ಸಂಬಂಧಪಟ್ಟ ದಾಖಲೆಗಳನ್ನು ದೊರಕಿಸುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೇ ಮತುವರ್ಜಿವಹಿಸಿ, ಒಂದು ತಿಂಗಳ ಒಳಗೆ ಈ ಪ್ರಕರಣ ಇತ್ಯರ್ಥ ಪಡಿಸುವಂತೆ ಸೂಚಿಸಿದರು.
ಜಿಲ್ಲಾಮಟ್ಟದ ಜಾಗೃತಿ, ಉಸ್ತುವಾರಿ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ ಕಾರವಾರಜಿಲ್ಲೆಯ ಎಲ್ಲಾ ಉಪ ವಿಭಾಗ ಮಟ್ಟದಲ್ಲಿ ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ಜಾಗ್ರತ ಮತ್ತು ಉಸ್ತುವಾರಿ ಸಮಿತಿ ಸಭೆಗಳನ್ನು ನಡೆಸಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸಮಸ್ಯೆಗಳನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ತಕ್ಷಣ ಪರಿಹಾರ ವಿತರಣೆ ಮಾಡುವಂತೆ ಸೂಚಿಸಿದ ಅವರು, ದೌರ್ಜನ್ಯ ಪ್ರಕರಣದಲ್ಲಿ ಮೃತಪಟ್ಟಿರುವ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ದಾಖಲೆಗಳ ಕೊರತೆಯಿಂದ ಅನುಕಂಪ ಆಧಾರದ ನೌಕರಿ ನೀಡುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸಂಬಂಧಪಟ್ಟ ದಾಖಲೆಗಳನ್ನು ದೊರಕಿಸುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೇ ಮತುವರ್ಜಿವಹಿಸಿ, ಒಂದು ತಿಂಗಳ ಒಳಗೆ ಈ ಪ್ರಕರಣ ಇತ್ಯರ್ಥ ಪಡಿಸುವಂತೆ ಸೂಚಿಸಿದರು.ಜಿಲ್ಲಾ ಜಾಗ್ರತ ಮತ್ತು ಉಸ್ತುವಾರಿ ಸಮಿತಿ ಸದಸ್ಯರಿಗೆ ಗುರುತಿನ ಚೀಟಿ ನೀಡುವಂತೆ, ಸುಳ್ಳು ಅಟ್ರಾಸಿಟಿ ಪ್ರಕರಣ ದಾಖಲು ಮಾಡುವ ಬಗ್ಗೆ ಜಾಗೃತಿ ಮೂಡಿಸುವಂತೆ, ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯುವಂತೆ, ಗ್ರಾಪಂಗಳಲ್ಲಿ ಮೀಸಲಿರುವ ಶೇ. 2ರ ಅನುದಾನದಲ್ಲಿ ಉತ್ತಮ ಗುಣಮಟ್ಟದ ಕ್ರೀಡೋಪಕರಣಗಳನ್ನು ನೀಡುವ ಬಗ್ಗೆ, ಅಲೆಮರಿ ಜನಾಂಗದವರಿಗೆ ಪಿ.ಎಂ. ಸ್ವನಿಧಿಯಲ್ಲಿ ಸಾಲ ವಿತರಿಸುವ ಬಗ್ಗೆ, ಶಿರಸಿ ಜಾತ್ರೆಯಲ್ಲಿ ಹಕ್ಕಿಪಿಕ್ಕಿ ಜನಾಂಗದವರಿಗೆ ವ್ಯಾಪಾರ ಮಾಡಲು ಜಾಗ ಮೀಸಲಿಡುವಂತೆ, ದಲಿತರ ಜಮೀನುಗಳನ್ನು ಕಾನೂನುಬಾಹಿರವಾಗಿ ಖರೀದಿ ಮಾಡಿರುವವರ ಬಗ್ಗೆ ಕ್ರಮ ಕೈಗೊಳ್ಳುವುದು, ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಗೆ ಆಶ್ರಯ ಯೋಜನೆಯಡಿ ಮನೆ ಮಂಜೂರು ಮಾಡುವುದು ಮತ್ತಿತರ ಸಮಸ್ಯೆಗಳ ಬಗ್ಗೆ ಜಾಗ್ರತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು ಸಭೆಯ ಗಮನಕ್ಕೆ ತಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್ ಹಾಗೂ ಸಮಿತಿಯ ಸದಸ್ಯರಾದ ವಿಶ್ವನಾಥ ಹೆಗಡೆ ಕೂಜಳ್ಳಿ, ಮಾರುತಿ ನಿಂಗಪ್ಪ ಗವಾಡಿ, ರಾಘವೇಂದ್ರ ಜಟ್ಟಿ ಮುಕ್ರಿ, ಫಾತಿಂಬಿ ಫ. ಮಾಂಡೇಕರ, ಸುಭಾಷ ಈಶ್ವರ ನಾಯ್ಕ, ಸುರೇಶ ಕೃಷ್ಣ ಸಿದ್ದಿ, ರವಿಕುಮಾರ್ ಮಾಳಕರಿ ಇದ್ದರು.