ಗುಬ್ಬಿವೀರಣ್ಣ ಪ್ರಶಸ್ತಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿ ಪಿ.ಬಿ.ಧುತ್ತರಗಿ ಅವರು ರಂಗಭೂಮಿಯ ಅನರ್ಘ್ಯ ರತ್ನ ಆಗಿದ್ದಾರೆ ಎಂದು ಹಿರಿಯ ಸಾಹಿತಿ ಹಾಗೂ ನಾಟಕಕಾರ ಅಶೋಕ ಪಿ.ಮಣಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಗುಬ್ಬಿವೀರಣ್ಣ ಪ್ರಶಸ್ತಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿ ಪಿ.ಬಿ.ಧುತ್ತರಗಿ ಅವರು ರಂಗಭೂಮಿಯ ಅನರ್ಘ್ಯ ರತ್ನ ಆಗಿದ್ದಾರೆ ಎಂದು ಹಿರಿಯ ಸಾಹಿತಿ ಹಾಗೂ ನಾಟಕಕಾರ ಅಶೋಕ ಪಿ.ಮಣಿ ಅಭಿಪ್ರಾಯಪಟ್ಟರು.ಮುದ್ದೇಬಿಹಾಳದ ಅರಿಹಂತಗಿರಿಯಲ್ಲಿರುವ ಅರಿಹಂತ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪಿ.ಬಿ.ಧುತ್ತರಗಿ ಟ್ರಸ್ಟ್ (ಸೂಳೇಭಾವಿ) ಬಾಗಲಕೋಟೆ ಮತ್ತು ಮುದ್ದೇಬಿಹಾಳ ಅರಿಹಂತ ಮಹಾವಿದ್ಯಾಲಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಕವಿ ಪಿ.ಬಿ.ಧುತ್ತರಗಿ ಅವರ ಮಲಮಗಳು ನಾಟಕ, ವಿದ್ಯಾರ್ಥಿಗಳಿಂದ ಓದು -ಪ್ರಬಂಧ ಬರಹ -ಸಂವಾದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಧುತ್ತರಗಿ ಅವರ ಬದುಕು -ಬರಹ ಕುರಿತು ಅವರು ಉಪನ್ಯಾಸ ನೀಡಿದರು.
ಶ್ರೇಷ್ಠ ನಾಟಕಕಾರರಾಗಿದ್ದ ಪುಂಡಲೀಕಪ್ಪ ಧುತ್ತರಗಿಯವರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದವರು. ಬಡತನದಲ್ಲಿ ಹುಟ್ಟಿ, ಬಡತನದಲ್ಲಿಯೇ ಬೆಳೆದು ಬಡತನವನ್ನೇ ಹೊದ್ದು ಜೀವನ ಸಾಗಿಸಿದವರು. ಆದರೆ ಅವರು ಬಡತನಕ್ಕೆ ಎಂದೂ ಅಂಜಿ ಬದುಕಿದವರಲ್ಲ. ಅವರಿಂದ ಸಾಮಾಜಿಕ, ಐತಿಹಾಸಿಕ ಪೌರಾಣಿಕ ನಾಟಕಗಳೂ ಸೇರಿದಂತೆ ಒಟ್ಟು ಶ್ರೇಷ್ಠ 63 ನಾಟಕಗಳು ರಚಿಸಲ್ಪಟ್ಟಿವೆ. ಅವರ ಬಹುತೇಕ ಸಾಮಾಜಿಕ ನಾಟಕಗಳು ಗ್ರಾಮೀಣ ಪ್ರದೇಶದ ಸಂಸ್ಕೃತಿ ಮೇಲೆ ಬೆಳಕು ಚೆಲ್ಲುತ್ತವೆ. ಅವರ ಸಂಪತ್ತಿಗೆ ಸವಾಲ್ ನಾಟಕ ಚಲನ ಚಿತ್ರವಾಗಿದೆ. ಇನ್ನೊಂದು ನಾಟಕ ಚಿಕ್ಕಸೊಸೆ ಸೊಸೆ ತಂದ ಸೌಭಾಗ್ಯವಾಗಿ ಮೊಟ್ಟಮೊದಲ ಸಿನೇಮಾಸ್ಕೋಪ ಚಲನಚಿತ್ರವಾಗಿ ಹೆಸರು ಮಾಡಿತು. ಅವರ ಎಲ್ಲ ನಾಟಕಗಳಲ್ಲಿ ಎಲ್ಲೂ ಅಶ್ಲೀಲ ಸಂಭಾಷಣೆಗಳ ಪದಬಳಕೆಗಳಾಗಿಲ್ಲ. ಅವರ ಮಲಮಗಳು ಅರ್ಥಾತ್ ಮುದುಕನ ಮದುವೆ ನಾಟಕ ರಂಗಭೂಮಿಯ ಮೇಲೆ ಒಂದು ಲಕ್ಷ ಪ್ರಯೋಗ ಕಂಡು ದಾಖಲೆ ನಿರ್ಮಿಸಿದೆ. ನಾಟಕಕಾರರಾಗಿ, ನಟರಾಗಿ, ನಿರ್ದೇಶಕರಾಗಿ ಹಾಗೂ ನಾಟಕ ಕಂಪನಿಯ ಮಾಲೀಕರಾಗಿ, ರಂಗಕರ್ಮಿಯಾಗಿ ಅವರು ರಂಗಭೂಮಿಗೆ ಸಲ್ಲಿಸಿದ ಸೇವೆ ಅನನ್ಯ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅರಿಹಂತ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಮಹಾವೀರ ಸಗರಿ, ಇತ್ತೀಚಿಗೆ ನಾಟಕ ಸಂಸ್ಕೃತಿಯೇ ಕಣ್ಮರೆಯಾಗುತ್ತಿವೆ. ಕರ್ನಾಟಕದ ಷೆಕ್ಸಪೀಯರ್ ಎಂದು ಖ್ಯಾತರಾಗಿದ್ದ ಪಿ.ಬಿ.ಧುತ್ತರಗಿ ಕವಿಗಳ ಜೀವನ ಚರಿತ್ರೆ ಪಠ್ಯಪುಸ್ತಕಗಳಲ್ಲಿ ಅಳವಡಿಸಿ ಮಕ್ಕಳಲ್ಲಿ ಅಂತಹ ಮಹಾಪರುಷರ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಸರ್ಕಾರ ಮಾಡಬೇಕೆಂದರು.
