ಎರಡುವರೆ ಕ್ವಿಂಟಲ್ ಇರುವ ಮರಳು ತುಂಬಿದ ಚೀಲವನ್ನು ಎರಡು ನೂರು ಮೀಟರ್‌ ದೂರದಷ್ಟು ಎಳೆಯುವ ಸ್ಪರ್ಧೆ

ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ಆಧುನಿಕತೆಯ ಪರಿಣಾಮದಿಂದ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವ ಹಿನ್ನೆಲೆ ಕ್ರೀಡೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಾಲೂಕಿನ ಗುಮಗೇರಾ ಗ್ರಾಮದಲ್ಲಿ ಜೋಡೆತ್ತುಗಳ ಭಾರ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ತಾಲೂಕು ಸೇರಿದಂತೆ ಅನ್ಯ ಭಾಗದ ಹತ್ತಾರು ಹಳ್ಳಿಗಳಿಂದ ರೈತರು ಕರೆ ತಂದ ಸುಮಾರು 26 ಜೋಡಿ ಎತ್ತುಗಳನ್ನು ಸ್ಪರ್ಧೆಗೆ ಇಳಿಸಲಾಗಿತ್ತು. ಸ್ಪರ್ಧೆಗಾಗಿ ಎರಡು ನೂರು ಮೀಟರ್‌ಗೂ ಅಧಿಕ ಮೈದಾನ ತಯಾರಿ ಮಾಡಲಾಗಿತ್ತು.

ಎರಡುವರೆ ಕ್ವಿಂಟಲ್ ಇರುವ ಮರಳು ತುಂಬಿದ ಚೀಲವನ್ನು ಎರಡು ನೂರು ಮೀಟರ್‌ ದೂರದಷ್ಟು ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎತ್ತುಗಳು ತಮ್ಮಲ್ಲಿರುವ ಶಕ್ತಿ ಸಾಮರ್ಥ್ಯ ತೋರಿಸುವ ಮೂಲಕ ಒಂದು ಜೋಡಿಗಿಂತ ಮತ್ತೊಂದು ಜೋಡಿ ಎತ್ತುಗಳು ಭಾರ ಎಳೆಯುವುದರಲ್ಲಿ ಮುಂದಾದವು.

ವಿಜೇತರಿಗೆ ಬಹುಮಾನ:ಶಿಡ್ಲಬಾವಿಯ ಗುನ್ನೇಶ್ವರದ ಜೋಡೆತ್ತುಗಳು 27 ಸೆಕೆಂಡಿನಲ್ಲಿ 200ಮೀಟರ ದೂರ ಓಡುವ ಮೂಲಕ ಪ್ರಥಮ ಬಹುಮಾನವಾಗಿ ₹25000 ಪಡೆದುಕೊಂಡಿತ್ತು. ಲಿಂಗದಹಳ್ಳಿ ಅಮರೇಶ್ವರ ಜೋಡೆತ್ತುಗಳು 28.47 ಸೆಕೆಂಡ್ ನಲ್ಲಿ ಓಡುವ ಮೂಲಕ ದ್ವಿತೀಯ ಬಹುಮಾನ ₹15000 ಪಡೆದುಕೊಂಡಿತ್ತು. ಗಂಗನಾಳದ ಹನುಮಂತ ಕಂಬಳಿ ಜೋಡೆತ್ತುಗಳು 29.44 ಸೆಕೆಂಡ್ ನಲ್ಲಿ ಓಡುವ ಮೂಲಕ ತೃತಿಯ ಬಹುಮಾನ ₹11000 ಪಡೆದುಕೊಂಡಿತ್ತು, ಶಿಡ್ಲಬಾವಿಯ ಹನಮಂತ ಶಿಡ್ಲಳ್ಳಿಯ ಜೋಡೆತ್ತುಗಳು 29.57 ಸೆಕೆಂಡ್ ನಲ್ಲಿ ಓಡುವ ಮೂಲಕ ಚತುರ್ಥ ಬಹುಮಾನ ₹5000 ಪಡೆದುಕೊಂಡಿತ್ತು. ಹುಲಿಯಾಪೂರದ ಮೌಲಾಸಾಬ್‌ ಜೋಡೆತ್ತು 29.78 ಸೆಕೆಂಡ್ ನಲ್ಲಿ ಓಡುವ ಮೂಲಕ ಐದನೇಯ ಬಹುಮಾನ ₹3000 ಪಡೆದುಕೊಂಡಿತ್ತು. ಭಾರ ಎಳೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಎತ್ತುಗಳಿಗೆ ಎತ್ತಿನ ಹಣೆಕಟ್ಟು ಮತ್ತು ನೆನಪಿನ ಕಾಣಿಕೆ ನೀಡುವುದರ ಮೂಲಕ ಪ್ರೋತ್ಸಾಹಿಸಲಾಯಿತು.

ಸ್ಪರ್ಧೆಗೂ ಮೊದಲು ಎತ್ತುಗಳಿಗೆ ಪೂಜಿಸಿದ ಗುಮಗೇರಿ ಗ್ರಾಪಂ ಅಧ್ಯಕ್ಷ ಪರಸಪ್ಪ ಗಂಗನಾಳ ರಿಬ್ಬನ್ ಕತ್ತರಿಸುವ ಮೂಲಕ ಭಾರ ಎಳೆಯುವ ಸ್ಪರ್ಧೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾರುತೆಪ್ಪ ಭಜಂತ್ರಿ, ಬೀರಪ್ಪ ಜರಗಡ್ಡಿ, ಚಂದ್ರಪ್ಪ ಹೊಟ್ಟೆರ, ಹನುಮಪ್ಪ ಗುರಿಕಾರ, ಹನುಮಂತ ಕಂಬಳಿ, ಹನುಮಂತ ಭಾವಿಕಟ್ಟಿ, ಚೇತನ್ ಸಂಗನಾಳ, ಶರೀಫ್ ಸಾಬ್ ಭಾವಿಕಟ್ಟಿ, ಯಮನಪ್ಪ ಮಜ್ಜಿಗಿ ಸೇರಿದಂತೆ ಆಯೋಜಕರು, ರೈತರು ಹಾಗೂ ಗ್ರಾಮದ ಗಣ್ಯರು ಇದ್ದರು.

ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆ ಹಾಗೂ ಸಂಪ್ರದಾಯ ಉಳಿಸಿಕೊಳ್ಳಲು ಗುಮಗೇರಿಯಲ್ಲಿ ಎತ್ತುಗಳ ಮೂಲಕ ಭಾರ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದು ಗುಮಗೇರಿ ಗ್ರಾಪಂ ಅಧ್ಯಕ್ಷ ಪರಸಪ್ಪ ಗಂಗನಾಳ ತಿಳಿಸಿದ್ದಾರೆ.

ಎತ್ತುಗಳನ್ನು ನಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದು, ಯಾವುದೆ ತೊಂದರೆಯಾಗದಂತೆ ಸಾಕಿ ಸಲಹುತ್ತೇವೆ ಗ್ರಾಮೀಣ ಕ್ರೀಡಾ ಸಂಪ್ರದಾಯ ಉಳಿಸಿ ಬೆಳೆಸಲು ಇಂತಹ ಸ್ಪರ್ಧೆಯಲ್ಲಿ ಭಾಗವಹಿಸುತ್ತೇವೆ ಎಂದು ಪ್ರಥಮ ಬಹುಮಾನ ಪಡೆದ ಎತ್ತುಗಳ ಮಾಲಿಕ ಈರಪ್ಪ ತಲ್ಲೂರು ತಿಳಿಸಿದ್ದಾರೆ.