ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಕವಿ ಪು.ತಿ.ನರಸಿಂಹಚಾರ್ (ಪುತಿನ) ರಚಿಸಿದ ಸಾಹಿತ್ಯಗಳಿಗೆ ಸಮಾಜವನ್ನು ಬದಲಿಸುವ, ಭಾವನೆಗಳನ್ನು ಅರಳಿಸುವ ಹಾಗೂ ಕೆರಳಿಸುವ ಶಕ್ತಿ ಇದೆ. ಯುವ ಪೀಳಿಗೆ ಸಾಹಿತ್ಯಾಸಕ್ತರಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕರೆ ನೀಡಿದರು.ಇಲ್ಲಿನ ಪು.ತಿ.ನ ಕಲಾಮಂದಿರದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪು.ತಿ.ನ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಪು.ತಿ.ನ ಪುಣ್ಯಸ್ಮರಣೆ ಹಾಗೂ ಕಾಲೇಜುಗಳಲ್ಲಿ ಡಾ.ಪು.ತಿ.ನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಜಿಲ್ಲೆ ನೆಲ, ಜಲ, ಸಂಸ್ಕೃತಿ ಜತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಹೆಸರು ವಾಸಿಯಾಗಿದೆ. ಪು.ತಿ.ನ., ಕೆ.ಎಸ್.ನರಸಿಂಹಸ್ವಾಮಿ ಸೇರಿದಂತೆ ಅನೇಕ ದಿಗ್ಗಜರು ನೀಡಿರುವ ಕೊಡುಗೆ ಅಪಾರ. ಸಾಹಿತಿಗಳಿಲ್ಲದೇ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸೇರಿ ಎಲ್ಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಯಲ್ಲಿ ಸಾಹಿತ್ಯ ಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ. ಸಮಾಜದಲ್ಲಿನ ಸಮಸ್ಯೆಗಳನ್ನು ಲೇಖನ ಹಾಗೂ ಕೃತಿಗಳ ಮೂಲಕ ಜನರಿಗೆ ತಿಳಿಸುವ ಕಾರ್ಯವನ್ನು ಸಾಹಿತಿಗಳು ಮಾಡುತ್ತಿದ್ದಾರೆ. ಸಾಹಿತಿಗಳಿಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಪು.ತಿ.ನ. ಮತ್ತು ದ.ರಾ.ಬೇಂದ್ರೆ , ಕುವೆಂಪು ರವರ ಸಾಹಿತ್ಯಗಳು ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿ ದೀಪವಾಗಿದೆ. ಪ್ರಜಾಪ್ರಭುತ್ವದ ಉಳಿವಿಗೆ ಯುವ ಸಮುದಾಯ ಪಾತ್ರ ಬಹುಮುಖ್ಯ. ಮುಂದಿನ ದಿನಗಳಲ್ಲಿ ಪು.ತಿ.ನ ಟ್ರಸ್ಟ್ ಹಾಗೂ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಗಳ ಸಮಗ್ರ ಅಭಿವೃದ್ಧಿಪಡಿಸುತ್ತೇನೆ ಎಂದರು.ಪು.ತಿ.ನ. ಟ್ರಸ್ಟ್ ಅಧ್ಯಕ್ಷ ಪ್ರೊ.ಕೃಷ್ಣೇಗೌಡರು ಮಾತನಾಡಿ. ಉತ್ತಮ ನಿರ್ಮಾಣಕ್ಕೆ ಸಮಾಜದಲ್ಲಿ ರಾಜಕಾರಣಿಗಳು, ಅಧಿಕಾರಿಗಳ ಸಾರ್ವಜನಿಕರ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಸಾಹಿತಿಗಳ ಪಾತ್ರವೂ ಬಹುಮುಖ್ಯವಾಗಿದೆ ಎಂದು ಹೇಳಿದರು.
ಸರ್ಕಾರ ಪು.ತಿ.ನ. ಮನೆ ಹಾಗೂ ಅವರ ಹೆಸರಿನಲ್ಲಿ ಟ್ರಸ್ಟ್ ರಚಿಸಿ ಜತೆಗೆ ಹುಟ್ಟೂರು ಮೇಲುಕೋಟೆಯಲ್ಲಿ ಭವ್ಯವಾದ ಕಲಾಮಂದಿರ ನಿರ್ಮಿಸಿದೆ. ಆದರೆ, ಅವರ ಅಂತ್ಯಸಂಸ್ಕಾರ ಸ್ಥಳ ಕಸದ ತೊಟ್ಟಿಯಾಗಿದೆ. ಬಯಲು ಕಲಾಮಂದಿರಕ್ಕೆ ಮೇಲ್ಛಾವಣಿ ವ್ಯವಸ್ಥೆ ಕಲ್ಪಿಸಿಕೊಡಬೇಕು. ಪು.ತಿ.ನ. ಕೃತಿ, ನಾಟಕಗಳನ್ನು ಆಡಿಯೋ ಹಾಗೂ ಡಿಜಿಟಲೀಕರಣ ಮಾಡಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ್ರು, ಕಸಾಪ ಮಾಜಿ ಅಧ್ಯಕ್ಷೆ ಮೀರಾಶಿವಲಿಂಗಯ್ಯ, ಕೈ ಮಗ್ಗ ನಿಗಮದ ಅಧ್ಯಕ್ಷ ನಾಗೇಂದ್ರ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಗ್ರಾಪಂ ಅಧ್ಯಕ್ಷೆ ಭವಾನಿ ಹರಿಧರ್, ಉಪವಿಭಾಗಧಿಕಾರಿ ಶ್ರೀನಿವಾಸ್, ಕಸಾಪ ತಾಲೂಕು ಅಧ್ಯಕ್ಷ ಪ್ರಕಾಶ್ ಮೇನಾಗ್ರ , ನಂದೀಶ್ ಪಾಲ್ಗೊಂಡಿದ್ದರು.
;Resize=(128,128))
;Resize=(128,128))