ಧುತ್ತರಗಿ ಟ್ರಸ್ಟಿನ ಅಧ್ಯಕ್ಷ ಎಸ್ಕೆ ಕೊನೆಸಾಗರ ಅಧ್ಯಕ್ಷತೆ ವಹಿಸಿ, ಧುತ್ತರಗಿಯವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸುವುದು, ಅವರ ನಾಟಕಗಳಲ್ಲಿ ಅಡಕವಾಗಿರುವ ಬದುಕಿನ ಮೌಲ್ಯಗಳನ್ನು ಇಂದಿನ ನವಪೀಳಿಗೆಗೆ ತಿಳಿಸಿ ಕೊಡುವುದರೊಂದಿಗೆ, ಅಳಿವಿನಂಚಿನಲ್ಲಿರುವ ನಾಟಕ ಸಂಸ್ಕೃತಿ ಪುನರುಜ್ಜೀವನಗೊಳಿಸುವ, ರಂಗಭೂಮಿ ಕಲೆ ಬೆಳೆಸುವ, ನಾಟಕ ತರಬೇತಿಗಳನ್ನು ಆಯೋಜಿಸುವ, ಹತ್ತು ಹಲವಾರು ಯೋಜನೆಗಳನ್ನು ಟ್ರಸ್ಟ್ ಹೊಂದಿದೆ ಎಂದರು.ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಾಹಿತಿ ಪ್ರೊ.ಬಿ.ಎಂ.ಹಿರೇಮಠ ಹಾಗೂ ಮುದ್ದೇಬಿಹಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ ಮಾತನಾಡಿದರು. ವೇದಿಕೆ ಮೇಲೆ ಧುತ್ತರಗಿ ಟ್ರಸ್ಟಿನ ಸದಸ್ಯ ಸಂಚಾಲಕ ಚಂದ್ರಕಾಂತ ವಂದಕುದರಿ, ಪದಾಧಿಕಾರಿಗಳಾದ ಚಿದಾನಂದ ಧೂಪದ, ಸಿದ್ಧಲಿಂಗಪ್ಪ ಬೀಳಗಿ, ಡಾ.ಸಿತಿಮಾ, ಸುನಂದಾ ಕಂದಗಲ್ಲ ಉಪಸ್ಥಿತರಿದ್ದರು.
ಧುತ್ತರಗಿಯವರ ಮಲಮಗಳು ನಾಟಕ ಕುರಿತು ಪದವಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ರಚನೆ ಹಾಗೂ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡೂ ಸ್ಪರ್ಧೆಗಳಲ್ಲಿ ರೂಪಾ ಬಳಗಾನೂರ ಪ್ರಥಮ ಸ್ಥಾನ ಹಾಗೂ ಎರಡೂ ಸ್ಪರ್ಧೆಗಳಲ್ಲಿ ಶ್ರೀನಿವಾಸ ಅಂಬಿಗೇರ ದ್ವಿತೀಯ ಸ್ಥಾನ ಪಡೆದು ಬಹುಮಾನ ಮತ್ತು ಪ್ರಶಸ್ತಿಪತ್ರಗಳನ್ನು ತಮ್ಮದಾಗಿಸಿಕೊಂಡರು.ಕಾರ್ಯಕ್ರಮದಲ್ಲಿ ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ನಾಲತವಾಡ, ಬಸವ ಮಹಾಮನೆಯ ಅಧ್ಯಕ್ಷ ಬಿ.ವ್ಹಿ.ಕೋರಿ, ನಿವೃತ್ತ ಪ್ರಾಚಾರ್ಯ ಬಾಪುಗೌಡ ಪಾಟೀಲ್, ನಿವೃತ್ತ ಎ.ಎಸ್.ಐ.ಬಸವರಾಜ ಲಿಂಗದಳ್ಳಿ, ಉಪನ್ಯಾಸಕಿ ಅಕ್ಷತಾ ವಿಪುಲ್ ಸಗರಿ ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಮಧು ಕನ್ನೊಳ್ಳಿ ಪ್ರಾರ್ಥಿಸಿ, ಉಪನ್ಯಾಸಕ ಎಚ್.ಎಸ್.ಗೌಡರ ಸ್ವಾಗತಿಸಿ, ಉಪನ್ಯಾಸಕ ಆರ್.ಪಿ.ನಲವಡೆ ವಂದಿಸಿ, ಉಪನ್ಯಾಸಕ ಬಸವರಾಜ ಬಡಿಗೇರ ನಿರೂಪಿಸಿದರು.