ಆಕ್ಸಿಜನ್ ದುರಂತ: ಕಾರಣರಾದವರಿಗೆ ಶಿಕ್ಷೆಯಾಗಲಿ

| Published : May 04 2025, 01:34 AM IST

ಸಾರಾಂಶ

ಚಾಮರಾಜನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆ ಮುಂಭಾಗದಲ್ಲಿ ಆಕ್ಸಿಜನ್ ದುರಂತದ ಸಂತ್ರಸ್ತರು, ಎಸ್.ಡಿ.ಪಿ ಹಾಗೂ ಪ್ರಗತಿಪರ ಸಂಘಟನೆಯ ಮುಖಂಡರು ಕರಾಳ ದಿನವೆಂದು ಮೊಂಬತ್ತಿ ಹಚ್ಚಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆ ಮುಂಭಾಗದಲ್ಲಿ ಆಕ್ಸಿಜನ್ ದುರಂತದ ಸಂತ್ರಸ್ಥರು, ಎಸ್.ಡಿ.ಪಿ ಪಕ್ಷದವರು ಹಾಗೂ ಪ್ರಗತಿಪರ ಸಂಘಟನೆಯ ಮುಖಂಡರು ಕರಾಳ ದಿನವೆಂದು ಮೊಂಬತ್ತಿ ಹಚ್ಚಿ ಪ್ರತಿಭಟನೆ ನಡೆಸಿದರು. ಹಿರಿಯ ರಂಗಕರ್ಮಿ ವೆಂಕಟರಾಜು ಮಾತನಾಡಿ ಮೇ 2 ಚಾಮರಾಜನಗರಕ್ಕೆ ಮಾತ್ರ ಕರಾಳ ದಿನವಲ್ಲ ಸ್ವತಂತ್ರ ಭಾರತದಲ್ಲಿ ಇಡೀ ದೇಶಕ್ಕೆ ಕರಾಳ ದಿನ. ಕೊರೋನಾ ಸಂದರ್ಭದಲ್ಲಿ ಕನಿಷ್ಠ ಆಮ್ಲಜನಕವನ್ನು ಪೂರೈಸಲಾಗದೇ ಅನೇಕ ಜನರು ಮರಣ ಹೊಂದಿರುತ್ತಾರೆ. ಸಂತ್ರಸ್ಥರ ಕುಟುಂಬದವರು ತಂದೆ-ತಾಯಿ, ಗಂಡ, ಮಗ, ಸೊಸೆ, ಅಳಿಯ,ಮಗಳು ಹೀಗೆ ಎಲ್ಲರನ್ನು ಕಳೆದುಕೊಂಡು ಅನಾಥವಾಗಿದ್ದಾರೆ. ಮನೆಯ ಆಧಾರವೇ ಇಲ್ಲದಂತಾಗಿದೆ. ಇದಕ್ಕೆ ಸರ್ಕಾರಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಇದುವರೆಗೂ ಸಂತ್ರಸ್ತರಿಗೆ ನೆರವಾಗಿ ಅನುಕಂಪದ ಉದ್ಯೋಗ ನೀಡುವುದರಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿದೆ. ಆಕ್ಸಿಜನ್ ದುರಂತಕ್ಕೆ ಕಾರಣರಾದ ಅಧಿಕಾರಿಗಳಿಗೆ ಶಿಕ್ಷೆ ಆಗದೇ ಇರುವುದು ದುರಂತವೇ ಸರಿ. ಇನ್ನಾದರೂ ಸರ್ಕಾರ ಎಚ್ಚೆತ್ತು ಸಂತ್ರಸ್ತರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ, ದುರಂತಕ್ಕೆ ಕಾರಣರಾದ ಅಧಿಕಾರಿಗಳಿಗೆ ಶಿಕ್ಷೆಯಾಗಲಿ ಎಂದರು.

