ಪ.ಜಾತಿ, ಪಂಗಡದವರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು: ಎ.ಸಿ.ಶ್ರೀನಿವಾಸ್

| Published : Dec 09 2024, 12:45 AM IST

ಪ.ಜಾತಿ, ಪಂಗಡದವರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು: ಎ.ಸಿ.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಹಂರಾಜಪುರ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಶೃಂಗೇರಿ ಕ್ಷೇತ್ರ ಮಟ್ಟದ ಶ್ರೀಮಹರ್ಷಿ ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ಎ.ಸಿ.ಶ್ರೀನಿವಾಸ್ ಹೇಳಿದರು.

ಕೆ.ಕಣಬೂರು ಗ್ರಾಮದಲ್ಲಿ ಬಿ.ಆರ್.ಅಂಬೇಡ್ಕರ್ ಮಹಿಳಾ ಸಂಘದ ಪದಗ್ರಹಣ

ಕನ್ನಡಪ್ರಭ ವಾರ್ತೆ, ನರಸಿಹಂರಾಜಪುರ

ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಶೃಂಗೇರಿ ಕ್ಷೇತ್ರ ಮಟ್ಟದ ಶ್ರೀಮಹರ್ಷಿ ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ಎ.ಸಿ.ಶ್ರೀನಿವಾಸ್ ಹೇಳಿದರು.

ಭಾನುವಾರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಕೆ.ಕಣಬೂರು ಗ್ರಾಮದಲ್ಲಿ ಶೃಂಗೇರಿ ಕ್ಷೇತ್ರ ಮಟ್ಟದ ಶ್ರೀಮಹರ್ಷಿ ವಾಲ್ಮೀಕಿ ನಾಯಕರ ಸಂಘದಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಮಹಿಳಾ ಸಂಘದ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಅನುಕೂಲವಾಗುವ, ವಿವಿಧತೆಯಲ್ಲಿ ಏಕತೆ ಮೂಡಿಸುವ ದೃಷ್ಟಿಯಿಂದ ಪ್ರತಿ ಯೊಬ್ಬರಿಗೂ ಮತದಾನದ ಹಕ್ಕು ನೀಡಿದರು. ದಲಿತಾ ಮಹಿಳಾ ಸಂಘಟನೆಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ನಿಗಮದಿಂದ ಜಾರಿಗೊಳಿಸಬೇಕು. ಗ್ರಾಪಂ ಮಟ್ಟದಲ್ಲಿ ಶೇ.25 ರ ಅನುದಾನದಲ್ಲಿ ದಲಿತ ಮಹಿಳಾ ಸಂಘಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ದಲಿತರ ಮೇಲೆ ದೌರ್ಜನ್ಯ ನಡೆದಾಗ ಕಾನೂನಾತ್ಮಕವಾಗಿ ಹೋರಾಟಮಾಡಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ನಿರಂಜನಗೌಡ ಮಾತನಾಡಿ, ದಲಿತ ಸಮುದಾಯದ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದ್ದರೆ ಪೊಲೀಸ್ ಠಾಣೆಗೆ ಬಂದು ನೇರವಾಗಿ ದೂರು ನೀಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಂಡು ನ್ಯಾಯ ಒದಗಿಸಲಾಗುವುದು. ಫೋಕ್ಸೊ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಮೊಬೈಲ್ ಬಳಕೆ ಮಾಡದಂತೆ ಪೋಷಕರು ತಿಳಿಹೇಳಬೇಕು ಎಂದರು.

ಜಿಪಂ ಮಾಜಿ ಸದಸ್ಯ ಬಿ.ಎಸ್.ಸುಬ್ರಹ್ಮಣ್ಯ ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರಿಗೆ ಹೆಚ್ಚಿನ ಸ್ಥಾನ ಮಾನ ಲಭಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳನ್ನು, ಸಂವಿಧಾನದಲ್ಲಿ ಪ್ರತಿಪಾದಿಸಲ್ಪಟ್ಟ ವಿಚಾರಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಡಿ.ರಾಮು ಮಾತನಾಡಿ, ಮಹಿಳಾ ಸಂಘಗಳನ್ನು ಸ್ಥಾಪಿಸುವುದರಿಂದ ದಲಿತ ಮಹಿಳೆ ಯರು ಸಂಘಟಿತರಾಗಿ ಅನ್ಯಾಯದ ವಿರುದ್ಧ ಹೋರಾಟ ಮಾಡಲು ಸಾಧ್ಯವಾಗುತ್ತದೆ ಎಂದರು.

ತಾಲೂಕು ಭೀಮ್ ಆರ್ಮಿ ಘಟಕದ ಅಧ್ಯಕ್ಷ ನಾಗರಾಜ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ಬರೆಯ ದಿದ್ದರೆ ಶೋಷಿತರು ಮತ್ತು ದಲಿತರಿಗೆ ಸಮಾಜದಲ್ಲಿ ಸ್ಥಾನಮಾನವೇ ಇರುತ್ತಿರಲಿಲ್ಲ ಎಂದರು.

ಮುತ್ತಿನಕೊಪ್ಪ ಗ್ರಾಪಂ ಸದಸ್ಯರಾದ ರಜಿನಿ, ಡೆನ್ನಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎನ್.ಎಂ. ಕಾಂತರಾಜ್, ಮುಖಂಡ ಬಸಪ್ಪ ಮತ್ತಿತರರಿದ್ದರು. ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯ ಮಹಿಳೆ ಕೊರಗಮ್ಮ ಅವರನ್ನು ಸನ್ಮಾನಿಸಲಾಯಿತು. ನೂತನ ಪದಾಧಿಕಾರಿಗಳು: ಡಾ.ಅಂಬೇಡ್ಕರ್ ಮಹಿಳಾ ಸಂಘದ ನೂತನ ಅಧ್ಯಕ್ಷೆಯಾಗಿ ರೇಖಾ, ಉಪಾಧ್ಯಕ್ಷೆ ಗಾಯಿತ್ರಿ, ಕಾರ್ಯದರ್ಶಿ ರಂಜಿತಾ ಹಾಗೂ ಎಂಟು ಜನ ಸದಸ್ಯರು ಅಧಿಕಾರ ಸ್ವೀಕಾರ ಮಾಡಿದರು.