಬದುಕು ದೂಡುತ್ತಿದ್ದಾರೆ.

ಎಲ್ಲವನ್ನೂ ಕಳೆದುಕೊಂಡು ಮಾಣಿಗೆ ಬಂದರು: 2017ರಲ್ಲಿ ಒಬ್ಬಂಟಿಯಾಗಿ ಮಾಣಿಗೆ ಬಂದ ಇವರು ಇಲ್ಲಿನ ಬಾಡಿಗೆ ಕಟ್ಟಡವೊಂದರಲ್ಲಿ ಬಟ್ಟೆ ವ್ಯಾಪಾರದ ಅಂಗಡಿ ಮಾಡಿದ್ದರು. ಆದರೆ ವ್ಯಾಪಾರದಲ್ಲಿ ನಷ್ಟ ಸಂಭವಿಸಿದ ಕಾರಣ ಕಳೆದ 2020ರ ಕೊರೋನಾದ ಬಳಿಕ ರಸ್ತೆ ಬದಿಯಲ್ಲಿಯೇ ಸಿಮೆಂಟ್ ಶೀಟ್ ಹಾಕಿದ ಸಣ್ಣ ಡೇರೆ ಮಾಡಿಕೊಂಡು ವಾಸ್ತವ್ಯ ಇದ್ದಾರೆ. ತನ್ನ ಬಟ್ಟೆ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಲುಂಗಿ, ಬೈರಾಸ್, ಟೀಶರ್ಟ್‌ಗಳು ಈಗಲೂ ಪ್ಲಾಸ್ಟಿಕ್‌ ಕವರಿನಲ್ಲಿ ಈ ಡೇರೆಯೊಳಗೆ ರಾಶಿಬಿದ್ದಿವೆ. ಆರಂಭದಲ್ಲಿ ಈ ಬಟ್ಟೆಗಳನ್ನು ಸಂತೆಯಲ್ಲಿ ಮಾರಲೆಂದು ಹೋಗುತ್ತಿದ್ದ ಇವರು ಕಳೆದ ಒಂದು ವರ್ಷದಿಂದ ಈ ಟಾರ್ಪಲ್ ಗೂಡಿನೊಳಗೆ ಅಸಹಾಯಕತೆಯ ಜೀವನ ಸಾಗಿಸುತ್ತಿದ್ದಾರೆ.

ಇವರೇ ಗಂಜಿ ಮಾಡಿಕೊಳ್ಳುತ್ತಾರೆ..!: ತನ್ನ ಗೂಡಿನೊಳಗೆ ಅನ್ನಬೇಯಿಸಿ ಗಂಜಿ ಮಾಡಿಕೊಳ್ಳುತ್ತಿರುವ ಗಣೇಶ ಪ್ರಭುಗಳಿಗೆ ಸ್ಥಳೀಯ ಬೇಕರಿ ಮಾಲಕರಾದ ಮಧುಸೂದನ್ ಪೈ ಎಲ್ಲ ವಿಚಾರದಲ್ಲಿ ಮಾನವೀಯತೆಯ ಸ್ಪಂದನ ನೀಡುತ್ತಿದ್ದಾರೆ. ಬೆಳಗ್ಗಿನ ತಿಂಡಿ ಹಾಗೂ ಮಧ್ಯಾಹ್ನ ಹಾಗೂ ರಾತ್ರಿ ಊಟದ ಸಾಂಬಾರು ನೀಡುತ್ತಿದ್ದಾರೆ. ಎದುರಿನ ಅಂಗಡಿಯ ಗಂಗಾಧರ್ ಅವರು ಗಣೇಶ ಪ್ರಭುಗಳ ನೀರಿನ ಅಗತ್ಯತೆಯನ್ನು ಪೂರೈಸುತ್ತಿದ್ದಾರೆ.

ಕಣ್ಣು ಮುಚ್ಚಿದ ಆಡಳಿತ ವ್ಯವಸ್ಥೆ..??

ಭಾರೀ ವ್ಯವಹಾರಿಕ ಕ್ಷೇತ್ರವಾದ ಮಾಣಿ ಜಂಕ್ಷನ್‌ನಲ್ಲಿರುವ ಈ ವೃದ್ಧರ ಅಸಹಾಯಕ ಪರಿಸ್ಥಿತಿ ಸ್ಥಳೀಯಾಡಳಿತ, ಸಂಬಂಧಿಸಿದ ಇಲಾಖೆ ಅಥವಾ ಯಾವ ಜನಪ್ರತಿನಿಧಿಯ ಕಣ್ಣಿಗೆ ಬೀಳದಿರುವುದು ದುರಂತವೇ ಸರಿ. ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಂಡು ಗಣೇಶ ಪ್ರಭುಗಳ ವೃದ್ಧಾಪ್ಯದ ಬದುಕಿಗೆ ಆಸರೆಯಾಗಬೇಕಿದೆ.ಒಂದು ಕಣ್ಣು ಸರಿಯಾಗಿ ಕಾಣುತ್ತಿಲ್ಲ,ಈಗ ನರಕದಲ್ಲಿದ್ದೇನೆ, ಹಳೆಯದನ್ನೆಲ್ಲ ಕೇಳಿ ಯಾವ ಪ್ರಯೋಜನವಿಲ್ಲ. ಆಶ್ರಮಕ್ಕೆ ಸೇರಿಸಿದ್ರೆ ಖುಷಿಯಿಂದ ಹೋಗುತ್ತೇನೆ ಎನ್ನುತ್ತಾರೆ ಗಣೇಶ ಪ್ರಭು.---

ಗಣೇಶ ಪ್ರಭುಗಳ ಸಂಬಂಧಿಕರು ಮಂಗಳೂರಿನಲ್ಲಿ ಇದ್ದಾರಂತೆ, ಅವರನ್ನು ಹುಡುಕಲು ತುಂಬಾ ಪ್ರಯತ್ನ ಮಾಡಿದ್ದೇವೆ. ಪೊಲೀಸ್ ಇಲಾಖೆಯ ನೆರವಿನಿಂದ ಆಶ್ರಮಕ್ಕೆ‌ ಸೇರಿಸುವ ಯೋಚನೆ‌ ಇದೆ ಎನ್ನುತ್ತಾರೆ ಸಮೀಪದ ಬೇಕರಿ ಮಾಲಕ ಮಧುಸೂದನ್‌ ಪೈ.