ಜಿಲ್ಲಾ ಅಂಬೇಡ್ಕರ್ ಸಂಘದ ಅಧ್ಯಕ್ಷ ಪಿ.ಸಂಘಸೇನ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿರುವುದು ಅಧಿಕಾರಿಗಳ ಕರ್ತವ್ಯ ಲೋಪದಿಂದ, ಇದು ಸರ್ಕಾರಿ ಯೋಜಿತ ಮಾರಣಹೋಮವಾಗಿದೆ. ಬಿಜೆಪಿಯ ಸರ್ಕಾರ ಈ ಬಗ್ಗೆ ಯಾವುದೇ ತನಿಖೆ ನಡೆಸದೆ ಪ್ರಕರಣವನ್ನು ಮುಚ್ಚಿ ಹಾಕುವ ಉದ್ದೇಶದಿಂದ ಮೃತಪಟ್ಟವರ ಅಂಕಿ-ಅಂಶಗಳನ್ನು ಕೂಡ ಮರೆಮಾಚಿದರು. ಆಗ ವಿರೋಧ ಪಕ್ಷದಲ್ಲಿದ್ದ ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಮರಾಜನಗರಕ್ಕೆ ಭೇಟಿ ಕೊಟ್ಟು ಈ ದುರಂತಕ್ಕೆ ಕಾರಣವಾದವರ ವಿರುದ್ಧ ಕ್ರಮ ಜರುಗಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ ಮತ್ತು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಂತ್ರಸ್ತರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುತ್ತೇವೆಂದು ಭರವಸೆ ನೀಡಿದ್ದರು. ಸರ್ಕಾರ ಅಧಿಕಾರಕ್ಕೆ ಬಂದು ೨ ವರ್ಷಗಳಾಗಿದ್ದರೂ ಸಂತ್ರಸ್ಥರಿಗೆ ಉದ್ಯೋಗ ನೀಡಿಲ್ಲ ಈ ಬಗ್ಗೆ ಸಂಸದ ಸುನೀಲ್ ಬೋಸ್ ಮತ್ತು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪರೊಂದಿಗೆ ನಮ್ಮ ಸಂಘಟನೆ ಚರ್ಚೆ ನಡೆಸಿದ್ದು, ಮುಂದಿನ ಕ್ಯಾಬಿನೆಟಿನಲ್ಲಿ ನ್ಯಾಯ ದೊರಕಿಸಿಕೊಡುವುದಾಗಿ ತಿಳಿಸಿದ್ದಾರೆ.

ಎಸ್‌ಡಿಪಿಐ ಪಕ್ಷದ ರಾಜ್ಯ ಸಮಿತಿ ಸದಸ್ಯ ಅಬ್ರಾರ್ ಅಹಮ್ಮದ್ ಮಾತನಾಡಿ, ನಮ್ಮ ಪಕ್ಷವು ಮೇ ೦೩ರಿಂದಲೂ ಈ ವರೆಗೂ ಸಂತ್ರಸ್ತರ ಜೊತೆ ಇದ್ದು, ಸಂತ್ರಸ್ತರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದೇ ನಮ್ಮ ಉದ್ದೇಶವಾಗಿದೆ. ಬೇಡಿಕೆ ಈಡೆರದಿದ್ದರೆ ನಮ್ಮ ಪಕ್ಷದ ವತಿಯಿಂದ ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಸಂತ್ರಸ್ತರ ಜೊತೆ ಅಮರಣಾಂತ ಉಪವಾಸ ಹಮ್ಮಿಕೊಳ್ಳುತ್ತೇವೆ ಎಂದರು.

ಈ ಪ್ರತಿಭಟನೆಯಲ್ಲಿ ಸಾಹಿತಿ ಸಿ.ಶಂಕರ ಅಂಕನಶೆಟ್ಟಿಪುರ, ಎಸ್.ಡಿ.ಪಿ.ಐ ಪಕ್ಷದ ಜಿಲ್ಲಾಧ್ಯಕ್ಷ ಖಲೀಲ್ ಉಲ್ಲಾ, ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯ ಮಹೇಶ್ ಗಾಳಿಪುರ, ನಗರಸಭಾ ಮಹಮ್ಮದ್ ಅಮೀಕ್, ಇಸ್ರಾರ್, ಸಂತ್ರಸ್ಥರಾದ ನಾಗರತ್ನ, ಸವಿತ, ರಮೇಶ್ ಬಾಬು, ಅರುಣ್, ಮನು, ನೇತ್ರ, ಸೌಮ್ಯ, ರಾಜಶೇಖರ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.